ಕಲಬುರಗಿ, ಅಕ್ಟೋಬರ್ 30,2025 (www.justkannada.in): ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದಕಲಬುರ್ಗಿ ಹೈಕೋರ್ಟ್ ಪೀಠವು ನವೆಂಬರ್ 5ರಂದು ಮಧ್ಯಾಹ್ನ 3 ಗಂಟೆಗೆ ಅಡ್ವಕೇಟ್ ಜನರಲ್ ಕಚೇರಿಯಲ್ಲಿಯೇ ಮತ್ತೊಂದು ಸಭೆ ನಡೆಸಲು ಸೂಚಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿಕೆ ಮಾಡಿದೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚನಲಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು (ಅಕ್ಟೋಬರ್ 30) ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ನವೆಂಬರ್ 5 ರಂದು ಮತ್ತೊಂದು ಶಾಂತಿ ಸಭೆ ಮಾಡಲು ಸೂಚಿಸಿದೆ. ಹೀಗಾಗಿ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್ಎಸ್ಎಸ್ಗೆ ಹಿನ್ನಡೆಯಾದಂತಾಗಿದೆ.
ನವೆಂಬರ್ 5ರಂದು ಅರ್ಜಿದಾರರು, ಅವರ ವಕೀಲರೊಂದಿಗೆ ಶಾಂತಿ ಸಭೆ ನಡೆಸಲು ಸೂಚಿಸಲಾಗಿದ್ದು, ಇಂತಹ ಘಟನೆಯಾದಾಗ ಪರಿಹಾರ ಹೇಗಿರಬೇಕೆಂಬುದಕ್ಕೆ ಇದು ಮಾರ್ಗಸೂಚಿಯಾಗಬೇಕು ಎಂದು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರು ಸರ್ಕಾರ, ಅರ್ಜಿದಾರರಿಗೆ ತಿಳಿಸಿದ್ದಾರೆ.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ, ಶಾಂತಿ ಸಭೆಗೆ ರಿಟ್ ಅರ್ಜಿದಾರರೇ ಹಾಜರಾಗಿರಲಿಲ್ಲ . ವಿವಾದವನ್ನು ಶೀಘ್ರ ಮುಗಿಸಲು ಅರ್ಜಿದಾರರೇ ಸಹಕರಿಸುತ್ತಿಲ್ಲ. ಅರ್ಜಿದಾರರ ಬದಲಿಗೆ ಬೇರೆ ವ್ಯಕ್ತಿಗಳು ಹಾಜರಾಗಿದ್ದಾರೆ ಎಂದು
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅರುಣ್ ಶ್ಯಾಮ್, ಅರ್ಜಿದಾರರ ಮನೆಯಲ್ಲಿ ಸಾವು ಸಂಭವಿಸಿದ್ದರಿಂದ ಶಾಂತಿ ಸಭೆಗೆ ಅವರು ಬಂದಿರಲಿಲ್ಲ ಎಂದು ಹೇಳಿದರು.
Key words: permission, RSS, road march, High court, Hearing, adjourned







