ದಿಢೀರ್ ಗಗನಕ್ಕೇರಿದ ಹಣ್ಣು, ತರಕಾರಿಗಳ ಬೆಲೆ: ಗ್ರಾಹಕರು ಹೈರಾಣ..

ಮೈಸೂರು,ಜೂನ್,14,2023(www.justkannada.in):  ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ,ಮಧ್ಯಮವರ್ಗದ ಜನರು ತತ್ತರಿಸುತ್ತಿದ್ದು ಇದೀಗ ಹಣ್ಣು ಹಂಪಲು, ತರಕಾರಿಗಳ ಬೆಲೆ ದಿಢೀರ್ ಗಗನಕ್ಕೇರಿದೆ.

ಹಣ್ಣು ಹಂಪಲು,ತರಕಾರಿಗಳ ಬೆಲೆ ಈಗ ದುಪ್ಪಟ್ಟಾಗಿದ್ದು, ದಿಢೀರ್ ಬೆಲೆ ಏರಿಕೆಯಿಂದ ಗ್ರಾಹಕರು ಹೈರಾಣಾಗಿದ್ದಾರೆ. ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟುತ್ತಿದೆ. 1 ಕೆಜಿ ಬೀನ್ಸ್  100 ರಿಂದ 120 ರೂಗೆ ಹೆಚ್ಚಾದರೇ 1 ಕೆಜಿ ಕ್ಯಾರೆಟ್ 80 ರಿಂದ 100 ರೂ. 1 ಕೆಜಿ ನುಗ್ಗೆಕಾಯಿ 120 ರೂ. , ಬದನೆಕಾಯಿ 60 ರೂ., ಆಗಲಕಾಯಿ 80 ರೂ.ಗೆ ಹೆಚ್ಚಾಗಿದೆ.  ಸರಾಸರಿ ಬಹುತೇಕ ತರಕಾರಿಗಳು ಕೆಜಿಗೆ  50  ರೂಪಾಯಿಗೂ ಹೆಚ್ಚಾಗಿದೆ.

ಇತ್ತ ಹಣ್ಣುಗಳಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು ಆ್ಯಪಲ್ ಗೆ ಕೆಜಿಗೆ 200 ರಿಂದ 240 ರೂ. ,ಕಿತ್ತಲೆ ಹಣ್ಣು ಕೆಜಿಗೆ 160 ರಿಂದ 200 ರೂ. ಮೊಸಂಬಿ, ಸಪೋಟಾ ಸೇರಿದಂತೆ ಬಹುತೇಕ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ.

ಬೇಸಿಗೆ ಕಾರಣ ತರಕಾರಿ ಹಣ್ಣುಗಳಲ್ಲಿ ಉತ್ಪಾದನೆಯಲ್ಲಿ ಕ್ರಮೇಣ ಇಳಿಕೆಯಾಗಿದ್ದು, ಮಾರುಕಟ್ಟೆಗೆ ತರಕಾರಿ ಪದಾರ್ಥಗಳು ಹೆಚ್ಚು ಪೂರೈಕೆಯಾಗುತ್ತಿದೆ. ಹೀಗಾಗಿ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಇದು ಅನ್ ಸೀಸನ್, ಒಂದು ಕಡೆ ಬೇಸಿಗೆ, ಇನ್ನೊಂದು ಕಡೆ ಮಳೆ ಇಲ್ಲದೆ ರೈತರು ಬೆಳೆ ಬೆಳೆದಿರುವುದಿಲ್ಲ. ಹಾಗಾಗಿ ಮಾಲ್ ಮಾರುಕಟ್ಟೆಗೆ ಸರಿಯಾಗಿ ಬರುತ್ತಿಲ್ಲ.

100ಕ್ಕೆ ಶೇ.  70 ರಷ್ಟು ತರಕಾರಿ ಹಣ್ಣು ಹಂಪಲುಗಳು ಪೂರೈಕೆ  ಕಡಿಮೆ ಆಗಿದ್ದು, ಈಗ ಅನ್ ಸೀಜನ್, ಹಾಗಾಗಿ ಬೆಲೆ ಏರಿಕೆ ಆಗಿದೆ ಎನ್ನುವ ವರ್ತಕರು. ಬೆಲೆ ಏರಿಕೆಯಿಂದ ತರಕಾರಿ,ಹಣ್ಣು ಹಂಪಲು ಖರೀದಿಗೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಗ್ರಾಹಕರಿಗೆ ಬಂದಿದೆ.

ಒಂದು ಕೆಜಿ ತೆಗೆದುಕೊಳ್ಳುವ ಬದಲು ಅರ್ಧ ಕೆಜಿ ತಗೆದುಕೊಳ್ಳುತ್ತೇವೆ. ಈ ರೀತಿ ಬೆಲೆ ಏರುತ್ತಿದ್ದರೆ ನಮ್ಮಂತ ಬಡ ಜನ ಜೀವನ ಮಾಡೋದಾದರೂ ಹೇಗೆ.? ಜೀವನ ಬಹಳ ಕಷ್ಟವಾಗುತ್ತಿದೆ ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

Key words: price – fruits – vegetables-rate-hike-Consumers -panic