ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಿರ್ಸಿಯ ಅನನ್ಯ ಮಣಿಪುಷ್ಪಹಾರಕ್ಕೆ ತಲೆ ಬಾಗಿದ ಪ್ರಧಾನಿ ಮೋದಿ ಹಾಗೂ ಇತರೆ ಗಣ್ಯರು.

ಬೆಂಗಳೂರು, ಆಗಸ್ಟ್ 4, 2021(www.justkannada.in): ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ನವದೆಹಲಿಗೆ ಹೋಗಿದ್ದಾಗ ತಮ್ಮೊಂದಿಗೆ ಕೊಂಡೊಯ್ದಿದ್ದ ಸಿರ್ಸಿಯ ಕರಕುಶಲಕರ್ಮಿಗಳು ತಯಾರಿಸಿರುವಂತಹ ವಿಶೇಷವಾದ ಶ್ರೀಗಂಧದ ಹಾರಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಬಿಜೆಪಿಯ ಇತರೆ ಹಿರಿಯ ನಾಯಕರು ತಲೆ ಬಾಗಿದ್ದಾರೆ.

ಮಣಿಪುಷ್ಪ ಮಾಲೆಗಳೆಂದು ಕರೆಯಲ್ಪಡುವ ಈ ಹಾರಗಳು ಅತ್ಯಂತ ದುಬಾರಿ ಶ್ರೀಗಂಧದ ಹಾರಗಳಾಗಿದ್ದು, ಒಂದು ಹಾರದ ಬೆಲೆ ರೂ.೨,೧೪೫ಗಳು.  ಈ ಹಾರದಲ್ಲಿರುವ ಪ್ರತಿಯೊಂದು ಶ್ರೀಗಂಧದ ಹೂವಿನ ಮಧ್ಯಭಾಗದಲ್ಲಿ, ಮಣಿಪುಷ್ಪವನ್ನು ಹೋಲುವ ಒಂದು ದಪ್ಪ ಕೆಂಪು ಚುಕ್ಕಿಯ ವಿನ್ಯಾಸವಿರುವುದು ಈ ಹಾರದ ವಿಶೇಷತೆಯಾಗಿದೆ. ಅತ್ಯಂತ ಸೂಕ್ಷ್ಮ ಹಾಗೂ ಆಕರ್ಷಕ ಹೂವಿನ ಚಿತ್ತಾರದ ವಿನ್ಯಾಸಗಳೊಂದಿಗೆ ತಯಾರಿಸಲ್ಪಡುವ ಈ ಹಾರಗಳಿಗೆ ಬಹಳ ಬೇಡಿಕೆಯಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕೊನೆಯ ಬಾರಿಗೆ ನವ ದೆಹಲಿಗೆ ತೆರಳಿದ್ದಾಗ ತಮ್ಮ ಪಕ್ಷದ ನಾಯಕರನ್ನು ಸನ್ಮಾನಿಸಲು ರೂ.10 ಲಕ್ಷ ಕೊಟ್ಟು ಈ ವಿಶೇಷ ಶ್ರೀಗಂಧದ ಹಾರಗಳನ್ನು ಕೊಂಡೊಯ್ದಿದ್ದರು. ಈಗ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನವ ದೆಹಲಿಗೆ ಮುಖ್ಯಮಂತ್ರಿಯಾದ ನಂತರ ಮೊದಲನೆ ಭೇಟಿಯಲ್ಲಿ, ಬೆಂಗಳೂರಿನಲ್ಲಿರುವ ಸರ್ಕಾರಿ-ಸ್ವಾಮ್ಯದ ಕಾವೇರಿ ಎಂಪೋರಿಯಂನಿಂದ ೧೭ ಮಣಿಪುಷ್ಪ ಹಾರಗಳನ್ನು ಖರೀದಿಸಿ ತೆಗೆದುಕೊಂಡು ಹೋಗಿದ್ದರು.

