ನೂತನ ಸರ್ಕಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ: ಕ್ಷಯರೋಗಿಗಳಿಗೆ ಪೌಷ್ಠಿಕಾಂಶ ಕಿಟ್‌ ವಿತರಣೆ

ಬೆಂಗಳೂರು, ಸೆಪ್ಟೆಂಬರ್ ,25, 2025 (www.justkannada.in): ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಹೆಬ್ಬಾಳದ ಸರ್ಕಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (ಯುಪಿಎಚ್‌ಸಿ) ಆಧುನಿಕ, ಸುಸಜ್ಜಿನ ಐದು ಅಂತಸ್ತಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ.

3 ಕೋಟಿ ರೂ ಅನುದಾನದಿಂದ ನಿರ್ಮಾಣವಾಗಿರುವ ನೂತನ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಇಂದು ಸಂಸದ ಲಹರ್ ಸಿಂಗ್ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಲೋಕಾರ್ಪಣೆ ಮಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ನೂತನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಸೌಲಭ್ಯಗಳನ್ನು ಪರಿಶೀಲಿಸಿದರು.

ಬಿಜೆಪಿ ಸಂಸದ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಲಹರ್ ಸಿಂಗ್ ಸಿರೋಯಾ ಅವರು 2022ರಲ್ಲಿ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 3ಕೋಟಿ ರೂ. ಅನುದಾನ ನೀಡಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ, ಪ್ರಧಾನಮಂತ್ರಿ ಟಿಬಿ-ಮುಕ್ತ ಭಾರತ ಅಭಿಯಾನದ ಅಂಗವಾಗಿ, ಸಂಸದ ಲಹರ್ ಸಿಂಗ್ ಸಿರೋಯಾ ಅವರು ಹೆಬ್ಬಾಳ ಕ್ಷೇತ್ರದಲ್ಲಿ ದತ್ತು ಪಡೆದಿರುವ 100+ ಕ್ಷಯ ರೋಗಿಗಳಲ್ಲಿ, ಕೆಲವರಿಗೆ ಸಾಂಕೇತಿಕವಾಗಿ ಪೌಷ್ಠಿಕಾಂಶ ಕಿಟ್‌ಗಳನ್ನು ವಿತರಿಸಿದರು. ಗಮನಾರ್ಹ ಸಂಗತಿಯೆಂದರೆ, ಲಹರ್ ಸಿಂಗ್ ಬೆಂಗಳೂರಿನಾದ್ಯಂತ 1,900ಕ್ಕೂ ಹೆಚ್ಚು ಬಡ ಕ್ಷಯರೋಗಿಗಳನ್ನು ದತ್ತು ಪಡೆದಿದ್ದು, ಅವರಿಗೆ ಶೀಘ್ರ ಚೇತರಿಕೆಗೆ ಅಗತ್ಯವಾದ ಹೆಚ್ಚಿನ ಪೌಷ್ಟಿಕಾಂಶದ ಆಹಾರ ಕಿಟ್‌ ಗಳನ್ನು ಒದಗಿಸುತ್ತಿದ್ದಾರೆ.

