ಪ್ರವಾಸಕ್ಕೆ ಹೊರಟವರ ಉತ್ಸಾಹಕ್ಕೆ ತಣ್ಣೀರೆರಚಿದ ಪೆಟ್ರೋಲ್ ಅಭಾವ.

ಬೆಂಗಳೂರು, ಅಕ್ಟೋಬರ್ 18, 2021(www.justkannada.in): ನವರಾತ್ರಿ ಹಬ್ಬದ ಸಲುವಾಗಿ ಕಳೆದ ವಾರಾಂತ್ಯದಲ್ಲಿ ಸಾಲು ಸಾಲು ರಜೆಗಳಿದ್ದವು. ಈ ಹಿನ್ನೆಲೆಯಲ್ಲಿ ಅನೇಕರು ಪ್ರವಾಸ ಹೋಗುವ ಯೋಜನೆ ಹಾಕಿಕೊಂಡಿದ್ದರು. ಆದರೆ ನಗರದಿಂದ ದೂರ ಹೋಗಿ ವಾರಾಂತ್ಯವನ್ನು ನೆಮ್ಮದಿಯಾಗಿ ಕಳೆಯುವ ಕನಸು ಕಂಡಿದ್ದ ಅನೇಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಎದುರಾಗಿ ತಮ್ಮ ಆಸೆಗೆ ತಣ್ಣೀರೆರಚಿದಂತಾಯಿತು. ಏಕೆಂದರೆ ಇಂಧನ ಸಾಗಿಸುವ ಟ್ರಕ್‌ ಗಳ ಚಾಲಕರ ಕೊರತೆಯಿಂದಾಗಿ ಬಹುಪಾಲು ಪೆಟ್ರೋಲ್ ಬಂಕ್‌ ಗಳಲ್ಲಿ ಇಂಧನದ ಸ್ಟಾಕ್ ಇರಲಿಲ್ಲ, ಇನ್ನೂ ಕೆಲವು ಬಂಕ್‌ ಗಳು ಮುಚ್ಚಿದವು.

ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನೆಲಮಂಗಲ, ಸೋಲೂರು, ತಿಪ್ಪಸಂದ್ರ, ಕುಣಿಗಲ್‌ ನ ಸುತ್ತಮುತ್ತಲಿನಲ್ಲಿ ಸುಮಾರು 30ಕ್ಕೂ ಹೆಚ್ಚಿನ ಸಂಖ್ಯೆಯ ಪೆಟ್ರೋಲ್ ಬಂಕ್‌ ಗಳಲ್ಲಿ ಇಂಧನ ಇರಲಿಲ್ಲ. ಹಾಗಾಗಿ ಹೆದ್ದಾರಿಯಲ್ಲಿ ವಾಹನಕ್ಕೆ ಇಂಧನ ತುಂಬಿಸಿಕೊಂಡು ಮುಂದೆ ಹೋಗೋಣ ಎಂದುಕೊಂಡಿದ್ದಂತಹ ಅನೇಕ ವಾಹನ ಮಾಲೀಕರು, ಅದರಲ್ಲಿಯೂ ವಿಶೇಷವಾಗಿ ದ್ವಿಚಕ್ರವಾಹನ ಚಾಲಕರು ಬಹಳ ದೂರದವರೆಗೆ ತಮ್ಮ ವಾಹನಗಳನ್ನು ತಳ್ಳಿಕೊಂಡು ಹೋಗುವ ಪ್ರಸಂಗ ಎದುರಾಯಿತು.

ಪ್ರವಾಸ ಹೊರಟ ಅನೇಕರು ಹೆದ್ದಾರಿಯಲ್ಲಿ ಬರುವ ಯಾವುದಾದರೂ ಪೆಟ್ರೋಲ್ ಬಂಕ್‌ ನಲ್ಲಿ ವಾಹನಕ್ಕೆ ಇಂಧನ ತುಂಬಿಸಿಕೊಂಡು ಹೋಗಬಹುದು ಎಂದು ಹೊರಟಿದ್ದರು. ಆದರೆ ಅವರಿಗೆ ಈ ಬಿಕ್ಕಟ್ಟಿನ ಕುರಿತು ಯಾವುದೇ ಕಲ್ಪನೆ ಇರಲಿಲ್ಲ.

ಆಯುಧ ಪೂಜೆಯ ಕಾರಣದಿಂದಾಗಿ ಇಂಧನ ಸರಬರಾಜು ಮಾಡುವ ಅನೇಕ ಟ್ರಕ್‌ ಗಳು ಸ್ಥಗಿತಗೊಂಡಿದ್ದವು. ವಾರಾಂತ್ಯವನ್ನು ಸಂತೋಷವಾಗಿ ಕಳೆಯಲು ಬಯಸಿದ ಪ್ರವಾಸಿಗರಿಂದಾಗಿ ಬಂಕ್‌ ಗಳಲ್ಲಿ ಎದುರಾದ ತೀವ್ರ ಬೇಡಿಕೆಯ ಕಾರಣದಿಂದಾಗಿ ಅಲ್ಪಸ್ವಲ್ಪ ಉಳಿದಿದ್ದ ಇಂಧನವೂ ಮುಗಿದಿತ್ತು.

ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಒಂದು ಸಹಾಯವಾಣಿ ಇದೆ. ಆದರೆ ಆ ಸಹಾಯವಾಣಿ ಯಾವುದೇ ರೀತಿ ನೆರವಾಗಲಿಲ್ಲ. ಹೆದ್ದಾರಿ ಸಹಾಯವಾಣಿಗೆ ಕರೆ ಮಾಡಿದ ಬಹುತೇಕ ಚಾಲಕರಿಗೆ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಮೂಲಕ ನೆರವು ಪಡೆಯುವಂತೆ ಸೂಚಿಸಲಾಯಿತು. ಹೆದ್ದಾರಿ ನೆರವಿನ ತಂಡಗಳನ್ನು ಹೊಂದಿರುವ ಟೋಲ್ ನಿರ್ವಾಹಕರ ಬಳಿಯೂ ಇದಕ್ಕೆ ಯಾವುದೇ ಪರಿಹಾರ ಇರಲಿಲ್ಲ.

ಈ ಕುರಿತು ಮಾತನಾಡಿದ ಒಂದು ಪೆಟ್ರೋಲ್ ಬಂಕ್‌ ನ ನಿರ್ವಾಹಕರು ಹೇಳಿದ ಪ್ರಕಾರ, “ಈ ಮಾರ್ಗದಲ್ಲಿ ಬರುವ ಬಹುಪಾಲು ಪೆಟ್ರೋಲ್ ಬಂಕ್‌ ಗಳಿಗೆ ಎರಡು ದಿನಗಳಿಂದ ಇಂಧನ ಸರಬರಾಜೇ ಆಗಿಲ್ಲ. ಇದು ಅನಿರೀಕ್ಷಿತ. ಇದರಿಂದಾಗಿ ಜನರು ಬಹಳ ಪರದಾಡಬೇಕಾಯಿತು. ಆದರೆ ಮುಂದೆಂದೂ ಹೀಗೆ ಆಗದಿರುವಂತೆ ನಾವು ಎಚ್ಚರವಹಿಸುತ್ತೇವೆ,” ಎಂದರು.

ಪ್ರವಾಸ ಹೊರಟ ಶಂಕರ್ ಎನ್ನುವವರು, “ಬಂಕ್ ಮಾಲೀಕರು ಹಾಗೂ ಸರ್ಕಾರ ಈ ಸಮಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು. ಹಬ್ಬಗಳು ಹಾಗೂ ವಾರಾಂತ್ಯಗಳಲ್ಲಿ ಹೆದ್ದಾರಿಗಳಲ್ಲಿ ಇಂಧನಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಇದು ಸರ್ಕಾರ ಹಾಗೂ ಬಂಕ್ ಮಾಲೀಕರಿಬ್ಬರ ಸಿದ್ಧತೆಯ ಕೊರತೆ. ಇದರಿಂದಾಗಿ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಯಿತು. ಹಬ್ಬಗಳ ಮಾಸದಲ್ಲಿ ಬಂಕ್ ಮಾಲೀಕರು ದಾಸ್ತಾನನ್ನು ಹೆಚ್ಚಾಗಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು,” ಎಂದರು.

ಇಂಧನ ಬೆಲೆ ಪರಿಷ್ಕರಣೆಯ ಕುರಿತು ಸೂಚನೆ ನೀಡಿದ ಸಿಎಂ

ನಿರಂತರವಾಗಿ ಹೆಚ್ಚಾಗುತ್ತಿರುವ ಇಂಧನದ ದರಗಳಿಂದಾಗಿ ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ಸರ್ಕಾರದ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂಧನದ ಮೇಲೆ ವಿಧಿಸುವ ತೆರಿಗೆಯನ್ನು ಕಡಿಮೆ ಮಾಡುವ ಕುರಿತು ಚರ್ಚಿಸುವ ಮುಂಚೆ ರಾಜ್ಯದ ಹಣಕಾಸಿನ ಪರಿಸ್ಥಿತಿಯ ಕುರಿತು ಪರಿಷ್ಕರಿಸುವುದಾಗಿ ತಿಳಿಸಿದ್ದಾರೆ. “ರಾಜ್ಯದಲ್ಲಿ ಉಪಚುನಾವಣೆಗಳು ಮುಗಿದ ನಂತರ ಈ ಕುರಿತು ಗಮನ ಹರಿಸುತ್ತೇನೆ,” ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Patrol- deprivation-cooled – excitement – tourists.