ಮೈಸೂರು,ಜೂನ್,6,2025 (www.justkannada.in): ಕ್ರೆಡಿಟ್ ಗೋಸ್ಕರ ರಾಜಕೀಯ ಲಾಭಕ್ಕಾಗಿ, ರಾಜಕೀಯ ಕುಟುಂಬದ ಸದಸ್ಯರ ಸೆಲ್ಫಿ ಹುಚ್ಚಿಗೆ 11 ಜನ ಬಲಿಯಾದ್ರು. ಬಳಿಕ ಈಗ ದಕ್ಷ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಕೈ ತೊಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನೇರ ಹೊಣೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಆರ್.ಸಿ.ಬಿ ಅಭಿಮಾನಿಗಳ ದುರಂತ ಸಾವು ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸರ್ಕಾರ ಅಂದರೆ ಅಧಿಕಾರಿಗಳಲ್ಲ. ತಪ್ಪು ಸರ್ಕಾರದ್ದು. ಮಂತ್ರಿಗಳು, ಸಿಎಂ ಡಿಸಿಎಂ ಎಲ್ಲರೂ ಸರ್ಕಾರವೇ. ವಿಧಾನಸೌಧದ ಮುಂದೆ ಎಲ್ಲರೂ ಮಂತ್ರಿಗಳ ಕುಟುಂಬವೇ ಇತ್ತು. ಅವರೆಲ್ಲರೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅವರೆಲ್ಲರೂ ಪರ್ಮಿಷನ್ ತೆಗೆದುಕೊಂಡು ಹೋಗಿದ್ರಾ? ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ಡಿಸಿಎಂ ಸಾಹೇಬರು ಆರ್.ಸಿ ಬಿ ಕೊಚ್ ರೀತಿ ಪೋಸ್ ಕೊಟ್ಟಿದ್ರು. ಅವರೇ ಎಲ್ಲವನ್ನೂ ಮುಂದೆ ನಿಂತು ಮಾಡುತ್ತಿದ್ದರು. ಸಮಾರಂಭಕ್ಕೆ ಅನುಮತಿ ಕೊಟ್ಟಿದ್ಯಾರು? ದಕ್ಷ ಅಧಿಕಾರಿ ಸಸ್ಪೆಂಡ್ ಮಾಡಿ ಕೈ ತೊಳೆದುಕೊಂಡರು. ಮೊದಲು ಡಿಸಿಎಂ ಡಿಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ ಪ್ರಹ್ಲಾದ್ ಜೋಶಿ, ಅಭಿಮಾನಿಗಳು ಸತ್ತಿರುವ ವಿಚಾರ ಗೊತ್ತಿದ್ದರೂ ಡಿಕೆ ಶಿವಕುಮಾರ್ ಚಿನ್ನಸ್ವಾಮಿ ಸ್ಟೇಡಿಯಂ ಹೋಗಿದ್ದರು. ಅಲ್ಲಿ ಕೂಡ ಸಂಭ್ರಮಾಚರಣೆ ಮಾಡಿದರು. ಡಿಕೆ ಶಿವಕುಮಾರ್ ಮೇಲೆ ಕ್ರಮ ಯಾಕಿಲ್ಲ? ಜ್ಯೂಡಿಸಿಯರ್ ತನಿಖೆ ರಚನೆ ಮಾಡಲು ಹೈ ಕೋರ್ಟ್ ಅನುಮತಿ ಬೇಕು. ಅದನ್ನು ಕೂಡ ಮಾಡಿಲ್ಲ. ಆಟಗಾರರನ್ನು ಒತ್ತಾಯ ಮಾಡಿ ಕರೆಸಿದ್ದಾರೆ. ಇವರೇ ಫ್ಲೈಟ್ ಬುಕ್ ಮಾಡಿ ಈಗ ದಾಖಲೆ ತಿದ್ದಲು ಹೊರಟಿದ್ದಾರೆ. ಮಾಡಿರುವ ತಪ್ಪಿಂದ ತಪ್ಪಿಸಿಕೊಳ್ಳಲು ಹೊರಟಿದ್ದಾರೆ ಎಂದು ಹರಿಹಾಯ್ದರು
ಮುಡಾ ಹಗರಣ ವಾಲ್ಮೀಕಿ ಹಗರಣ ಮಾಡಿ ಕೈ ತೊಳೆದುಕೊಳ್ಳಲು ಮುಂದಾದರು. ಅದೇ ರೀತಿ ಇದನ್ನು ಕೂಡ ಬೇರೆ ಅವರ ಮೇಲೆ ಎತ್ತಿ ಹಾಕಲು ಮುಂದಾಗಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಪೊಲೀಸರು ಕಾರ್ಯಕ್ರಮ ಮಾಡೋದು ಬೇಡ ಅಂತ ಹೇಳಿದ್ದರು. ಸ್ವತಃ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡ್ತೀವಿ ಅಂತ ಹೇಳಿದ್ದಾರೆ. ಈ ಐತಿಹಾಸಿಕ ಗೆಲುವಿನಲ್ಲಿ ನೀವು ಭಾಗಿಯಾಗಿ ಅಂತ ಸಿಎಂ ಟ್ವೀಟ್ ಮಾಡಿದ್ದಾರೆ. ಯಾಕೆ ಟ್ವೀಟ್ ಮಾಡಿ ಜನರನ್ನು ಕರೆದರು? ಎಂದು ಟ್ವೀಟ್ ಪ್ರತಿ ಹಿಡಿದು ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಬೆಂಗಳೂರು ಗೆದ್ದ ದಿನ ತಡರಾತ್ರಿ ಸಂಭ್ರಮ ಮಾಡಿದ್ದಾರೆ. ಪೊಲೀಸರು ಅಲ್ಲಿ ಕೂಡ ಕಂಟ್ರೋಲ್ ಮಾಡಿದ್ದಾರೆ. ನಿಮ್ಮ ಅಧಿಕಾರಿಗಳು, ನಿಮ್ಮ ಇಂಟೆಲಿಜೆನ್ಸ್ ಏನು ಮಾಡ್ತಿತ್ತು. ಕ್ರೆಡಿಟ್ ಗೋಸ್ಕರ ರಾಜಕೀಯ ಲಾಭಕ್ಕಾಗಿ, ಕುಟುಂಬದ ಸದಸ್ಯರ ಸೆಲ್ಫಿ ಹುಚ್ಚಿಗೆ 11 ಜನ ಬಲಿಯಾದ್ರು. ಇದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನೇರ ಹೊಣೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಕಾಲ್ತುಳಿತ ದುರಂತ ನೆನೆದು ಡಿಕೆ ಶಿವಕುಮಾರ್ ಕಣ್ಣೀರು ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಯಾರ ಕಣ್ಣೀರಿನ ಬಗ್ಗೆಯೂ ಕೆಟ್ಟದಾಗಿ ಇದುವರೆಗೂ ಮಾತನಾಡಿಲ್ಲ. ಕಣ್ಣೀರು ಹಾಕಿದ ತಕ್ಷಣ ಪಾಪದ ಕೃತ್ಯ ಮರೆ ಮಾಚಲು ಸಾದ್ಯವಿಲ್ಲ ಎಂದು ಹೇಳಿದರು.
Key words: Stampede case, CM Siddaramaiah, DCM DK shivakumar, Union Minister, Prahlad Joshi