ಹೆಬ್ಬಾಳ ಶಾಸಕ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಯುಪಿಎಚ್‌ ಸಿಯನ್ನು ಮೇಲ್ದರ್ಜೆಗೇರಿಸಲು, ಆಗ ಎಂ.ಎಲ್‌.ಸಿ.ಯಾಗಿದ್ದ ಲಹರ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಬಡ ಜನರಿಗೆ ಅನುಕೂಲ ಕಲ್ಪಿಸುವ ತುರ್ತು ಅಗತ್ಯವನ್ನು ಗಮನಿಸಿದ್ದ ಲಹರ್ ಸಿಂಗ್ ತಕ್ಷಣವೇ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 3 ಕೋಟಿ ರೂ. ಅನುದಾನ ನೀಡಿದ್ದರು. ಇದರ ಪರಿಣಾಮವಾಗಿ 5,000 ಚದರ ಅಡಿ ವಿಸ್ತೀರ್ಣದ ಸಂಪೂರ್ಣ ಸುಸಜ್ಜಿತ, ಸಕಲ ಸೌಲಭ್ಯವುಳ್ಳ ಸಾವಿರಾರು ಜನರಿಗೆ ಅನುಕೊಲ ಕಲ್ಪಿಸುವ  ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ, ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಚಾಲನೆ ದೊರಕಿ, ೩ ವರ್ಷಗಳಲ್ಲಿ ಕಾಮಗಾರಿ ಸಂಪೂರ್ಣಗೊಂಡು, ಇಂದು ಲೋಕಾರ್ಪಣೆಗೊಂಡಿದೆ. ವಿಶೇಷವಾಗಿ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳಿಗೆ ಇದು ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಂಸದ ಲಹರ್ ಸಿಂಗ್, “ವಿಶೇಷವಾಗಿ ಬಡವರಿಗೆ ನೆರವಾಗುವ ಈ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲು ಅವಕಾಶ ನೀಡಿದ ಸಚಿವ ಮತ್ತು ನನ್ನ ಸ್ನೇಹಿತ ಬೈರತಿ ಸುರೇಶ್ ಅವರಿಗೆ ಆಭಾರಿಯಾಗಿದ್ದೇನೆ. ಇಲ್ಲಿ ಸುತ್ತಮುತ್ತ ಅನೇಕ ದೊಡ್ಡ ದೊಡ್ಡ ಆಸ್ಪತ್ರೆಗಳಿದ್ದರೂ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಯೇ ನಿಜವಾದ ‘ಸಂಜೀವಿನಿ’ಯಾಗಿದೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವ ಪುರಂದರ ದಾಸರ ಮಾತಿನಂತೆ, ನನ್ನ ಶಾಸಕರ ಅನುದಾನದಲ್ಲಿ 3 ಕೋಟಿ ರೂ. ಮೊತ್ತವನ್ನು ಜನರ ಸೇವೆಗಾಗಿ ನೀಡಿದ್ದೇನೆ. ಜನರಿಗೆ ಸೇವೆ ಸಲ್ಲಿಸುವುದು ಜನಪ್ರತಿನಿಧಿಗಳ ಪ್ರಾಥಮಿಕ ಕರ್ತವ್ಯ ಎನ್ನುವುದು ನನ್ನ ಭಾವನೆ” ಎಂದರು.

“ನಮ್ಮ ಪ್ರಧಾನಮಂತ್ರಿಗಳ ಕ್ಷಯ-ಮುಕ್ತ ಭಾರತ ಅಭಿಯಾನಕ್ಕೆ ಸ್ಪಂದಿಸಿ, ನಾನು ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಸುಮಾರು 1,900 ಬಡ ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದೇನೆ, ಇದರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ 100ಕ್ಕೂ ಹೆಚ್ಚು ಜನರು ಕೂಡ ಸೇರಿದ್ದಾರೆ. ನಾನು ಪಕ್ಷ ಅಥವಾ ರಾಜಕೀಯ ದೃಷ್ಟಿಯಿಂದ ನೋಡದೆ, ಕಾಂಗ್ರೆಸ್ ಶಾಸಕರಾದ ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್, ಜಮೀರ್ ಅಹ್ಮದ್ ಖಾನ್, ಮತ್ತು ಈಗ ಬೈರತಿ ಸುರೇಶ್ ಅವರ ಕ್ಷೇತ್ರಗಳೂ ಸೇರಿದಂತೆ, ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಬಡ ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದೇನೆ. ಜನರಿಗೆ ಸೇವೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯ. ಜನರಿಗೆ ಗುಣಮಟ್ಟದ ಆರೈಕೆ ಮತ್ತು ಆರೋಗ್ಯ ಸೇವೆಯ ಅನುಕೂಲ ಸಿಗುವಂತೆ, ಈ ಆಧುನಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಸೇವೆ ನೀಡಬೇಕು ಎಂದು ಇಲ್ಲಿನ ಎಲ್ಲಾ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಲಹರ್ ಸಿಂಗ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವ ಬೈರತಿ ಸುರೇಶ್ ಮಾತನಾಡಿ, “ವೈಯಕ್ತಿಕವಾಗಿ ಮತ್ತು ಹೆಬ್ಬಾಳದ ಜನತೆ ಪರವಾಗಿ, ನನ್ನ ಹಿರಿಯಣ್ಣನಂತಿರುವ ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬೇರೆ ಪಕ್ಷದಲ್ಲಿದ್ದರೂ ಶ್ರೀಮಂತ ವ್ಯಕ್ತಿತ್ವ ಹೊಂದಿರುವ,  ಪ್ರಧಾನಿ ನರೇಂದ್ರ ಮೋದಿಯವರಿಗೆ ತುಂಬಾ ಆಪ್ತರಾಗಿರುವ ಲಹರ್ ಸಿಂಗ್ ಅವರು, ಪಕ್ಷ, ಜಾತಿ, ಧರ್ಮಗಳನ್ನು ಪರಿಗಣಿಸದೆ, ಜನರ ಕಲ್ಯಾಣಕ್ಕಾಗಿ 3 ಕೋಟಿ ರೂ.ಗಳ ದೊಡ್ಡ ಅನುದಾನವನ್ನು ನೀಡಿದ್ದಾರೆ. ಮಾಜಿ ಬಿಜೆಪಿ ಎಂಎಲ್‌ ಸಿ ಮತ್ತು ಹಾಲಿ ಬಿಜೆಪಿ ಸಂಸದರಾಗಿರುವ ಲಹರ್ ಸಿಂಗ್, ಜನರಿಗೆ ಅನುಕೂಲವಾಗಲಿ ಎಂದು ರಾಜಕೀಯ ಬೆರೆಸದೆ, ಇಷ್ಟು ದೊಡ್ಡ ಅನುದಾನ ನೀಡಿದ್ದು, ನನ್ನ ಕ್ಷೇತ್ರದಲ್ಲಿ ಈ ಸುಸಜ್ಜಿತ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲು ಸಹಾಯ ಮಾಡಿದ್ದಾರೆ. ಈ ಹಿಂದೆ, ಡಾ. ಅಶ್ವಥ್ ನಾರಾಯಣ್ ಶಿಕ್ಷಣ ಸಚಿವರಾಗಿದ್ದಾಗಲೂ ಕೂಡ, ನಾವು ಅವರನ್ನು ಕೇಳಿದ ಕೂಡಲೇ ನನ್ನ ಕ್ಷೇತ್ರದಲ್ಲಿ ತಕ್ಷಣವೇ ಕಾಲೇಜನ್ನು ಮಂಜೂರು ಮಾಡಿದ್ದರು. ಜನಪ್ರತಿನಿಧಿಗಳು ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಯಾವುದೇ ಪಕ್ಷದವರಾಗಿರಲಿ, ನಾವೆಲ್ಲರೂ ಜನರಿಗೆ ಸೇವೆ ಸಲ್ಲಿಸುವಲ್ಲಿ ಒಗ್ಗಟ್ಟಾಗಿರಬೇಕು. ಈ ವಿಷಯದಲ್ಲಿ, ನಮ್ಮ ಲಹರ್ ಸಿಂಗ್ ಜಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಅವರ ಸಹಕಾರ ಯಾವಾಗಲೂ ಇರುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ನುಡಿದರು.

