ಆರ್ ಸಿಇಪಿ  ವಿರೋಧಿಸಿ ಕೇಂದ್ರದ ವಿರುದ್ದ ಕೆಪಿಸಿಸಿ ಕಿಸಾನ್ ಘಟಕದಿಂದ ಪ್ರತಿಭಟನೆ: ರೈಲು ಮುತ್ತಿಗೆಗೆ ಯತ್ನ…

ಬೆಂಗಳೂರು,ನ,4,2019(www.justkannada.in): ಆರ್ ಸಿಇಪಿ ಒಪ್ಪಂದಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿ ಕೆಪಿಸಿಸಿ ಕಿಸಾನ್ ಘಟಕದ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಕಾರ್ಯಕರ್ತರು ರೈಲು ಮುತ್ತಿಗೆ ಹಾಕಲು ಯತ್ನಿಸಿದರು.

ಆರ್ ಸಿಇಪಿ ಒಡಂಬಡಿಕೆಗೆ ಕೇಂದ್ರದ ನಿರ್ಧಾರವನ್ನ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ನೇತೃತ್ವದಲ್ಲಿ ಕೆಪಿಸಿಸಿ ಕಿಸಾನ್ ಘಟಕದಿಂದ ರೈಲ್ ರೊಲೋ ಚಳುವಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು  ಕೆಪಿಸಿಸಿಯಿಂದ ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣವರೆಗೆ ಪಾದಯಾತ್ರೆಯಲ್ಲಿ ಬಂದು ರೈಲು ಮುತ್ತಿಗೆ ಹಾಕಲು ಯತ್ನಿಸಿದರು. ಇದರಿಂದಾಗಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಗದ್ದಲ ಉಂಟಾಗಿದ್ದು, ಪೊಲೀಸರು ರೈಲು ನಿಲ್ದಾಣದ ಗೇಟ್ ಕ್ಲೋಸ್ ಮಾಡಿದರು,

ಇನ್ನು ಪ್ರತಿಭಟನಾಕಾರರು ಗೇಟ್ ಬಾಗಿಲ ಮುಂದೆಯೇ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ , ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು. ರೈತರನ್ನ ಹಾಗೆ ಮಾಡ್ತೀವಿ, ಹೀಗೆ ಮಾಡ್ತೀವಿ ಅಂದ್ರು. ಆದ್ರೆ ಈಗ ಮಾಡ್ತಿರೋದು ಏನು..? ಜಪಾನ್,ಕೊರಿಯಾ ಜೊತೆ ಮುಕ್ತವ್ಯಾಪಾರಕ್ಕೆ ಹೊರಟಿದೆ. ಸಹಿ ಹಾಕಿ ರೈತರನ್ನ ಬಲಿಕೊಡಲು ಹೊರಟಿದೆ. ಈಗಲೇ ರೈತರ ಸಂಕಷ್ಟದಲ್ಲಿದ್ದಾನೆ. ರಾಜ್ಯ ಪ್ರವಾಹ, ಬರದಿಂದ ತತ್ತರಿಸುತ್ತಿದೆ. ಇಂತ ಸಂದರ್ಭದಲ್ಲೇ ಈ ನೀತಿಗೆ ಒಪ್ಪಿದರೆ ಹೇಗೆ? ಎಂದು ಪ್ರಶ್ನಿಸಿದರು.

ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಸಹಿಯಾಕಬಾರದು. ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತದೆ. ಅಡಿಕೆ, ತೆಂಗು, ಟಮೋಟಾ, ಸಾಂಬಾರ್ ಪದಾರ್ಥ ಹಾಲಿನ ಬೆಲೆಯೂ ಕುಸಿಯಲಿದೆ. 10 ಕೋಟಿ ಹಾಲು ಉತ್ಪಾದಕರು ಕಷ್ಟಕ್ಕೆ ಸಿಲುಕ್ತಾರೆ. ಗುಜರಾತ್ ನಂತರ ನಮ್ಮ ರಾಜ್ಯವೇ ಪ್ರಮುಖ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಒಪ್ಪಂದ ಆದ್ರೆ ರೈತರು ಬೀದಿಗೆ ಬೀಳ್ತಾರೆ. ಪ್ರಧಾನಿ ಮೋದಿಗೂ ಇದೇ ಬೇಕಾಗಿದೆ. ರೈತರನ್ನ ಬೀದಿಗೆ ಹಾಕಲು ಹೊರಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.

Key words: Protest – KPCC- Kisan unit- against- Center-  RCEP