ಭಾಷಣ್ ಸೇ ರೇಶನ್ ನಹಿ ಮಿಲ್ತಿ: ಭಾಷಣಗಳಿಂದಲೇ ಜನರ ಹೊಟ್ಟೆ ತುಂಬಲ್ಲ- ಪ್ರಧಾನಿ ಮೋದಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಗುಡುಗು

ಕಲ್ಬುರ್ಗಿ,ಮೇ,7,2019(www.justkannada.in): ” ಭಾಷಣ್ ಸೇ ರೇಶನ್ ನಹಿ ಮಿಲ್ತೀ ಕಾಮ್ ಸೇ ಮಿಲ್ತಿ”  ಎಂದು ಕಲ್ಬುರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಮಲ್ಲಿಕಾರ್ಜುನ ಖರ್ಗೆ ಅವರು  ಪ್ರಧಾನಿ ಮೋದಿಗೆ ಟಾಂಗ್ ನೀಡಿದರು.

ಚಂದನಕೇರಾ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,  ಮೋದಿ ಪ್ರಧಾನಿಯಾದ ಮೇಲೆ ಕೆಲಸ ಮಾಡಿಲ್ಲ. ಕೇವಲ ಭಾಷಣ ಮಾಡಿ ಐದು ವರ್ಷ ಕಳೆದಿದ್ದಾರೆ. ಬರೀ ಭಾಷಣಗಳಿಂದಲೇ ಜನರನ್ನು ಹೊಟ್ಟೆತುಂಬಲ್ಲ‌. ಜನಪರ ಕೆಲಸ ಮಾಡಿದಾಗ ಮಾತ್ರ ಅವರ ಕಷ್ಟ ನೀಗುತ್ತದೆ. ಚುನಾವಣೆಗೆ ಮುನ್ನ ನೀಡಿದ ವಾಗ್ದಾನದಂತೆ ಕೆಲಸ ಮಾಡದೇ ಜನರನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದ್ದಾರೆ  ಎಂದು ಗುಡುಗಿದರು.

ಇದೇ ವೇಳೆ ಉಮೇಶ್ ಜಾಧವ್ ವಿರುದ್ದ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸೇರಿದ ಜಾಧವ್ ಇಲ್ಲಿನ ಜನರ ನಂಬಿಕೆಗಳಿಗೆ ಧಕ್ಕೆ ತರುವ ಮೂಲಕ ಹಣಕ್ಕೆ ತಮ್ಮನ್ನು ಮಾರಾಟವಾಗಿದ್ದಾರೆ. ಮಾರಾಟವಾದವನಿಗೆ ತಕ್ಕ ಪಾಠ ಕಲಿಸಬೇಕು. ಈ ಪಾಠ ಮುಂದೆ ರಾಜಕೀಯದಲ್ಲಿ ಯಾರೂ ಪಕ್ಷ ಬದಲಿಸಂತದಾಗಿರಬೇಕು ಎಂದು ಕರೆ ನೀಡಿದರು.

ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ‌ ಮೋದಿಯ ದುರಾಡಳಿತಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಹಾಗಾಗಿ ಇದೇ ೨೩ ನೆ ತಾರೀಖಿನಂದು ದೇಶದಲ್ಲಿ ಬಹಳ ದೊಡ್ಡ ಬದಲಾವಣೆಯಾಗಿ ಮೋದಿ ಮನೆಗೆ ಹೋಗಲಿದ್ದಾರೆ ಎಂದರು.

