ನಾಳೆ ಕೆಪಿಸಿಸಿ ವತಿಯಿಂದ ಪ್ರತಿಭಟನೆ: ಅನ್ನಭಾಗ್ಯ ಅಕ್ಕಿ ಹಣ ಬಿಜೆಪಿಯವರ ಅಪ್ಪನ ಮನೆಯದಲ್ಲ ಎಂದು ಕಿಡಿಕಾರಿದ ದಿನೇಶ್ ಗುಂಡೂರಾವ್…

ಬೆಂಗಳೂರು, ನ,3,2019(www.justkannada.in):  ಅಪರೇಷನ್ ಕಮಲ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಡಿಯೋ ಪ್ರಕರಣವನ್ನ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕಿದೆ. ಹೀಗಾಗಿ ನಾಳೆ ಕೆಪಿಸಿಸಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್, ಅಪರೇಷನ್ ಕಮಲ ವಿರೋಧಿಸಿ ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕೆಪಿಸಿಸಿಯಿಂದ ಸೂಚನೆ ನೀಡಲಾಗಿದೆ.  ಜತೆಗೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಫಂದ ವಿರೋಧಿಸಿ ನಾಳೆಯಿಂದ ನವೆಂಬರ್ 15ರವರೆಗೆ ಪ್ರತಿಭಟನೆ ನಡೆಸಲಾಗುತ್ತದೆ. ನಾಳೆ ಕೆಪಿಸಿಸಿ ಕಿಶಾನ್  ಘಟಕದಿಂದ ರೈಲು ತಡೆ ನಡೆಸಲು ತೀರ್ಮಾನಿಸಲಾಗಿದೆ. ನವೆಂಬರ್ 11ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಹಾಗೆಯೇ ಅನ್ನಭಾಗ್ಯ ಯೋಜನೆಗೆ ಕೇಂದ್ರ ಅನುದಾನ ಕೊಡುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಹರಿಹಾಯ್ದ ದಿನೇಶ್ ಗುಂಡೂರಾವ್, ಅನ್ನಭಾಗ್ಯದ ಹಣ ಬಿಜೆಪಿಯವರ ಅಪ್ಪನಮನೆಯದಲ್ಲ. ಮೋದಿ ಕೊಡುವುದು ಅವರ ಅಪ್ಪನ ಮನೆಯದಲ್ಲ. ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದು ಯಾರು..? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಮಾತುಗಳನ್ನಾಡಬಾರದು ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

Key words: Protest – KPCC- tomorrow-Dinesh Gundurao -bangalore