‘ಪ್ರಿಯ ಗಾಂಧಿ’ ಕೃತಿ ಬಿಡುಗಡೆ: ಗಾಂಧಿ ದೃಷ್ಟಿಕೋನ ಹೊಂದಿದ ಭಾಗ್ಯ ಯೋಜನೆಗಳು- ಡಾ. ಆರ್. ಸುನಂದಮ್ಮ

ಬೆಂಗಳೂರು,ಜನವರಿ,31,2026 (www.justkannada.in): ಸರ್ಕಾರ ನೀಡುತ್ತಿರುವ ಭಾಗ್ಯಗಳನ್ನು ಮಹಿಳಾ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ ಅವರು ಅಭಿಪ್ರಾಯಪಟ್ಟರು.

ಬಹುರೂಪಿ ಪ್ರಕಾಶನ ಹೊಸತು ಅಂಗಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ಆರ್. ಸುನಂದಮ್ಮ ಅವರು  ಹಿರಿಯ ಪತ್ರಕರ್ತ ಚೀ ಜ ರಾಜೀವ ಅವರ ‘ಪ್ರಿಯ ಗಾಂಧಿ..’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸರ್ಕಾರದ ಭಾಗ್ಯಗಳನ್ನು ಟೀಕಿಸುವ ಮನಸ್ಸುಗಳ ಬೇರೆ. ಭಾಗ್ಯಗಳನ್ನು ಕೊಡುಗೆಯಾಗಿ ನೋಡದೆ ಅದನ್ನು ಪರ್ಯಾಯ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯವಿದೆ. ಮಹಿಳಾ ಸಬಲೀಕರಣಕ್ಕೆ ಅದು ನೀಡಿರುವ ಕೊಡುಗೆ ದೊಡ್ಡದು. ಇದು ಗಾಂಧಿ ದೃಷ್ಟಿಕೋನವನ್ನು ಹೊಂದಿದೆ ಎಂದರು.

ಮುಖ್ಯ ಅತಿಥಿ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರು ಮಾತನಾಡಿ, ಗಾಂಧಿ ಜಾಗತಿಕವಾಗಿ ಹರಡಿರುವ ರೀತಿ ನಮ್ಮೆಲ್ಲರಿಗೂ ಪಾಠವಾಗಬೇಕು. ನಿಜ ಅರ್ಥದಲ್ಲಿ ಅವರೇ ವಿಶ್ವ ಗುರು. ಪ್ರಿಯ ಗಾಂಧಿ ಕೃತಿಯಲ್ಲಿ ನಾವು ಮನಗಾಣಬೇಕಾದ, ಚರ್ಚಿಸಬೇಕಾದ ಹಲವು ವಿಷಯಗಳನ್ನು ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ‘ವಿಜಯ ಕರ್ನಾಟಕ’ದ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಅವರು ಮಾತನಾಡಿ ಗಾಂಧಿ ಪೀಠಗಳು, ಗಾಂಧಿ ಅಧ್ಯಯನ ಕೇಂದ್ರಗಳು ಸೊರಗುತ್ತಿವೆ. ಇವುಗಳನ್ನು ಸಶಕ್ತವಾಗಿಸಿದಲ್ಲಿ ಗಾಂಧಿ ಚಿಂತನೆಗಳನ್ನು ಹರಡಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಲೇಖಕ ಚೀ ಜ ರಾಜೀವ, ಪತ್ರಕರ್ತ ಜಿ ಎನ್ ಮೋಹನ್, ಬಹುರೂಪಿಯ ಶ್ರೀಜಾ ವಿ.ಎನ್ ಅವರು ಉಪಸ್ಥಿತರಿದ್ದರು

Key words: ‘Priya Gandhi, book, released