ದಿಲ್ಲಿ ಬಿಜೆಪಿ ಕಚೇರಿಗೆ ಹುಸಿಬಾಂಬ್ ಬೆದರಿಕೆ ಕರೆ ಮಾಡಿದ್ದ ಮೈಸೂರಿನ ವೃದ್ಧ ಪೊಲೀಸರ ವಶಕ್ಕೆ

ಮೈಸೂರು, ಜೂನ್ 23,2019 (www.justkannada.in): ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಹುಸಿಬಾಂಬ್ ಬೆದರಿಕೆ ಹಾಕಿದ್ದ ಆರೋಪದ ಮೇಲೆ ನಗರದ ವೃದ್ಧರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿದ್ಧಾರ್ಥನಗರ ನಿವಾಸಿ ಸುಕನ್‍ರಾಜ್(85) ಪೊಲೀಸರ ವಶದಲ್ಲಿರುವ ವೃದ್ಧ. ದೆಹಲಿಯಲ್ಲಿರುವ ಕೇಂದ್ರ ಬಿಜೆಪಿ ಕಚೇರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಸಂದೇಶವೊಂದು ಬಂದಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರಿಗೆ ಮೈಸೂರಿನಿಂದ ಕರೆ ಬಂದಿರುವುದಾಗಿ ತನಿಖೆಯಿಂದ ದೃಢಪಟ್ಟಿತು. ನಂತರ ಕರ್ನಾಟಕದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು, ಮೈಸೂರಿನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ‘ಕರೆ ಮಾಡಿದ ವ್ಯಕ್ತಿ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು, ಕಣ್ಣುಗಳು ಸರಿಯಾಗಿ ಕಾಣುತ್ತಿಲ್ಲ. ಕಿವಿಗಳೂ ಕೇಳುತ್ತಿಲ್ಲ. ವೈದ್ಯಕೀಯ ಪರೀಕ್ಷೆ ಮಾಡಿಸಿ ಮುಂದಿನ ಕ್ರಮ ಕ್ರಮ ಕೈಗೊಳ್ಳಲಾಗುವುದು,”ಎಂದು ಡಿಸಿಪಿ ಮುತ್ತುರಾಜ ತಿಳಿಸಿದ್ದಾರೆ.

ಕರೆ ಮಾಡಿದ ವ್ಯಕ್ತಿಯ ಮೊಬೈಲ್‌ ಸಂಖ್ಯೆಯ ಆಧಾರದ ಮೇಲೆ ದಿಲ್ಲಿ ಪೊಲೀಸರು, ಆತ ಮೈಸೂರಿನಿಂದ ಕರೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ, ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದರು.