Wednesday, July 29, 2026

BDA Apartments

Home Front Page ಆರೋಪ  ಸುಳ್ಳು ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ – ಕೈ ಮುಖಂಡ ಹೆಚ್. ಆಂಜನೇಯಗೆ ಸಚಿವ...

ಆರೋಪ  ಸುಳ್ಳು ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ – ಕೈ ಮುಖಂಡ ಹೆಚ್. ಆಂಜನೇಯಗೆ ಸಚಿವ ಪ್ರಭು ಚವ್ಹಾಣ್ ಸವಾಲು

ಬೆಂಗಳೂರು,ಸೆಪ್ಟಂಬರ್, 24,2020(www.justkannada.in): ನನ್ನ ಜಾತಿ ಮತ್ತು ಜನ್ಮ ಸ್ಥಳದ ಕುರಿತು ಸಮಾಜಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್. ಆಂಜನೇಯ ಅವರು ಚಿತ್ರದುರ್ಗದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನಿರಾಧಾರ ಹಾಗೂ ಸತ್ಯಕ್ಕೆ ದೂರವಾಗಿವೆ. ಒಂದು ವೇಳೆ ಅವರು ಮಾಡಿರುವ ಆರೋಪ ಸಾಭೀತಾದರೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಪಶು ಸಂಗೋಪನೆ, ವಕ್ಫ್ ಮತ್ತು ಹಜ್ ಖಾತೆ  ಸಚಿವ ಪ್ರಭು ಚವ್ಹಾಣ್ ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿರುವ ಸಚಿವ ಪ್ರಭು ಚೌಹಾಣ್, ಆಂಜನೇಯ ಅವರಿಗೆ ನನ್ನ ಜಾತಿ, ಜನ್ಮದ ಮೂಲದ ಬಗ್ಗೆ ತಿಳಿಯಬೇಕಿದ್ದರೆ ಒಮ್ಮೆ ನನ್ನ ಕ್ಷೇತ್ರಕ್ಕೆ ಬಂದು ಸ್ವತಃ ವಾಸ್ತವ ಏನೆಂಬುದು ತಿಳಿದುಕೊಳ್ಳಲಿ. ನಾನು ಸುಳ್ಳು, ಮೋಸದಿಂದ ಜಾತಿ, ಜನ್ಮ ಪ್ರಮಾಣಪತ್ರ ಪಡೆದಿರುವುದು ಸಾಬೀತಾದರೆ ಅದೇ ಕ್ಷಣ ರಾಜಕೀಯದಿಂದ ನಿವೃತ್ತಿ ಪಡೆಯುವೆ. ಒಂದು ವೇಳೆ ಇದು ಸುಳ್ಳು ಎಂದಾದರೆ ಅವರು ಬಹಿರಂಗವಾಗಿ ಕ್ಷಮೆ ಕೋರಲಿ ಎಂದು ಸವಾಲು ಹಾಕಿದ್ದಾರೆ.

ನಾನು ಮೂಲತಃ ಕರ್ನಾಟಕದವನು. ನಾನು ಅಪ್ಪಟ ಕನ್ನಡಿಗ. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೋಂತಿ ತಾಂಡಾ ನನ್ನ ಹುಟ್ಟೂರು. ನಾನು ಪರಿಶಿಷ್ಟ ಜಾತಿಯ(ಎಸ್.ಸಿ) ಲಂಬಾಣಿ ಜನಾಂಗಕ್ಕೆ ಸೇರಿದ್ದೇನೆ. ಆದರೆ ಆಂಜನೇಯ ಅವರು ವಾಸ್ತವ ಅರಿಯದೆ ಹಾಗೂ ಯಾರೋ ಕುತಂತ್ರಿಗಳು ನೀಡಿದ  ಸುಳ್ಳು ಮಾಹಿತಿಯನ್ನು ನಂಬಿ ನಾನು ಮಹಾರಾಷ್ಟ್ರದವನಸ್ಸಿ ಜಾತಿಗೆ ಸೇರಿದವನಲ್ಲ ಎಂದು ಆರೋಪಿಸಿದ್ದಾರೆ. ಪರಿಶಿಷ್ಟ ಸಮಾಜದ ಹಿರಿಯ ನಾಯಕರೆನಿಸಿಕೊಂಡ ಆಂಜನೇಯ ಅವರಿಂದ ಇಂತಹ ತಪ್ಪು ಹೇಳಿಕೆ ಬಂದಿರುವುದು ಅಚ್ಚರಿ ತಂದಿದೆ ಎಂದು ಸಚಿವ ಪ್ರಭು ಚೌಹಾಣ್ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಜಾತಿ ಹಾಗೂ ಜನ್ಮ ಸ್ಥಳದ ಕುರಿತು ಯಾವುದೇ ವಿವಾದವಿಲ್ಲ. ಆದರೆ ಕೆಲವರು ಮೇಲಿಂದ ಮೇಲೆ ಈ ವಿಷಯವನ್ನು ಕೆದಕಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮೂರನೇ ಸಲ ಔರಾದ್ ಕ್ಷೇತ್ರದ ಶಾಸಕನಾಗಿ, ಕಳೆದ ಒಂದು ವರ್ಷದಿಂದ ಸಚಿವನಾಗಿ ಮಾಡುತ್ತಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ  ಈ ರೀತಿ ಸುಳ್ಳು ವಿಷಯ ಪ್ರಸ್ತಾಪಿಸಿ ನನಗೆ ಮಾನಸಿಕ ಹಿಂಸೆ ನೀಡಲು ಪ್ರಯತ್ನಿಸುತ್ತಿದ್ದಾರೆ. ನಾನು ಇದ್ಯಾವುದಕ್ಕೂ ಬಗ್ಗುವವ, ಜಗ್ಗುವವನಲ್ಲ. ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಅವಿರತ ಕೆಲಸ ಮುಂದುವರಿಸಿದ್ದೇನೆ.

2008 ರಲ್ಲಿ ನಾನು ಮೊದಲ ಸಲ ಔರಾದ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ಕೆಲವರು ನನ್ನ ಜಾತಿ, ಜನ್ಮ ಸ್ಥಳದ ಬಗ್ಗೆ ಆಕ್ಷೇಪ ಎತ್ತಿದ್ದರು. ಆಗಿನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದ ಹರ್ಷಗುಪ್ತಾ ಅವರು ಅಧಿಕಾರಿಗಳಿಂದ ಈ ಬಗ್ಗೆ ತನಿಖೆ ನಡೆಸಿದ್ದರು. ಸ್ಥಳ ಪರಿಶೀಲನೆ, ಅಗತ್ಯ ದಾಖಲಾತಿ ಪರಿಶೀಲನೆ ಬಳಿಕ ಎಸ್ ಸಿ ಪ್ರಮಾಣಪತ್ರ ವಿತರಿಸಿ, ಎಲ್ಲ ಆಕ್ಷೇಪಗಳನ್ನು ತಳ್ಳಿ ಹಾಕಿದ್ದರು. ಇದಾದ ಬಳಿಕ 2009 ರಲ್ಲಿ ಬಾಬು ತಾರೆ ಎಂಬುವರು ಜಾತಿ, ಜನ್ಮದ ವಿಷಯ ಕುರಿತು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಸಮಗ್ರ ವಿಚಾರಣೆಯ ನಂತರ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.political-retirement-prove-allegations-minister-prabhu-chauhan-challenges-anjaneya

ಇದಾದ ಬಳಿಕ ೨೦೧೫ರಲ್ಲಿ ಶಂಕರರಾವ ದೊಡ್ಡಿ ಅವರು ಇದೇ ವಿಷಯದ ಕುರಿತು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ದೂರಿನ ಮೇಲೆ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಅವರಿಗೆ ತಮ್ಮ ವರದಿ ಸಲ್ಲಿಸಿ ಜಾತಿ ಪ್ರಮಾಣಪತ್ರ ಕುರಿತು ವಿಚಾರಣೆ ಮಾಡುವಂತೆ ಕೋರಿದ್ದರು.

ಜಾರಿ ನಿರ್ದೇಶನಾಲಯದ ವರದಿ  ಮೇಲೆ ಜಿಲ್ಲಾಧಿಕಾರಿ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ಸುಮಾರು ೧೫ ತಿಂಗಳು ಕಾಲ ಸುದೀರ್ಘ ವಿಚಾರಣೆ ನಡೆಸಿದೆ. ವಿಚಾರಣೆ ಸಂದರ್ಭದಲ್ಲಿ ದೂರುದಾರರು ಮಾಡಿದ ಆರೋಪಗಳಂತೆ ಮಹಾರಾಷ್ಟ್ರದ ಉದಗೀರ್ ತಾಲ್ಲೂಕಿನ ತೊಗರಿ ಮತ್ತು ತೊಂಡಚೀರ್ ಗ್ರಾಮಕ್ಕೆ ಸಂಬಂಧಿಸಿದ ಅಧಿಕಾರಿಗಳು ( ತಹಸೀಲ್ದಾರರು, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು) ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಆವಾಗ ನಾನು, ನನ್ನ ತಂದೆ ಭಾಮಲಾ ಭೀಮ್ಲಾ ಚವ್ಹಾಣ್ ಅವರು ಈ ಗ್ರಾಮಕ್ಕೆ ಸಂಬಂಧಿಸಿಲ್ಲ. ಅಲ್ಲಿ ಇದ್ದ ಹಾಗೂ ಯಾವುದೇ ಸೌಲಭ್ಯಗಳನ್ನು ಸಹ ಪಡೆದ ದಾಖಲೆಗಳು ಸಿಕ್ಕಿಲ್ಲ. ನಾನು ಔರಾದ್ ತಾಲ್ಲೂಕಿನ ಬೋಂತಿ ತಾಂಡಾ ನಿವಾಸಿ. ಅಲ್ಲೇ ಹುಟ್ಟಿ ಬೆಳೆದಿರುವೆ ಎಂದು ಅಧಿಕಾರಿಗಳ ತಂಡ ಬೋಂತಿ ತಾಂಡಾಕ್ಕೆ ಭೇಟಿ ನೀಡಿದಾಗ ಸ್ಪಷ್ಟವಾಗಿದೆ. ಈ ಎಲ್ಲಾ ವಿಚಾರಣೆ, ಸ್ಥಳ ಪರಿಶೀಲನೆ, ಪಂಚನಾಮೆ, ದಾಖಲಾತಿ ಪರಿಶೀಲನೆಯ ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದ ಡಾ. ಎಚ್.ಆರ್.ಮಹಾದೇವ ಮತ್ತು ಇತರೆ ಇಬ್ಬರು ಅಧಿಕಾರಿಗಳುಳ್ಳ ಸಮಿತಿಯು ೨೦೧೭ರ ನವೆಂಬರ್ ನಲ್ಲಿ ಶಂಕರರಾವ ದೊಡ್ಡಿ ಅವರ ದೂರು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಬಗ್ಗೆ  ಶಂಕರರಾವ ದೊಡ್ಡಿ ಅವರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಸಹ ಮೇಲ್ಮನವಿ ಅರ್ಜಿ ತಿರಸ್ಕಾರ ಆಗಿದೆ. ನನ್ನ ಜಾತಿ, ಜನ್ಮ ಸ್ಥಳದ ಬಗ್ಗೆ ಪದೇ ಪದೆ ಮಾಡಿದ ಆರೋಪ, ನೀಡಿರುವ ದೂರುಗಳೆಲ್ಲವೂ ಶುದ್ಧ ಸುಳ್ಳು ಎಂಬುದು ಸಾಬೀತಾಗಿದೆ. ಹೀಗಿದ್ದಾಗಲೂ ಇದರ ಹಿನ್ನೆಲೆ, ಸತ್ಯಾಸತ್ಯತೆ ಅರಿಯದೇ ಆಂಜನೇಯ ಅವರು ಇಲ್ಲಸಲ್ಲದ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಸಂಗತಿ ಎಂದು ತಿರುಗೇಟು ನೀಡಿದ್ದಾರೆ.

ಔರಾದ್ ಕ್ಷೇತ್ರ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದೆ. ಇಲ್ಲಿನ ೬೫ಕ್ಕೂ ಹೆಚ್ಚು ಗ್ರಾಮಗಳು ಮರಾಠಿ ಪ್ರಭಾವ ಹೊಂದಿವೆ. ನಾನು ಬಾಲ್ಯದಲ್ಲಿದ್ದಾಗ (80ರ ದಶಕದಲ್ಲಿ) ಈ ಭಾಗದಲ್ಲಿ ಕನ್ನಡದ ಶಾಲೆಗಳು ಇರಲಿಲ್ಲ. ಇಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ( MES) ಸಕ್ರಿಯವಾಗಿತ್ತು. ಎಂಇಎಸ್ ನಿಂದ ದಿ. ಬಾಪುರಾವ ಪಾಟೀಲ್ ಏಕಂಬೇಕರ್ ಕ್ಷೇತ್ರದ ಶಾಸಕರಾಗಿದ್ದರು. ಆವಾಗ ಇಲ್ಲಿ ಕನ್ನಡ ಶಾಲೆಗಳು ಇರದಿದ್ದ ಕಾರಣ ಅನಿವಾರ್ಯವಾಗಿ ಮರಾಠಿ ಕಲಿಯಬೇಕಾಯಿತು. ಆ ಸಂದರ್ಭದಲ್ಲಿ ಇದು ಎಲ್ಲರಿಗೂ ಅನಿವಾರ್ಯವೇ ಇತ್ತು. ಕ್ಷೇತ್ರದಲ್ಲಿರುವ ನನ್ನ ಸಮ ವಯಸ್ಕರು ಸಹ ಮರಾಠಿಯೇ ಕಲಿತಿದ್ದಾರೆ. ಈಗಲೂ ಔರಾದ್ ಕ್ಷೇತ್ರದ ನಾಲ್ಕು ಹೋಬಳಿಗಳ 50-60 ಹಳ್ಳಿಗಳ ಸುಮಾರು 1 ಲಕ್ಷದಷ್ಟು ಜನರು ಮರಾಠಿಯೇ ಮಾತನಾಡುತ್ತಾರೆ. ಹಾಗಾದರೆ ಇವರೆಲ್ಲ ಮಹಾರಾಷ್ಟ್ರದವರಾ? ಎಂಬುದಕ್ಕೆ ಆಂಜನೇಯ ಅವರೇ   ಉತ್ತರಿಸಬೇಕು ಎಂದು ಸವಾಲು ಹಾಕಿದ್ದಾರೆ.

