ನಗರ ಅನಿಲ ವಿತರಣಾ ಜಾಲದ ಯೋಜನೆಗೆ ಸಿದ್ಧತೆ-ಜಿಲ್ಲಾಧಿಕಾರಿ ಡಾ.ಕುಮಾರ.

ಮಂಡ್ಯ,ಜನವರಿ,9,2024(www.justkannada.in): ಜಿಲ್ಲೆಯಲ್ಲಿ ನಗರ ಅನಿಲ ವಿತರಣಾ ಜಾಲದ ಯೋಜನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ‌ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಕಂಪ್ರೆಸ್ಡ್ ನೈಸರ್ಗಿಕ ಅನಿಲವನ್ನು ಕೊಳವೆಯ ಮೂಲಕ ಗೃಹ ಬಳಕೆಗಾಗಿ, ವಾಣಿಜ್ಯ, ಕೈಗಾರಿಕಾ ಗ್ರಾಹಕರಿಗೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಕಂಪ್ರೆಸ್ಡ್ ನೈಸರ್ಗಿಕ ಅನಿಲದ ಪೈಪ್ ಲೈನ್ ಕೆಲಸವನ್ನು ಪ್ರಾರಂಭಿಸಲು ಬೇಕಿರುವ ಸ್ಥಳ, ಪೈಪ್ ಲೈನ್ ಅಳವಡಿಕೆ‌, ಪೈಪ್ ಲೈನ್ ಅಳವಡಿಕೆಯ ನಂತರ ರಸ್ತೆಯನ್ನು ಸರಿಪಡಿಸುವುದು ಸೇರಿದಂತೆ ಇತರೆ ಕೆಲಸಗಳ ಬಗ್ಗೆ ನೋಡಿಕೊಳ್ಳಲು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷರಾ ಮಣಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು.

ಕಂಪ್ರೆಸ್ಡ್ ನೈಸರ್ಗಿಕ ಅನಿಲದ ಪೈಪ್ ಲೈನ್ ಸಂಪರ್ಕ ಪಡೆಯುವುದು ಮನೆ ಮಾಲೀಕರ ಐಚ್ಛಿಕ ವಿಷಯವಾಗಿರುತ್ತದೆ ಎಂದರು.

ಯೋಜನೆ ಅನುಷ್ಠಾನ ಮಾಡುತ್ತಿರುವ ಸಂಸ್ಥೆಯ ಮುಖ್ಯ ಇಂಜಿನಿಯರ್ ಚರಣ್ ಅವರು ಮಾತನಾಡಿ ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಯ ಪ್ರದೇಶದಲ್ಲಿ ಬರುವ ನಗರಗಳ ಮನೆ- ಮನೆ ಭೇಟಿ ಮಾಡಿ ಸಿ.ಎನ್. ಜಿ ಪೈಪ್ ಲೈನ್ ಅಳವಡಿಕೆಯ ಅನುಕೂಲತೆಯ ಬಗ್ಗೆ ತಿಳಿಸಲಾಗುವುದು. ಎಲ್.ಪಿ. ಜಿ ಹಾಗೂ ಸಿ.ಎನ್ .ಜಿಗೆ ಇರುವ ವ್ಯತ್ಯಾಸವನ್ನು ಸಹ ತಿಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿರುವ 13,54,715 ವಸತಿಗಳನ್ನು ಯೋಜನೆಯಡಿ ಗುರುತಿಸಲಾಗಿದೆ. ಇದಲ್ಲದೇ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳನ್ನು ಸಂಪರ್ಕಿಸಿ ಸಿ.ಎನ್. ಜಿ ಒದಗಿಸುವ ಬಗ್ಗೆ ವಿವರಿಸಲಾಗಿದೆ. ಜಿಲ್ಲೆಯಲ್ಲಿ 4 ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳಿಗೆ ಸಿ.ಎನ್.ಜಿ ಇಂಧನ ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಎಲ್ಲಾ ಮುಂಜಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದರು.

ಸಭೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಸಿಂಧೆ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್, ಜಿಲ್ಲಾ ನಗರಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಎನ್. ವಿ ತುಷಾರಾಮಣಿ, ನಗರ ಸಭೆ ಪೌರಾಯುಕ್ತ ಆರ್ ಮಂಜುನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಎಸ್ ನಿರ್ಮಲಾ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Key words: Preparation – urban- gas- distribution-network-project-DC- Dr. Kumar.