ದೆಹಲಿಯಲ್ಲಿರುವ ಕಾವೇರಿ ಎಂಪೋರಿಯಂ ಹಾಗೂ ಕರ್ನಾಟಕ ಭವನದ ಅಧಿಕಾರಿಗಳ ಪ್ರಕಾರ, ಉತ್ತರ ಕರ್ನಾಟಕ ಭಾಗದವರಾದ ಬಸವರಾಜ್ ಬೊಮ್ಮಾಯಿ ಅವರು ಆ ಪ್ರದೇಶದ ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ವಿಶೇಷ ಹಾರಗಳನ್ನು ಖರೀದಿಸಿದರಂತೆ. “ಇವು ಹೊಸದಾಗಿ ವಿನ್ಯಾಸಪಡಿಸಿರುವ ಹಾರಗಳಾಗಿದ್ದು, ಹಾರದಲ್ಲಿರುವ ಪ್ರತಿ ಹೂವಿನ ಮಧ್ಯಭಾಗದಲ್ಲಿ ಕೆಂಪು ಹರಳಿನ ವಿನ್ಯಾಸವನ್ನು ಸೃಷ್ಟಿಸಲಾಗಿದೆ. ಇದು ಮಣಿಪುಷ್ಪವನ್ನು ಹೋಲುವದರಿಂದ ಈ ಹೆಸರನ್ನು ನೀಡಲಾಗಿದೆ. ಒಂದು ಚಿಕ್ಕ ಮರದ ತುಂಡಿನ ಸುತ್ತಲೂ ಈ ಹೂವಿನ ಚಿತ್ತಾರವನ್ನು ಕೊರೆದಿದ್ದು, ಮಧ್ಯದಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಹೊದಿಸಲಾಗಿದೆ. ಸಿರ್ಸಿಯ ಕರಕುಶಲಕರ್ಮಿಗಳ ಈ ಅದ್ಭುತ ಪ್ರತಿಭೆಗೆ ಸೂಕ್ತ ಗೌರವ ಲಭಿಸಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ,” ಎಂದು ಕರ್ನಾಟಕ ರಾಜ್ಯ ಕರಕುಶಲವಸ್ತುಗಳ ಅಭಿವೃದ್ಧಿ ನಿಗಮ ನಿಯಮಿತದ ಹಿರಿಯ ಅಧಿಕಾರಿಯೊಬ್ಬರು ಪ್ರಶಂಸಿದ್ದಾರೆ.

ಕೆಎಸ್‌ ಹೆಚ್‌ ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಅವರು ಈ ಕುರಿತು ಮಾತನಾಡಿ, “ಇದೇ ಮೊದಲ ಬಾರಿಗೆ ಮಣಿಪುಷ್ಪ ಹಾರಗಳನ್ನು ರಾಷ್ಟ್ರೀಯ ರಾಜಕೀಯ ನಾಯಕರಿಗೆ ನೀಡಲಾಗಿದೆ. ಕೆಎಸ್‌ಹೆಚ್‌ಡಿಎಲ್, ಕರಕುಶಲಕರ್ಮಿಗಳಿಗೆ ತಮ್ಮ ವಿಶೇಷ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಮಾನ್ಯತೆ ದೊರೆಯಲು ಒಂದು ಸೂಕ್ತ ಮಾಧ್ಯಮವಾಗಿದೆ,” ಎಂದರು.

“ನಾವು ಸೃಷ್ಟಿಸುವ ಹಾರಗಳು ಧಾರ್ಮಿಕ ಕಾರ್ಯಕ್ರಮಗಳು, ಹಾಗೂ ರಾಜಕೀಯ ಸಮಾರಂಭಗಳು ಅಥವಾ ಪುತ್ಥಳಿಗಳಿಗೆ ಮಾತ್ರ ಬಳಸಲಾಗುತ್ತದೆ ಎಂದೇ ನಾವು ಭಾವಿಸಿದ್ದೆವು. ಆದರೆ ಈ ಬಾರಿ ಮುಖ್ಯಮಂತ್ರಿಗಳು ತಮ್ಮ ಉತ್ತಮ ಆಲೋಚನೆಯೊಂದಿಗೆ ನಮ್ಮ ಶ್ರಮಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ. ನಾವು ಈ ರೀತಿಯ ಇನ್ನೂ ಹೆಚ್ಚಿನ ವಿಶೇಷ ವಿನ್ಯಾಸಗಳನ್ನು ತಯಾರಿಸಲು ಆಲೋಚಿಸುತ್ತಿದ್ದೇವೆ. ಈ ಹಾರಗಳಲ್ಲಿ ಅತ್ಯಂತ ಸೂಕ್ಷ್ಮವಾದ ವಿನ್ಯಾಸವಿರುವುದರಿಂದ ಇವುಗಳನ್ನು ತಯಾರಿಸಲು ಸ್ವಲ್ಪ ಸಮಯ ಹಿಡಿಸುತ್ತದೆ,” ಎನ್ನುವುದು ಕಲಾವಿದರ ಅಭಿಪ್ರಾಯ.

ಸುದ್ದಿ ಮೂಲ: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್

Key words: Prime Minister- Modi – bowed down – Chief Minister -Bommai’s –unique- manicure  Sircy.