ಮೈಸೂರು,ಡಿಸೆಂಬರ್,10,2025 (www.justkannada,in): ದೇಶೀಯ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ’ಯೂನಿಟಿ ಮಾಲ್’ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಸರ್ವೇ ನಂ.1ರ 6.5 ಎಕರೆ ಪ್ರದೇಶದಲ್ಲಿ ‘ಯೂನಿಟಿ ಮಾಲ್‘ ನಿರ್ಮಾಣಕ್ಕೆ ಕೆಲ ತಿಂಗಳುಗಳ ಹಿಂದಷ್ಟೆ ಸಂಸದ ಯದುವೀರ್ ಗುದ್ದಲಿ ಪೂಜೆ ನೆರವೇರಿಸಿದ್ದರು. ಇದೀಗ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಸದಂತೆ ಹಾಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶಿಸಿದೆ.
ಕೆಲ ತಿಂಗಳ ಹಿಂದೆ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಯದುವೀರ್, ದೇಶಿಯ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಹಾಗೂ ಕರಕುಶಲ ಕರ್ಮಿಗಳಿಗೆ ಉದ್ಯೋಗ ಅವಕಾಶ ಒದಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಬಲಪಡಿಸಲು ಉತ್ತಮ ವೇದಿಕೆ ಎಂದು ಅಭಿಪ್ರಾಯ ಪಟ್ಟಿದ್ದರು.
ಪಿಪಿಪಿ ಮಾದರಿಯಲ್ಲಿ ಒಟ್ಟು 193 ಕೋಟಿ ರೂ. ವೆಚ್ಚದಲ್ಲಿ ಯೂನಿಟಿ ಮಾಲ್ ತಲೆ ಎತ್ತಲಿತ್ತು. 2027ರ ವೇಳೆಗೆ ಯೋಜನೆ ಪೂರ್ಣಗೊಂಡು ಕಾರ್ಯಾರಂಭ ಮಾಡುತ್ತದೆ ಎಂಬ ವಿಶ್ವಾಸವನ್ನು ಸಂಸದ ಯದುವೀರ್ ವ್ಯಕ್ತಪಡಿಸಿದ್ದರು.
ದೇಶದ ವಿವಿಧ ರಾಜ್ಯಗಳ ಒಟ್ಟು 36 ವಾಣಿಜ್ಯ ಮಳಿಗೆಗಳನ್ನು ಪ್ರಾರಂಭಿಸಿಲು ಉದ್ದೇಶಿಸಲಾಗಿತ್ತು. ಜೊತೆಗೆ ಅತಿಥೇಯ ರಾಜ್ಯ ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದು ಮಳಿಗೆಯನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿತ್ತು. ಆ ಮೂಲಕ ಆಯಾ ರಾಜ್ಯಗಳ ದೇಸಿಯ ಕರಕುಶಲ ಉತ್ಪನ್ನಗಳ ಮಾರಾಟಕ್ಕೆ ಹಾಗೂ ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶ ಎಂದಿದ್ದರು.
ಇದೀಗ ಈ ಯೋಜನೆಗೆ ಕೋರ್ಟ್ ಆದೇಶ ಹಿನ್ನೆಡೆ ತಂದಿದೆ. ಖುದ್ದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರೇ ಕೋರ್ಟ್ ಮೆಟ್ಟಿಲೇರಿರುವುದು ವಿಶೇಷ.
ಜಿಲ್ಲಾಧಿಕಾರಿ ಪ್ರತಿಕ್ರಿಯೆ
‘ಯೂನಿಟಿ ಮಾಲ್’ ನಿರ್ಮಾಣ ಸಂಬಂಧ ನ್ಯಾಯಾಲಯದ ಯಥಾಸ್ಥಿತಿ ಆದೇಶ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ಜಸ್ಟ್ ಕನ್ನಡ ಸಂಪರ್ಕಿಸಿತು. ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಈ ಸಂಬಂಧ ಸದ್ಯದಲ್ಲೇ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಿ ಆದೇಶ ತೆರವುಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
Key words: Pramoda Devi Wodeyar, court , Unity Mall, Mysore







