ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆ ಜನರಿಗೆ ಅನ್ಯಾಯ- ಎಂಎಲ್ ಸಿ ದಿನೇಶ್‌ ಗೂಳಿಗೌಡ ಅಸಮಾಧಾನ.

ಮಂಡ್ಯ,ಡಿಸೆಂಬರ್, 21,2022(www.justkannada.in): ರಾಷ್ಟ್ರೀಯ ಹೆದ್ದಾರಿ-275, 6 ಪಥದ ಬೆಂಗಳೂರು-ಮೈಸೂರು ರಸ್ತೆಯ ಅಭಿವೃದ್ಧಿ ಹಾಗೂ ಮಂಡ್ಯ ಜಿಲ್ಲೆಯ ಗಡಿ ಭಾಗವಾದ ನಿಡಘಟ್ಟದ ಬಳಿ ಹೆದ್ದಾರಿಗೆ ಆಗಮನ-ನಿರ್ಗಮನ ಸಂಪರ್ಕ ವ್ಯವಸ್ಥೆ ಬಗ್ಗೆ ಶಾಸಕರು ಕೇಳಿದ್ದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಸದನದಲ್ಲಿ ಉತ್ತರ ನೀಡಿದ್ದಾರೆ. ಆದರೆ, ಈಗ ಸರ್ಕಾರ ಕೈಗೊಂಡಿರುವ ನಿರ್ಧಾರ ಜನಸ್ನೇಹಿಯಾಗಿಲ್ಲ. ಜನವಿರೋಧಿ ಕ್ರಮವಾಗಿದೆ. ಈ ಸಂಬಂಧ ಉದ್ಘಾಟನೆಗೆ ಮೊದಲು ಚರ್ಚೆ ಆಗಬೇಕು ಎಂದು ಶಾಸಕರಾದ ದಿನೇಶ್‌ ಗೂಳಿಗೌಡ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ರವರು, ಸಂಸತ್ ಸದಸ್ಯರು ಹಾಗೂ ನಾನು ಮಂಡ್ಯ ಜಿಲ್ಲೆಯ ಗಡಿ ಭಾಗವಾದ ನಿಡಘಟ್ಟದ ಬಳಿ ಹೆದ್ದಾರಿಗೆ ಆಗಮನ-ನಿರ್ಗಮನ ಸಂಪರ್ಕವನ್ನು ಕಲ್ಪಿಸುವಂತೆ ಸಂಬಂಧಪಟ್ಟ ಪ್ರಾಜೆಕ್ಟ್ ಡೈರೆಕ್ಟರ್ ಜೊತೆಗೂಡಿ ಸ್ಥಳ ಪರಿಶೀಲನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಗಡಿ ವ್ಯಾಪ್ತಿಯಲ್ಲಿ ಆಗಮನ-ನಿರ್ಗಮನವನ್ನು ಕಲ್ಪಿಸಲು ಅವಕಾಶ ಮಾಡಿಕೊಡುತ್ತೇವೆಂದು ಉಸ್ತುವಾರಿ ಸಚಿವರಿಗೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಇಂದು ಸರ್ಕಾರ ಕೊಟ್ಟಿರುವ ಉತ್ತರದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣಕ್ಕೆ ಚನ್ನಪಟ್ಟಣ ತಾಲ್ಲೂಕಿನ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ದಿನೇಶ್‌ ಗೂಳಿಗೌಡ ಹೇಳಿದ್ದಾರೆ.

ಮದ್ದೂರು ಮಾರ್ಗವಾಗಿ ಕೆಸ್ತೂರು-ಕುಣಿಗಲ್-ಕೆ.ಎಂ.ದೊಡ್ಡಿ-ಮಳವಳ್ಳಿ-ಬೆಸಗರಹಳ್ಳಿ-ಕೊಪ್ಪಕ್ಕೆ ಹೋಗುವ ಪ್ರಯಾಣಿಕರು ಸಾರ್ವಜನಿಕರಿಗೆ ಇದರಿಂದ ಅನಾನುಕೂಲವಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಗಡಿ ಭಾಗದ ಒಳಗಡೆ ನಿರ್ಗಮನ-ಆಗಮನವನ್ನು ನೀಡುತ್ತೇವೆಂದು ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಪ್ರವೇಶವನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕಲ್ಪಿಸಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಅನೇಕ ಬಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಡನೆ ಸ್ಥಳ ಪರಿಶೀಲನೆ ನಡೆಸಿ ಎಷ್ಟೇ ತಿಳಿ ಹೇಳಿದ್ದರೂ ಸಹ ಸರ್ಕಾರ ತಪ್ಪು ಉತ್ತರವನ್ನೇ ನೀಡುತ್ತಿದೆ ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಈ ಭಾಗದ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು, ಈ ಹೆದ್ದಾರಿ ಉದ್ಘಾಟನೆಯಾಗುವ ಮುನ್ನ ಆಗಮನ-ನಿರ್ಗಮನ ಸ್ಥಳಗಳು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲೇ ಇರಬೇಕಾ ಅಥವಾ ಮಂಡ್ಯ ಜಿಲ್ಲೆ ಗಡಿ ಪ್ರಾರಂಭದಿಂದ ಇರಬೇಕಾ ಎಂಬುದರ ಬಗ್ಗೆ ಬಹಿರಂಗ ಚರ್ಚೆಯಾಗಿ ಬೆಳಕು ಚೆಲ್ಲಬೇಕೆಂದು ಶಾಸಕ ದಿನೇಶ್‌ ಗೂಳಿಗೌಡ ಆಗ್ರಹಿಸಿದ್ದಾರೆ.

Key words: people -Mandya district – Bangalore-Mysore -highway – MLC- Dinesh Gooligowda