ಮೈಸೂರು, ಫೆಬ್ರವರಿ,4,2026 (www.justkannada.in): ಕಿತ್ತಳೆ ನಾಡು ಕೊಡಗು ಜಿಲ್ಲೆಯ ನಾಗರಿಕರಿಗೆ ಸಂತಸದ ಸುದ್ದಿ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್ ಪೋರ್ಟ್ ಆಯೋಜಿಸಲು ಬೆಂಗಳೂರು ವಿಭಾಗೀಯ ಪಾಸ್ ಪೋರ್ಟ್ ಕಚೇರಿ ನಿರ್ಧರಿಸಿದೆ.
ಏಪ್ರಿಲ್ 8ರಿಂದ ಮೂರು ದಿನಗಳ ಕಾಲ ಕೊಡಗ ಜಿಲ್ಲೆಯಲ್ಲಿ ಪಾಸ್ಪೋರ್ಟ್ ಮೇಳ ನಡೆಯಲಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದ ಯದುವೀರ್ ಒಡೆಯರ್ ಕೊಡಗು ಜಿಲ್ಲೆಯಲ್ಲಿ ಪಾಸ್ ಪೋರ್ಟ್ ಮೇಳ ಆಯೋಜಿಸುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿರುವ ಬೆಂಗಳೂರು ರೀಜನಲ್ ಪಾಸ್ ಪೋರ್ಟ್ ಅಧಿಕಾರಿಗಳು ಸಂಸದರಿಗೆ ಪತ್ರ ಬರೆದು, ಏಪ್ರಿಲ್ 8, 9, 10ರಂದು ಮೇಳ ಆಯೋಜಿಸಲಾಗುವುದು ಹಾಗೂ 8 ರಂದು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಆಗಮಿಸಬೇಕು ಎಂದು ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಂಸದ ಯದುವೀರ್ ಒಡೆಯರ್, ಕೊಡಗು ಜಿಲ್ಲೆಯ ಹಲವಾರು ಮಂದಿ ಪಾಸ್ ಪೋರ್ಟ್ ಬೇಕು ಎಂಬ ಮನವಿ ಸಲ್ಲಿಸಿದ್ದರು. ಕೆಲವರು ಮೈಸೂರಿಗೆ ಅಥವಾ ಬೆಂಗಳೂರಿಗೆ ತೆರಳಬೇಕು. ಇದು ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದರು.
ಕಳೆದ ಬಾರಿ ನವದೆಹಲಿಗೆ ತೆರಳಿದಾಗ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀಪ್ರಿಯಾ ರಂಗನಾಥನ್ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಯಲ್ಲಿ ಪಾಸ್ ಪೋರ್ಟ್ ಮೇಳ ಆಯೋಜಿಸಲು ಮನವಿ ಸಲ್ಲಿಸಿದೆ ಎಂದು ತಿಳಿಸಿದರು.
ಇದಕ್ಕೆ ಸ್ಪಂದಿಸಿರುವ ಹಿರಿಯ ಅಧಿಕಾರಿಗಳು, ಬೆಂಗಳೂರು ಪಾಸ್ಪೋರ್ಟ್ ಕಚೇರಿಗೆ ಸೂಚನೆ ನೀಡಿ ಪಾಸ್ಪೋರ್ಟ್ ಮೇಳ ಆಯೋಜಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಸಂಸದ ಯದುವೀರ್ ವಿವರಿಸಿದರು.
ಕೊಡಗು ಜಿಲ್ಲೆಯ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
Key words: Passport fair, Kodagu district, 3 days, 8th April