ಮುಖ್ಯ ಆರೋಗ್ಯ ಅಧಿಕಾರಿ ಸಿರಾಜುದ್ದೀನ್, ಉದ್ಯಮಿ ಜೆ.ಸಿ. ಶರ್ಮಾ, ಮಾಜಿ ಕಾರ್ಪೊರೇಟರ್‌ ಗಳು, ಆಸ್ಪತ್ರೆ ವೈದ್ಯರು, ದಾದಿಯರು, ಸಿಬ್ಬಂದಿ ಮತ್ತು ಹೆಚ್ಚಿನ ಸಂಖ್ಯೆಯ ನಾಗರಿಕರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೊಸ ಐದು ಅಂತಸ್ತಿನ ಹೆಬ್ಬಾಳ UPHC 15,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ವೈದ್ಯರು, ವೈದ್ಯಕೀಯ ಅಧಿಕಾರಿ, ದಾದಿಯರು, ಸಹಾಯಕ ನರ್ಸ್ ಮತ್ತು ಶುಶ್ರೂಷಕಿಯರು ಸೇರಿದಂತೆ ಇಲ್ಲಿ ಸುಮಾರು 15ಕ್ಕೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 50-60 ರೋಗಿಗಳಿಗೆ ದೈನಂದಿನ OPD ಸೇವೆಗಳನ್ನು ಒದಗಿಸಲಿದ್ದು, ಸೋಮವಾರ ಮತ್ತು ಮಂಗಳವಾರ ಲಸಿಕೆ ಸೇವೆಗಳನ್ನು ಮತ್ತು ಸೋಮವಾರ ಮತ್ತು ಶುಕ್ರವಾರದಂದು ಪ್ರಸವಪೂರ್ವ ಆರೈಕೆಯನ್ನು ಒದಗಿಸುತ್ತದೆ. ಅಗತ್ಯ ವೈದ್ಯಕೀಯ ಸಾಧನಗಳೊಂದಿಗೆ ಸಂಪೂರ್ಣವಾಗಿ ಸಜ್ಜುಗೊಂಡಿರುವ ಈ ಕೇಂದ್ರವು ಎಲ್ಲಾ ರಾಷ್ಟ್ರೀಯ ಆರೋಗ್ಯ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಹೆಬ್ಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬಡ, ಹಿಂದುಳಿದ ವರ್ಗಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದೆ.

Key words: Government, Primary Health Center, inaugurated, Lahar singh, Bhairati Suresh