Home Blog Page 107

SIR ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ಅಪಘಾತ: ಗಂಭೀರ ಗಾಯಗೊಂಡಿದ್ದ ಗ್ರಾಮ ಲೆಕ್ಕಾಧಿಕಾರಿ ಸಾವು

ತುಮಕೂರು,ಜುಲೈ,4,2026 (www.justkannada.in): SIR ಕಾರ್ಯಕ್ಕಾಗಿ ತೆರಳುತ್ತಿದ್ದ  ವೇಳೆ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮಲೆಕ್ಕಾಧಿಕಾರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ವಿಎಒ ಭುವನಾ ಮೃತಪಟ್ಟವರು. ತುಮಕೂರು ತಾಲೂಕಿನ ಗೂಳೂರು ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಎಸ್ ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ವಿಎಒ ಭುವನಾ ಅವರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿತ್ತು. ಈ ವೇಳೆ ಭುವನ ಸೇರಿ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದರು.

ಭುವನರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭುವನ  ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿತ್ತು ಎನ್ನಲಾಗಿದೆ. ಆದರೆ ಇದೀಗ ಭುವನ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Accident, SIR, work,  Village Accountant, died,

ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ ಕೊಡ್ತೇವೆ- ಸಚಿವ ಯು.ಟಿ ಖಾದರ್

ಕಾರವಾರ,ಜುಲೈ,4,2026 (www.justkannada.in): ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ ಕೊಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯುಟಿ ಖಾದರ್,  ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಸಿಎಂ ನಿರ್ಧರಿಸುತ್ತಾರೆ. 34 ಸಚಿವರನ ಕೆಲಸವನ್ನ ಈಗ 14 ಸಚಿವರು ಮಾಡುತ್ತಿದ್ದಾರೆ. ಸಂಫುಟ ವಿಸ್ತರಣೆ ತಡ ಆಗುತ್ತಿರುವುದಕ್ಕೆ ಯಾವ ಅಸಮಾಧಾನವಿಲ್ಲ. ಶಾಸಕರೆಲ್ಲರೂ ಒಗ್ಗಟ್ಟಾಗಿದ್ದಾರೆ ಎಂದರು.

ಜಾತಿ ಪ್ರದೇಶವಾರು ಎಲ್ಲವನ್ನೂ ನೋಡಿ ಸಚಿವ ಸ್ಥಾನ ಕೊಡುತ್ತಾರೆ. ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ  ನೀಡುತ್ತೇವೆ ಎಂದು ಯುಟಿ ಖಾದರ್ ತಿಳಿಸಿದರು.

Key words: good governance, next two years, Minister, U.T. Khader

ಸಂಪುಟದಲ್ಲಿ ಹಿರಿಯರಿಗೂ ಹೊಸಬರಿಗೂ ಅವಕಾಶ ಕೊಡಿ- ‘ಕೈ’ ಶಾಸಕ ಆಗ್ರಹ

ಬೆಂಗಳೂರು,ಜುಲೈ,4,2026 (www.justkannada.in): ನಾನು ಸಚಿವಸ್ಥಾನದ ಆಕಾಂಕ್ಷಿ ಅಲ್ಲ. ಸಚಿವಮ ಸಂಪುಟದಲ್ಲಿ ಹಿರಿಯರಿಗೂ ಹೊಸಬರಿಗೂ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರಂಗನಾಥ್, ನಮ್ಮ ಕುಟುಂಬದಲ್ಲಿ ಈಗಾಗಲೇ ಸಿಎಂ ಇದ್ದಾರೆ.  ಆದಷ್ಟು ಬೇಗೆ ಪೂರ್ಣ ಪ್ರಮಾಣಧಲ್ಲಿ ಸಂಪುಟ ರಚನೆ ಆಗುತ್ತೆ.  ಹಿರಿಯರ ಅಸಮಾಧಾನವನ್ನೂ ಸರಿಪಡಿಸುವ ಕೆಲಸ ಆಗುತ್ತೆ. ಹೊಸಬರಿಗೂ ಹಿರಿಯರಿಗೂ ಸಂಫುಟದಲ್ಲಿ ಅವಕಾಶ ಕೊಡಬೇಕು.  ಸಿಎಂ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದರು.

ಹಾಗೆಯೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರುದ್ದ ಕಿಡಿ ಕಾರಿದ ಶಾಸಕ ರಂಗನಾಥ್,  ನಿಖಿಲ್ ಕುಮಾರಸ್ವಾಮಿ ನನ್ನ ಜೀನ್ಸ್ ಬಗ್ಗೆ ಮಾತನಾಡಿದ್ದು ಖಂಡನೀಯ. ನನ್ನ ತಾಲ್ಲೂಕಿನ ಜೀನ್ಸ್ ಬಗ್ಗೆ ಮಾತನಾಡುವುದಕ್ಕೆ ಏನು ಹಕ್ಕಿದೆ ನಿಮ್ಮ ರೀತಿ ನಾನು ಮಾಜಿ ಪ್ರಧಾನಿ ಮಂತ್ರಿಗಳ ಮೊಮ್ಮಗ ಅಲ್ಲ ಮಾಜಿ ಸಿಎಂ ಮಗನೂ ಅಲ್ಲ ನಾನು ಬಡ ರೈತನ ಮಗ ಎಂದು ತಿರುಗೇಟು ನೀಡಿದರು.

Key words: Cabinet expansion, congress, MLA , Ranganath

ಮಧ್ಯಸ್ಥಿಕೆ ಕೇಂದ್ರಗಳು ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ-ನ್ಯಾ. ಎಸ್.ಜಿ ಪಂಡಿತ್

ಮೈಸೂರು, ಜುಲೈ,4,2026 (www.justkannada.in): ಸಂಧಾನ ಅಥವಾ ಮಧ್ಯಸ್ಥಿಕೆ ಕೇಂದ್ರಗಳು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಮೂಲಕ ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರು ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮೈಸೂರು ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ, ಮೈಸೂರು. ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ  ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡವನ್ನು  ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್.ಜಿ ಪಂಡಿತ್  ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ಸಂಧಾನ ಅಥವಾ ಮಧ್ಯಸ್ಥಿಕೆ ಎಂಬುದು ನಮ್ಮ ದೇಶಕ್ಕೆ ಹೊಸದೇನಲ್ಲ. ಮಹಾಭಾರತದ ಕಾಲದ ಕೃಷ್ಣ ಸಂಧಾನದ ದಿನಗಳಿಂದಲೂ ನಮ್ಮ ಸಂಸ್ಕೃತಿಯಲ್ಲಿ ಈ ಪದ್ಧತಿಯನ್ನು ನಾವು ಅಳವಡಿಸಿಕೊಂಡು ಬಂದಿದ್ದೇವೆ . ಇಂದು ನ್ಯಾಯಾಲಯಗಳ ಮೇಲೆ ಎಷ್ಟೊಂದು ಒತ್ತಡವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂಧಾನ ಅಥವಾ ಮಧ್ಯಸ್ಥಿಕೆ ಕೇಂದ್ರಗಳು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಮೂಲಕ ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ ಎಂದರು.

ಯಾವುದೇ ಕಕ್ಷಿದಾರರು ಆರಂಭದಲ್ಲಿ ತಮ್ಮ ವಕೀಲರು ಹೇಳಿದಂತೆ ಕೇಳುವ ಪರಿಸ್ಥಿತಿಯಲ್ಲಿರುತ್ತಾರೆ ಮತ್ತು ವಕೀಲರನ್ನೇ ದೇವರೆಂದು ಭಾವಿಸುತ್ತಾರೆ. ಗ್ರಾಹಕರ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ, ವಕೀಲರು ಕಕ್ಷಿದಾರರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅವರಿಗೆ ಮೊದಲ ಆದ್ಯತೆಯಾಗಿ ಮಧ್ಯಸ್ಥಿಕೆ ಅಥವಾ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸಹಕಾರಿಯಾಗಬೇಕು ಎಂದು ತಿಳಿಸಿದರು.

ಸಂಧಾನದಿಂದ ಪ್ರಕರಣಗಳು ಎಷ್ಟು ಬೇಗ ತೀರ್ಮಾನವಾಗುತ್ತವೆ ಮತ್ತು ಇದರಿಂದ ಅವರಿಗೆ ಏನೆಲ್ಲಾ ಉಪಯೋಗಗಳಿವೆ ಎಂಬುದನ್ನು ವಕೀಲರು ಮನವರಿಕೆ ಮಾಡಿಕೊಟ್ಟರೆ, ಕಕ್ಷಿದಾರರು ಖಂಡಿತ ಒಪ್ಪಿಕೊಳ್ಳುತ್ತಾರೆ ಹಾಗೂ ಪರಿಹಾರ ಸುಲಭವಾಗುತ್ತದೆ ಎಂದು ಹೇಳಿದರು.

ಮೈಸೂರಿನಲ್ಲಿ ಈಗ ಸುಸಜ್ಜಿತವಾದ ನೂತನ ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆಯಾಗಿದೆ. ಸಾರ್ವಜನಿಕರು ಹಾಗೂ ನ್ಯಾಯವಾದಿಗಳು ಈ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು  ಎಂದು ನ್ಯಾ. ಎಸ್.ಜಿ ಪಂಡಿತ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ  ಅಧ್ಯಕ್ಷ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ, ಜಿಲ್ಲಾಡಳಿತದ ಅಧಿಕಾರಿಗಳು, ಗ್ರಾಹಕ ಆಯೋಗದ ಪದಾಧಿಕಾರಿಗಳು ಹಾಗೂ ಮೈಸೂರು ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಉಪಸ್ಥಿತರಿದ್ದರು.

Key words: Mysore, District, Consumer Disputes Redressal Commission, Mediation centers, Justice, S.G. Pandit

ಸರ್ಕಾರ ಬದುಕಿದ್ರೆ ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ- ಆರ್.ಅಶೋಕ್

ಮಂಡ್ಯ,ಜುಲೈ,4,2026 (www.justkannada.in): ರಾಜ್ಯದಲ್ಲಿ ಸರ್ಕಾರ ಬದುಕಿದ್ದರೇ ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಇಂದು ಮಂಡ್ಯ ಜಿಲ್ಲೆ ಕೆ.ಆರ್ ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಆರ್.ಅಶೋಕ್,  ಕೆಆರ್ ಎಸ್ ಜಲಾಶಯದಲ್ಲಿ 6 ಟಿಎಂಸಿ ನೀರು ಮಾತ್ರ ಇದೆ. ಪ್ರತಿ ತಿಂಗಳು ಕುಡಿಯುವ ನೀರಿಗೆ 3 ಟಿಎಂಸಿ ಬೇಕು. ಬೆಳೆ ಬೆಳೆಯಬೇಡಿ ನೀರಿಲ್ಲ ಅಂತಾ ಸಿಎಂ ಡಿಕೆಶಿ ಹೇಳಿದ್ದಾರೆ . ಚಿನ್ನ ಖರೀದಿಸಬೇಡಿ ಎಂದ ಮೋದಿ ವಿರುದ್ದ ಬಾಯಿ ಬಡ್ಕೊಂಡ್ರು.  ಬರದ ಸಂದರ್ಭಧಲ್ಲಿ ರೈತರು ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ರಾಜ್ಯದಲ್ಲಿ ಕೃಷಿ ಸಚಿವರಿಲ್ಲ ಸಂಪುಟ ಪೂರ್ಣಗೊಂಡಿಲ್ಲ. ದೆಹಲಿಯವರಿಗೆ ದುಡ್ಡುಕೊಟ್ಟು ಸಚಿವ ಸ್ಥಾನ ಪಡೆಯಬೇಕು. ಅದರಲ್ಲಿ ಯಾವುದೇ ಅನುಮಾನವಿಲ್ಲ.  ಡಿಕೆಶಿ ಸರ್ಕಾರ ದೆಹಲಿ ಹೈಕಮಾಂಡ್ ಗೆ ಎಟಿಎಂ ಆಗಿದೆ ಎಂದು ಲೇವಡಿ ಮಾಡಿದರು.

ಮಳೆ ಕೈಕೊಟ್ಟಿದ್ದರಿಂದ ಪರ್ಯಯ ವ್ಯವಸ್ಥೆ ಮಾಡಬೇಕಲ್ಲವಾ.  ಎಕರೆಗೆ 50 ಸಾವಿರ ರೂಪಾಯಿ ಬೆಳೆ ಹಾನಿ ಪರಿಹಾರ ಕೊಡಬೇಕು. ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುವ ಪ್ಲ್ಯಾನ್ ಇದೆಯಾ ಗೊತ್ತಿಲ್ಲ . ಸರ್ಕಾರ ಬದುಕಿದ್ರೆ ರೈತರಿಗೆ ಪರಿಹಾರ ಘೋಷಿಸಲಿ ಎಂದು ಆರ್.ಅಶೋಕ್ ತಿಳಿಸಿದರು.

Key words: government, announce, compensation, farmers, KRS, R. Ashok

ಪ್ರತಿಯೊಂದು ಶಾಲೆಯಲ್ಲೂ ಪರಿಸರ ಸಂರಕ್ಷಣೆ ಜಾಗೃತಿ ಅತ್ಯಗತ್ಯ: ನ್ಯಾ. ಎಸ್. ಜಿ. ಪಂಡಿತ್

ಮೈಸೂರು, ಜುಲೈ, 04,2026 (www.justkannada.in): ಇಂದಿನ ದಿನಗಳಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಹಾಗೂ ಗಿಡ ನೆಡುವ ಕೆಲಸಗಳು ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಪ್ರತಿಯೊಂದು ಶಾಲೆಯನ್ನೂ ತಲುಪಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರು ಹೇಳಿದರು.

ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆ, ವಕೀಲರ ಸಂಘ, heart fullness institute, mysuru ಹಾಗೂ ತೋಟಗಾರಿಕಾ ಮಹಾವಿದ್ಯಾಲಯ, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ತೋಟಗಾರಿಕಾ ಮಹಾವಿದ್ಯಾಲಯ, ಯಲಚನಹಳ್ಳಿ, ಇಲವಾಲ ಇಲ್ಲಿ ಚಾಲನೆ (ಒಂದು ಮರ ನೂರಾರು ಉಸಿರು) ನೀಡಿ ನ್ಯಾ. ಎಸ್. ಜಿ. ಪಂಡಿತ್ ಅವರು ಮಾತನಾಡಿದರು.

ಇಂದಿನ ಮಾನವ ಕುಲವು ತನ್ನ ಮೂಲಭೂತ ಕರ್ತವ್ಯಗಳನ್ನೇ ಮರೆತುಬಿಟ್ಟಿದೆ. ಪ್ರತಿಯೊಂದನ್ನೂ ನೆನಪಿಸಲು ನಮಗೊಂದು ದಿನಾಚರಣೆಯ ಅಗತ್ಯ ಬೀಳುತ್ತಿದೆ. ಆಚರಣೆಯ ದಿನ ಮಾತ್ರ ಪರಿಸರ ನೆನಪಿರುತ್ತದೆ, ಆದರೆ ಮರುದಿನವೇ ನಾವು ಅದನ್ನು ಮರೆತುಬಿಡುತ್ತೇವೆ. ದಿನನಿತ್ಯವೂ ಕಾಡುತ್ತಿರುವ ಪರಿಸರ ಅಸಮತೋಲನ ಮತ್ತು ತೀವ್ರ ಉಷ್ಣ ಅಲೆಗಳಿಗೆ  ಮಾನವನ ಸ್ವಾರ್ಥವೇ ಕಾರಣ. ಮಾನವನು ತನ್ನ ವೈಯಕ್ತಿಕ ಲಾಭಕ್ಕಾಗಿ ಮರಗಳನ್ನು ಕಡಿಯುತ್ತಿರುವುದರ ದುಷ್ಪರಿಣಾಮವನ್ನು ನಾವೀಗ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ ಎಂದರು.

ನಾವೆಲ್ಲರೂ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅಷ್ಟೇ ಜವಾಬ್ದಾರಿಯಿಂದ ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇವಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂವಿಧಾನದ ಆರ್ಟಿಕಲ್ 51 ರ ಅಡಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಅರಣ್ಯವನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಪಾಲಿಸುತ್ತಿದ್ದೇವಾ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಇಂದು ನಾವೆಲ್ಲರೂ ಸೇರಿ ಉತ್ಸಾಹದಿಂದ ಗಿಡಗಳನ್ನು ನೆಟ್ಟು ಮನೆಗೆ ಮರಳುತ್ತೇವೆ. ಆದರೆ ಆ ಸಸಿಗಳನ್ನು ಮುಂದೆ ಹೇಗೆ ಪೋಷಿಸುತ್ತೇವೆ ಎಂಬುದು ಅತ್ಯಂತ ಮುಖ್ಯ. ನಮ್ಮ ಮಕ್ಕಳನ್ನು 10-20 ವರ್ಷಗಳ ಕಾಲ ಪ್ರೀತಿಯಿಂದ ಸಾಕಿ ಬೆಳೆಸುವ ನಾವು, ಕನಿಷ್ಠ ಒಂದು ವರ್ಷವಾದರೂ ನೆಟ್ಟ ಗಿಡವನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೇ ಎಂದು ಹೇಳಿದರು.

ಹಾರ್ಟ್‌ ಫುಲ್‌ ನೆಸ್ ಇನ್‌ ಸ್ಟಿಟ್ಯೂಟ್ ನೆಟ್ಟ ಸಸಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿರುವುದನ್ನು ಶ್ಲಾಘಿಸಿದ ನ್ಯಾ. ಎಸ್. ಜಿ. ಪಂಡಿತ್, ಪ್ರತಿ ವರ್ಷ ಒಂದು ಲಕ್ಷ ಸಸಿಗಳನ್ನು ನೆಟ್ಟು, ಅವುಗಳನ್ನು ಮೂರು ವರ್ಷಗಳ ಕಾಲ ಪೋಷಿಸಿ ಬೆಳೆಸಿದರೆ, ಅದು ಪರಿಸರಕ್ಕೆ ನಾವು ನೀಡುವ ಅತ್ಯಂತ ದೊಡ್ಡ ಕೊಡುಗೆಯಾಗುತ್ತದೆ ಎಂದು ಹೇಳಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿಷ್ಣುವರ್ಧನ ