ಬೆಲೆ ಏರಿಕೆ ಮತ್ತು ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ.

ಬೆಂಗಳೂರು,ಸೆಪ್ಟಂಬರ್,5,2022(www.justkannada.in):  ಬೆಲೆ ಏರಿಕೆ  ಮತ್ತು ಮಹಿಳೆ ಮೇಲೆ ದರ್ಪ ತೋರಿದ ಶಾಸಕ ಅರವಿಂದ ಲಿಂಬಾವಳಿ  ವಿರುದ್ದ  ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಪ್ರತಿಕೃತಿ  ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಅತ್ಯಂತ ಕೆಟ್ಟ ಪದ ಬಳಸಿರುವ ಅರವಿಂದ್ ಲಿಂಬಾವಳಿ ಕೂಡಲೇ ಮಹಿಳೆಯ ಬಳಿ ಕ್ಷಮೆ ಕೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಡಾ.ಪುಷ್ಪ ಅಮರನಾಥ್, ಜನಪ್ರತಿನಿಧಿಯಾದ ಅರವಿಂದ್ ಲಿಂಬಾವಳಿ ಬಳಿ ಜನರು ಸಂಕಷ್ಟವನ್ನು ತಿಳಿಸಲು ಬಂದರೆ ಅವರ ವಿರುದ್ಧವೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಗೆ ಬೆದರಿಕೆ  ಹಾಕಿದ್ದಾರೆ. ಇದು ಭೇಟಿ ಬಚಾವೋ ನಾ? ಅಥವಾ ಭೇಟಿ ಡರಾವೋ ನಾ ? ಇವರಂತಹ ಜನಪ್ರತಿನಿಧಿಗಳು ರಾಜ್ಯಕ್ಕೆ ಬೇಕೆ  ? ಕೂಡಲೇ ಶಾಸಕ ಲಿಂಬಾವಳಿ ಮಾಧ್ಯಮಗಳ ಮುಂದೆ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಇಂತಹ ಅನಾಗರಿಕತೆಯಿಂದ ವರ್ತಿಸಿರುವ ಬಿಜೆಪಿ ಶಾಸಕನನ್ನು ಬಿಜೆಪಿ ಕೂಡಲೇ ಅವರನ್ನು ವಜಾ ಮಾಡಬೇಕು. ಎಂದು ಒತ್ತಾಯಿಸಿದರು.

ಬಳಿಕ ಮಹಿಳಾ ಕಾಂಗ್ರೆಸ್ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.  ದಕ್ಷಿಣ ಬೆಂಗಳೂರು ಜಿಲ್ಲಾಧ್ಯಕ್ಷೆ ಜೈಯಶ್ರೀ, ರಾಜ್ಯ ಪದಾಧಿಕಾರಿಗಳಾದ ಸುಮತಿ, ರಾಧಾ, ಆಸ್ಮಾ,  ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು ಹಾಗೂ ವಾರ್ಡ್ ಅಧ್ಯಕ್ಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Key words: Protest – KPCC -women’s- unit- against- price hike – MLA -Arvind Limbavali.