ಮೈಸೂರು,ಸೆಪ್ಟಂಬರ್,16,2026 (www.justkannada.in): ಸಾಲ ನೀಡದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಎಂಡಿಸಿಸಿ ಬ್ಯಾಂಕ್ ಕಾರ್ಯವೈಖರಿ ವಿರುದ್ದ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. 
ಎಂಡಿಸಿಸಿ ಬ್ಯಾಂಕ್ ಮುಂದೆ ಪಿರಿಯಾಪಟ್ಟಣ- ಹುಣಸೂರು ರೈತರು ಪ್ರತಿಭಟನೆ ನಡೆಸಿದ್ದು, ಧರಣಿಯಲ್ಲಿ ಹುಣಸೂರು ಶಾಸಕ ಜಿ.ಡಿ ಹರೀಶ್ ಗೌಡ, ಮಾಜಿ ಶಾಸಕ ಕೆ. ಮಹದೇವ್, ಮೈಮೂಲ್ ಮಾಜಿ ಅಧ್ಯಕ್ಷ ಪ್ರಸನ್ನ ಸೇರಿ ಹಲವರು ಭಾಗಿಯಾಗಿದ್ದರು.
ಸಾಲ ನೀಡದ ಎಂಡಿಸಿಸಿ ಬ್ಯಾಂಕ್ ಕಾರ್ಯವೈಖರಿಗೆ ಬೇಸತ್ತು ರೈತರೊಬ್ಬರು ಶಾಸಕ ಜಿಡಿ ಹರೀಶ್ ಗೌಡ ಮುಂದೆಯೇ ವಿಷ ಕುಡಿಯಲು ಯತ್ನಿಸಿದ ಘಟನೆ ನಡೆಯಿತು. ಪಿರಿಯಾಪಟ್ಟಣ ಭಾಗದ ರೈತರಿಗೆ ಎಂಡಿಸಿಸಿ ಬ್ಯಾಂಕ್ ಸಾಲ ನೀಡುತ್ತಿಲ್ಲ. ಸಹಕಾರ ನೀಡಬೇಕಾದ ಬ್ಯಾಂಕ್ ಪಿರಿಯಾಪಟ್ಟಣದ ಶಾಸಕರ ಕೈ ಗೊಂಬೆಯಾಗಿದೆ. ಕಾಲ ಕಾಲಕ್ಕೆ ಸಾಲ ಮರುಪಾವತಿ ಮಾಡಿದರೂ ನಮಗೆ ಸಾಲ ಕೊಡುತ್ತಿಲ್ಲ. ತಾಳಿ ಮಾರಿ ನಾವು ಸಾಲ ಕಟ್ಟಿದ್ದೀವಿ. ನಾವು ಬ್ಯಾಂಕ್ ಸಾಲವನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದೇವೆ. ಈಗ ಸಾಲ ನೀಡದೇ ಬ್ಯಾಂಕ್ ಸಿಬ್ಬಂದಿಗಳು ಆಟ ಆಡಿಸುತ್ತಿದ್ದಾರೆ. ನಮಗೆ ಸಾಲ ನೀಡದೇ ಹೋದರೆ ವಿಷ ಕುಡಿದು ಸಾಯುತ್ತೇವೆ ಎಂದು ಪ್ರತಿಭಟನೆಯಲ್ಲಿ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.