ಕುಂದಗೋಳದಲ್ಲಿ ಉಪಚುನಾವಣೆ ನಡೆಯುತ್ತಿರುವುದಕ್ಕೆ ಅಲ್ಲಿ ನಮ್ಮ ಶಾಸಕರಾಗಿ ಸಚಿವರಾಗಿದ್ದವರು ನಿಧನರಾಗಿದ್ದಾರೆ. ಆದರೆ ಚಿಂಚೋಳಿಯಲ್ಲೂ ನಡೆಯುತ್ತಿದೆ. ಇಲ್ಲಿ ಯಾರಾದರೂ ನಿಧನರಾಗಿದ್ದಾರಾ? ಯಾರು ನಿಧನರಾಗಿಲ್ಲ. ನಮ್ಮ ಪಕ್ಷದಿಂದಲೇ ನಿಂತು ಗೆದ್ದು ಬಂದು ರಾಜೀನಾಮೆ ನೀಡಿ ಮತ್ತೊಂದು ಪಕ್ಷಕ್ಕೆ ಸೇರಿದ್ದರಿಂದ ನಡೆಯುತ್ತಿದೆ ಎಂದು ಕಿಡಿಕಾರಿದರು.

ಜಾಧವ್‌ ನಿಗೆ ನಮ್ಮ ಅಂದಿನ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸಹಕಾರ ಮಾಡಿದರು. ಆದರೆ ಯಾಕೆ ಬಿಜೆಪಿಗೆ ಹೋದರು? ಕಾರಣವಿಷ್ಟೆ, ಬಿಜೆಪಿಯವರ ಆಮೀಷಕ್ಕೆ ಬಲಿಯಾಗಿರುವುದು. ಹೀಗೆ ತಮ್ಮ ಮಾತೃ ಪಕ್ಷಕ್ಕೆ ದ್ರೋಹಬಗೆದು ಹೊರಗೆ ಹೋಗಿ ಮತ್ತೆ ಉಪಚುನಾವಣೆ ಬರುವಂತೆ ಮಾಡಿದವರಿಗೆ ಮತ ನೀಡಬೇಡಿ. ಎರಡು ಬಾರಿ ಶಾಸಕನಾದರೆ ಸಚಿವರಾಗಬೇಕು ಎಂದು ಆಸೆಪಡುವುದು ದುರಾಸೆ. ನಾನೂ ಕೂಡಾ ನಾಲ್ಕು ಸಲ ಶಾಸಕನಾದ ಮೇಲೆ ಸಚಿವನಾದೆ. ಮತ್ತೆ ಪಕ್ಷ ಬೇರೆ ಜವಾಬ್ದಾರಿ ವಹಿಸಿದ ಮೇಲೆ ಅದನ್ನೂ ನಿರ್ವಹಿಸುತ್ತಿದ್ದೇನೆ. ನಿನಗೂ ಸಚಿವನನ್ನಾಗಿ ಮಾಡುತ್ತೇವೆ ಎಂದು ಭರವಸೆ ಕೂಡಾ ನೀಡಲಾಗಿತ್ತು. ಆದರೆ, ತಾಳ್ಮೆಯಿಲ್ಲದೇ ದುರಾಸೆಯಿಂದ ಹೊರಗೆ ಬಂದವನು ನಮ್ಮ ಪಕ್ಷ ಹಾಗೂ ನಾಯಕರನ್ನು ಟೀಕಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಯಾವ ಮನೆಯಲ್ಲಿ ಆಶ್ರಯ ಪಡೆದಿದ್ದಿರೋ ಅದೇ ಮನೆಗೆ ಕನ್ನ ಹಾಕಿದ ನಿಮ್ಮನ್ನು ವಂಚಕ, ಹೇಡಿ ಎನ್ನಬೇಕಾಗುತ್ತದೆ. ಅಂತವರಿಗೆ ಹಾಗೂ ಅವರ ಮಗನಿಗೆ ಇಲ್ಲಿ ಮತ್ತೆ ಕಾಲಿಡದಂತೆ ಮಾಡಿ ಎಂದು ಕರೆ ನೀಡಿದರು.

ಹಿಂದುತ್ವ, ಕಾಶ್ಮೀರ, ರಾಮಂದಿರ ಮುಂತಾದ ವಿಚಾರಗಳನ್ನು ಮುಂದಿಟ್ಟಕೊಂಡು ಬಿಜೆಪಿ‌ ಚುನಾವಣೆಗೆ ಬರುತ್ತಿದೆ. ಹಾಗಾಗಿ, ಯಾವುದೇ ತತ್ವ‌ಸಿದ್ದಾಂತಗಳಿಲ್ಲದ ಪಕ್ಷಕ್ಕೆ ಮತನೀಡಬೇಡಿ ಎಂದು ಮನವಿ ಮಾಡಿದರು.

ನಂತರ ಡಿಸಿಎಂ ಪರಮೇಶ್ವರ್  ಮಾತನಾಡಿ, ಇ ಎಸ್ ಐ ನಲ್ಲಿ‌ಡಾಕ್ಟರ್ ಆಗಿದ್ದ ಜಾಧವ್ ಇಂಜೆಕ್ಷನ್ ನೇ ಏನು ನೀರು ತುಂಬಿಸಿ ಮಾಡುತ್ತಿದ್ದನೋ ಏನೋ ? ನನಗಂತೂ ಗೊತ್ತಿಲ್ಲಪ್ಪ ಎಂದು ಕುಟುಕಿದರು.

ಜಾಧವ್ ಸರಕಾರ ನೌಕರನಾಗಿದ್ದಾಗ ಅದೇನೋ ಮಾಡಿ ಸಸ್ಪೆಂಡ್ ಆಗಿದ್ದನಂತೆ. ಆತನ ಮೇಲೆ ಮೇಲೆ ವಿಚಾರಣೆ ಬಾಕಿಯಿದೆಯಂತೆ.‌ ಇರಲಿ ಆ ಕುರಿತು ನಾನು ವಿಚಾರಸ್ತೀನಿ. ಸರಕಾರ ನಮ್ಮದೇ ಇದೆ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.

ಒಂದು ದಿನದ ಮುಂಚೆ ನಮ್ಮೊಂದಿಗೆ ಇದ್ದಂವ ಮಾರನೇ ದಿನ ಬಾಂಬೆನಲ್ಲಿ ಬಿಜೆಪಿಯವರ ಜೊತೆ ಪಂಚತಾರ ಹೊಟೇಲ್ ನಲ್ಲಿ ಕಾಣಿಸಿಕೊಂಡ.‌ ಜಾಧವ್ ಬಿಜೆಪಿಯವರಿಂದ ೫೦ ಕೋಟಿ ಹಣ ಪಡೆದು ಸೇಲ್ ಆಗಿದ್ದಾನೆ ಅಂತ ಯಾರೋ ಹೇಳ್ತಾ ಇದ್ರು. ಜನರ ನಂಬಿಕೆ ಹಾಳು ಮಾಡಿದ್ದಲ್ಲದೇ ಈಗ ಮಗನ ಪರ ಮತಕೇಳಲು ಬಂದಿದ್ದಾನೆ. ಅವನ್ನನ್ನೂ ಕೂಡಾ ಮಾರಾಟ ಮಾಡಬಹುದು ಎನ್ನುವ ಪ್ಲಾನ್ ಇದೆಯೇನೋ ಎಂದು ಅನುಮಾನ ವ್ಯಕ್ತಪಡಿಸಿದರು.

ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ರಹೀಂಖಾನ್, ಕಾರ್ಯಾದ್ಯಕ್ಷರಾದ ಈಶ್ವರ ಖಂಡ್ರೆ, ಶಾಸಕರಾದ ಎಚ್ ಟಿ ಸೋಮಶೇಖರ್, ಕೈಲಾಶ ನಾಥ ಪಾಟೀಲ್ ಜಿಲ್ಲಾ ಕಾಂಗ್ರೇಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ್, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಮತ್ತಿತರಿದ್ದರು.

Key words: People -not –food- speeches-Mallikarjun Kharge –tong-Prime Minister Modi