ನಾನು ಶಾಸಕನಾದ ಬಳಿಕ ಗಡಿಯಲ್ಲಿ ಕನ್ನಡ ಕಟ್ಟುವ, ಕನ್ನಡ ಬೆಳೆಸುವ ಕೆಲಸ ಮಾಡುತ್ತಿದ್ದೇನೆ. ಎಲ್ಲ ಕಡೆಗಳಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಶಿಕ್ಷಕರನ್ನು ಆದ್ಯತೆ ಮೇಲೆ ನೇಮಕ ಮಾಡಲಾಗಿದೆ. ಈಗ ಬಹುತೇಕ ಮಕ್ಕಳಿಗೆ ಇಲ್ಲಿ ಕನ್ನಡ ಶಿಕ್ಷಣ ಸಿಗುತ್ತಿದೆ. ಗಡಿಯಲ್ಲಿ ನಿರಂತರ ಕನ್ನಡ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಭಾಷಾ ಸಾಮರಸ್ಯ ಎತ್ತಿ ಹಿಡಿಯಲಾಗಿದೆ ಎಂದು ಹೇಳಿದ್ದಾರೆ.

ನನ್ನಲ್ಲಿ ಶಿಕ್ಷಣ ಸೇರಿದಂತೆ ಯಾವುದೇ ಸಂಸ್ಥೆಗಳಾಗಲಿ, ಕಾರ್ಖಾನೆಗಳಾಗಲಿ ಇಲ್ಲ. ಗುತ್ತಿಗೆ ದಂಧೆ ಮಾಡುತ್ತಿಲ್ಲ. ಜನರ ಸೇವೆ ಬಯಸಿ ರಾಜಕೀಯ ಆಯ್ದುಕೊಂಡು ಹಗಲು ರಾತ್ರಿ ಎನ್ನದೇ ಅವರಿಗಾಗಿ ದುಡಿಯುತ್ತಿದ್ದೇನೆ. ಕ್ಷೇತ್ರದ ಹಾಗೂ ನನಗೆ ಕೊಟ್ಟಿರುವ ಇಲಾಖೆಯ ಅಭಿವೃದ್ಧಿಗೆ ಸಮಯ ಮೀಸಲಿಟ್ಟು ಕೆಲಸ ಮಾಡುತ್ತಿದ್ದೇನೆ. ನನ್ನ ಈ ಕೆಲಸ ಸಹಿಸದವರು ಮೇಲಿಂದ ಮೇಲೆ ಜಾತಿ, ಜನ್ಮ ಸ್ಥಳದ ಕುರಿತು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ತಲೆಬುಡವಿಲ್ಲದ ಅರ್ಥಹೀನ ಆರೋಪ ಮಾಡುತ್ತಿದ್ದಾರೆ. ಇನ್ನಾದರೂ ಸತ್ಯಕ್ಕೆ ಬೆಲೆ ಕೊಟ್ಟು ಸುಳ್ಳು ಹೇಳುವುದನ್ನು ಬಿಟ್ಟು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಸಚಿವ ಪ್ರಭು ಚೌಹಾಣ್ ಸಲಹೆ ನೀಡಿದ್ದಾರೆ.

Key words: Political retirement -prove -allegations -Minister Prabhu Chauhan- challenges -Anjaneya