ಮಂಡ್ಯ ಡಿಸೆಂಬರ್,13,2025 (www.justkannada.in): ಭಾರತದ ಘನತ್ತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ಡಿಸೆಂಬರ್ 16 ರಂದು ಮಳವಳ್ಳಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಭದ್ರತಾ ವಿಭಾಗದ ಅಧಿಕಾರಿ ಧನಂಜಯ್ ಕುಮಾರ್, ಕೇಂದ್ರ ಗುಪ್ತಚರ ಅಧಿಕಾರಿಗಳಾದ ವಿಶಾಲ್ ಅವರ ನೇತೃತ್ವದಲ್ಲಿ ಇಂದು ಮಳವಳ್ಳಿ ಪುರಸಭೆ ಸಭಾಂಗಣದಲ್ಲಿ ಎಎಸ್ಎಲ್ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ ಕುಮಾರ, ಮಳವಳ್ಳಿಯಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಸ್ಧಳದಲ್ಲಿ ಗ್ರೀನ್ ರೂಮ್, ಹೆಲಿಪ್ಯಾಡ್ ಸುತ್ತಾ ಬ್ಯಾರಿಕೇಡ್ ನಿರ್ಮಾಣ ಹಾಗೂ ರೆಡ್ ಕಾರ್ಪೆಟ್ ಹಾಕಲು ಅಗತ್ಯ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ರಾಷ್ಟ್ರಪತಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷ ಎದುರಾಗದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು. ಕಾರ್ಯಕ್ರಮ ಸಂಪೂರ್ಣವಾಗಿ ಮುಗಿಯುವವರೆಗೂ ಎಲ್ಲಿಯೂ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಹೆಲಿಪ್ಯಾಡ್ ಮತ್ತು ಕಾರ್ಯಕ್ರಮ ನಡೆಯುವ ಜಾಗಗಳಲ್ಲಿ ಅಗ್ನಿಶಾಮಕ ದಳದ ವಾಹನಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
ಗಣ್ಯರು ಸಂಚರಿಸುವ ಮಾರ್ಗದ ರಸ್ತೆಗಳು ಸ್ವಚ್ಚತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಆಂಬ್ಯುಲೆನ್ಸ್ ನೊಂದಿಗೆ ನುರಿತ ಆರೋಗ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಉಪಹಾರ, ಕುಡಿಯುವ ನೀರು ಹಾಗೂ ಸ್ನಾಕ್ಸ್ ಗಳನ್ನು ನೀಡುವ ಮೊದಲು ಆಹಾರ ಸುರಕ್ಷತಾ ಅಧಿಕಾರಿಗಳಿಂದ ತಪಾಸಣೆ ಮಾಡಬೇಕು ಎಂದು ಅವರು ತಿಳಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಆಗದಂತೆ ಪ್ರೋಟೋಕಾಲ್ ನಿಯಮದಂತೆ ಕಾರ್ಯನಿರ್ವಹಿಸಬೇಕು ಎಂದು ಡಿಸಿ ಡಾ ಕುಮಾರ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಜೆಎಸ್ ಎಸ್ ವಿದ್ಯಾಪೀಠದ ನಿರಂಜನ್ ಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Key words: President, Draupadi Murmu, Malavalli, Mandya DC, Kumar







