ಫೆ.26 ರಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ 12 ರೈಲ್ವೆ ನಿಲ್ದಾಣಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ.

ಮೈಸೂರು,ಫೆಬ್ರವರಿ,24,2024(www.justkannada.in):  ಪ್ರಧಾನಮಂತ್ರಿ ನರೇಂದ್ರ ಮೋದಿ  ಅವರು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗದಾದ್ಯಂತ 12 ರೈಲ್ವೆ ನಿಲ್ದಾಣಗಳಿಗೆ ಮತ್ತು  ಒಂದು ರಸ್ತೆ ಕೆಳ ಸೇತುವೆಗೆ ಶಂಕುಸ್ಥಾಪನೆ ನೆರವೇರಲಿದ್ದಾರೆ ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆಬ್ರವರಿ 26 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಒಟ್ಟು 367.24 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ 12 ರೈಲ್ವೆ ನಿಲ್ದಾಣಗಳಿಗೆ ಮತ್ತು ಒಂದು ಕೆಳಸೇತುವೆಗೆ ಶಂಕುಸ್ಥಾಪನೆ ನೆರವೇರಲಿದ್ದಾರೆ . ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ಮೈಸೂರು ವಿಭಾಗದ 12 ನಿಲ್ದಾಣಗಳಾದ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಮೈಸೂರು, ರಾಣೆಬೆನ್ನೂರು, ಸಾಗರ ಜಂಬಗಾರು, ಸಕಲೇಶಪುರ, ಶಿವಮೊಗ್ಗ ಟೌನ್, ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ ಮತ್ತು ತಿಪಟೂರಿನ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲ ಹೆಚ್ಚಿಸಲು ಆಧುನಿಕ ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗಿದೆ ಎಂದರು.

ಅಮೃತ್ ಭಾರತ್ ಸ್ಪೇಷನ್ ಯೋಜನೆಯು ನಿಲ್ದಾಣಗಳ ನಿರಂತರ ಅಭಿವೃದ್ಧಿಗೆ ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿದೆ. ಇದು ನಿಲ್ದಾಣಗಳಲ್ಲಿ ವಿವಿಧ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಧಾನ ಯೋಜನೆಗಳನ್ನು ರಚಿಸುವುದು ಮತ್ತು ಹಂತ ಹಂತಗಳಲ್ಲಿ ಅವುಗಳನ್ನು ಕಾರ್ಯಗತಗೊಳಿಸುವುದನ್ನು ಒಳಗೊಂಡಿರುತ್ತದೆ.

ಈ ಮೌಲ್ಯ ವರ್ಧನೆಗಳಲ್ಲಿ ನಿಲ್ದಾಣಕ್ಕೆ ಪ್ರವೇಶಗಳನ್ನು ಸುಧಾರಿಸುವುದು, ಕಾಯುವ ಪ್ರದೇಶಗಳು, ಶೌಚಾಲಯ ಸೌಲಭ್ಯಗಳು, ಅಗತ್ಯಗಳಿಗೆ ತಕ್ಕಂತಹ ಲಿಫ್ಟ್ ಮತ್ತು ಎಸ್ಕಲೇಟರ್ ವ್ಯವಸ್ಥೆ, ಸ್ವಚ್ಛತೆ, ಉಚಿತ ವೈ-ಫೈ ನೀಡುವಿಕೆ, ‘ಒಂದು ನಿಲ್ದಾಣದ ಒಂದು ಉತ್ಪನ್ನ’ ದಂತಹ ಉಪಕ್ರಮಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಮಳಿಗೆಗಳನ್ನು ಸ್ಥಾಪಿಸುವುದು, ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳನ್ನು ಹೆಚ್ಚಿಸುವುದು, ಕಾರ್ಯನಿರ್ವಾಹಕ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸುವುದು, ವ್ಯಾಪಾರ/ವ್ಯವಹಾರ ಸಭೆಗಳಿಗೆ ಸ್ಥಳಗಳನ್ನು ಗೊತ್ತುಪಡಿಸುವುದು, ಭೂದೃಶ್ಯ ವಿನ್ಯಾಸ ಸಂಯೋಜಿಸುವುದು ಮತ್ತು ಪ್ರತಿ ನಿಲ್ದಾಣದ ಅವಶ್ಯಕತೆಗಳಿಗೆ ತಕ್ಕಂತಹ ಸೌಲಭ್ಯಗಳನ್ನು ಪೂರೈಸುವುದು ಸೇರಿವೆ ಎಂದು ಶಿಲ್ಪಿ ಅಗರ್ವಾಲ್ ತಿಳಿಸಿದರು.

ಇದಲ್ಲದೆ, ಈ ಯೋಜನೆಯಲ್ಲಿ ನಿಲ್ದಾಣದ ಸಂರಚನೆಗಳನ್ನು ನವೀಕರಿಸುವುದು, ಎರಡೂ ಕಡೆಗಳಲ್ಲಿ ಸುತ್ತಮುತ್ತಲಿನ ನಗರ ಪ್ರದೇಶಗಳೊಂದಿಗೆ ನಿಲ್ದಾಣಗಳನ್ನು ಸಂಯೋಜಿಸುವುದು, ಬಹುವಿಧ ಸಂಪರ್ಕಗಳನ್ನು ಉತ್ತೇಜಿಸುವುದು, ಅಂಗವಿಕಲ (ದಿವ್ಯಾಂಗ್ಟನ್) ವ್ಯಕ್ತಿಗಳಿಗೆ ಸೌಲಭ್ಯಗಳನ್ನು ಒದಗಿಸುವುದು, ಸುಸ್ಥಿರ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಅಳವಡಿಸುವುದು, ನಿಲುಭಾರ (ಜಲ್ಲಿಕಲ್ಲು) ಇಲ್ಲದ ಹಳಿಗಳನ್ನು ಪರಿಚಯಿಸುವುದು, ಅಗತ್ಯವಿದ್ದಾಗ ಮತ್ತು ಸುಧಾರಣೆಗಳ ಕಾರ್ಯಸಾಧ್ಯತೆ ಪರಿಗಣಿಸಿ ಅಗತ್ಯವಿದ್ದೆಡೆ ‘ಬಹುಮಹಡಿ ಪ್ಲಾಜಾ ಒದಗಿಸಲು ಮುಂದಾಗಿದೆ ಎಂದು ತಿಳಿಸಿದರು.

Key words: PM Modi- laid foundation stones – 12 railway stations – South Western Railway- Mysore Division