ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್ – ಮಾಜಿ ಸಿಎಂ ಬೊಮ್ಮಾಯಿ‌ ಟೀಕೆ.

ಬೆಂಗಳೂರು,ಫೆಬ್ರವರಿ,16,2024(www.justkannada.in):  15 ಬಾರಿ ಬಜೆಟ್ ಮಂಡಿಸಿ 1.5 ಲಕ್ಷ ಕೋಟಿ ಸಾಲ ಮಾಡಿರುವ ದಾಖಲೆ ಸೃಷ್ಟಿಸಿರುವ ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರವನ್ನು ವಿರೋಧಿಸಲು ಬಜೆಟನ್ನು ಬಳಸಿಕೊಂಡಿದ್ದಾರೆ. ಬಜೆಟ್ ನ ಪಾವಿತ್ರ್ಯತೆಯನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಕೇಂದ್ರ ಸರ್ಕಾರದ ಅನುದಾನ‌ ಪಡೆಯಲು ಅನೇಕ ವೇದಿಕೆಗಳಿವೆ. ಜಿಎಸ್ ಟಿ ಕೌನ್ಸಿಲ್ ಇದೆ. ನೀತಿ ಆಯೋಗ ಇದೆ.  ಒಂದು ಬಾರಿಯೂ ನೀತಿ ಆಯೋಗದ ಸಭೆಗೆ ಹಾಜರಾಗದೇ ಆ ಸಂದರ್ಭದಲ್ಲಿ ಮಾತನಾಡದೇ ಬಜೆಟ್ ನಲ್ಲಿ ಕೇಂದ್ರ ಸರ್ಕಾರವನ್ನು ವಿರೋಧಿಸುತ್ತಿರುವುದು ರಾಜಕೀಯ ಕಾರಣಕ್ಕೆ. ರಾಜಕೀಯಕ್ಕಾಗಿ ಬಜೆಟ್ ಬಳಸಿಕೊಂಡಿರುವುದು ಖಂಡನೀಯ ಎಂದು ಹೇಳಿದರು.

ಕಳೆದ ವರ್ಷಕ್ಕಿಂತ ಸುಮಾರು 25 ಸಾವಿರ ಕೋಟಿ‌ ರೂ. ಸಾಲ ಮಾಡಿ ಅದರಲ್ಲಿ ಅಭಿವೃದ್ಧಿಗೆ ಕೇವಲ ಒಂದು ಸಾವಿರ‌ ಕೋಟಿ ಮಾತ್ರ ಬಳಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಬಂಡವಾಳ ವೆಚ್ಚ 54 ಸಾವಿರ ಕೋಟಿ ಇತ್ತು. ಈ ವರ್ಷ ಕೇವಲ 55 ಸಾವಿರ ಕೋಟಿಗೆ ಹೆಚ್ಚಳ ಮಾಡಿದ್ದಾರೆ.  ಅತಿ ಹೆಚ್ಚಿನ ದರದಲ್ಲಿ ಬಡ್ಡಿ ಸಾಲ ತಂದು ಅನುತ್ಪಾದಕ ವೆಚ್ಚಗಳಿಗೆ ಬಜೆಟ್ ಹಣ ವೆಚ್ಚ ಮಾಡುತ್ತಿದ್ದಾರೆ. ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿರುವುದು ಈ ಬಜೆಟ್ ನಲ್ಲಿ ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.

ತೆರಿಗೆ ಸಂಗ್ರಹದಲ್ಲಿಯೂ 14 ಸಾವಿರ ಕೋಟಿ ರೂ. ಕೊರತೆಯಾಗಿದೆ. ಅವರೇ ಹೇಳಿರುವಂತೆ 1.75 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಇಟ್ಟುಕೊಂಡಿದ್ದರು. ಆದರೆ ಕೇವಲ 1.61 ಲಕ್ಷ ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ 14 ಕೋಟಿ ರೂ. ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಕೇಂದ್ರ ಸರ್ಕಾರದಿಂದ ಬರುವ ಅನುದಾನ ಸಂಪೂರ್ಣ ಬಂದಿದೆ. ಇವರ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದೆ. ಅದನ್ಮು ಮುಚ್ಚಿಡಲು ಸುಳ್ಳಿನ ಕಂತೆಯ ಬಜೆಟ್ ಮಂಡನೆ ಮಾಡಿದ್ದಾರೆ. ಎಸ್ಸಿಪಿ ಟಿಎಸ್ಬಿಗೆ ಹಣ ನೀಡಿಲ್ಲ, ಶಿಕ್ಷಣಕ್ಕೆ ನೀರಾವರಿಗೆ ಹಣ ಇಟ್ಟಿಲ್ಲ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಚುನಾವಣೆಗೋಸ್ಕರ ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಕೃಷ್ಣಾ, ಭದ್ರಾ, ಮಹಾದಾಯಿ ಯೋಜನೆಗಳಿಗೆ ಯಾವುದೇ ಹಣ ನೀಡಿಲ್ಲ. ನೀರಾವರಿಗೆ ಸಂಪೂರ್ಣ ಅನ್ಯಾಯ ಮಾಡಿದ್ದಾರೆ. ಎಸ್ಸಿ ಎಸ್ಟಿಗಳಿಗೆ ಮೋಸದ ಬಜೆಟ್, ವಿದ್ಯಾರ್ಥಿಗಳಿಗೆ, ರೈತರಿಗೆ, ಮಹಿಳೆಯರಿಗೆ ಶೂನ್ಯ ಬಜೆಟ್ ಆಗಿದೆ. ರಾಜ್ಯದ ಇತಿಹಾಸದಲ್ಲಿ ಪ್ರತಿಪಕ್ಷ ಸಭಾತ್ಯಾಗ ಮಾಡುವ ಪರಿಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ಸರ್ಕಾರದ ಈ ಜನವಿರೋಧಿ ನೀತಿಯನ್ನು ಜನರಿಗೆ ತಲುಪಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

Key words: Political budget -lying – cover up- their failure – former CM -Bommai