ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ನಮ್ಮ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದ ಜೆಡಿಎಸ್ ಶಾಸಕ ಎ.ಮಂಜು.

ಬೆಂಗಳೂರು, ಸೆಪ್ಟೆಂಬರ್ 1,2023(www.justkannada.in): ಹಾಸನದ  ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆಯನ್ನ ಹೈಕೋರ್ಟ್ ಅಸಿಂಧುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಹಾಗೂ ದೂರುದಾರ ಎ.ಮಂಜು, ನಮ್ಮ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಎ.ಮಂಜು, ಹೈಕೋರ್ಟ್​ ತೀರ್ಪನ್ನು ಸ್ವಾಗತಿಸುವೆ, ಖುಷಿ ಸಿಕ್ಕಿದೆ. ಸುಳ್ಳು ಮಾಹಿತಿ ನೀಡಿದ್ದರಿಂದ ಹೈಕೋರ್ಟ್ ಅವರನ್ನು ಅನರ್ಹಗೊಳಿಸಿದೆ. ತಪ್ಪು ಮಾಹಿತಿ ಕೊಡಬಾರದು ಎನ್ನುವ ಎಚ್ಚರಿಕೆ ಇದು. ಅವರು ಸರಿಯಿದ್ದೇವೆ ಎನ್ನುವುದಾದರೆ ಕಾನೂನು ಹೋರಾಟ ಮಾಡಲಿ. ಸುಪ್ರೀಂ ಕೋರ್ಟ್ ​ನಲ್ಲಿ ಕಾನೂನು ಹೋರಾಟಮಾಡಿ ಸಮರ್ಥಿಸಿಕೊಳ್ಳಲಿ. ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರೆ ಶಿಕ್ಷೆ ಅನುಭವಿಸಲಿ ಎಂದು ಹೇಳಿದರು.

ಯಾರೇ ಆದರೂ ಸರಿ, ಚುನಾವಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು. ಬದಲಾದ ಸನ್ನಿವೇಶದಲ್ಲಿ ನಾನು ಜೆಡಿಎಸ್​ ಶಾಸಕನಾಗಿದ್ದೇನೆ. ನಾನು  ಜೆಡಿಎಸ್ ಸೇರುವ ವೇಳೆ ಯಾವುದೇ ಷರತ್ತು ವಿಧಿಸಿರಲಿಲ್ಲ. ಪ್ರಜ್ವಲ್ ವಿರುದ್ಧ ಕೇಸ್ ದಾಖಲಿಸಿದ್ದ ವಿಚಾರವಾಗಿ ಅಂದೇ ಮಾಹಿತಿ ನೀಡಿದ್ದೆ. ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ವೇಳೆಯೂ ಹೇಳಿದ್ದೆ. ಕೇಸ್ ವಿಚಾರ ಬೇರೆ, ನೀನು ಪಕ್ಷಕ್ಕೆ ಸೇರು ಎಂದು ಹೇಳಿದ್ದರು. ನಮ್ಮ ಮಕ್ಕಳು, ಮೊಕ್ಕಳ ಜೊತೆ ನೀನು ಸೇರು ಎಂದು ಹೇಳಿದ್ದರು. ದೇವೇಗೌಡರ ಸೂಚನೆಯಂತೆ ಜೆಡಿಎಸ್ ಸೇರಿ ಶಾಸಕನಾಗಿದ್ದೇನೆ. ಒಂದು ವೇಳೆ ಅವರು ನನ್ನ ಸಲಹೆ ಕೇಳಿದರೆ ಸಹಕಾರ ನೀಡುವೆ ಎಂದು ಎ.ಮಂಜು ತಿಳಿಸಿದರು.

Key words: Prajwal Revanna – disqualified – post –MP- JDS MLA -A. Manju – justice.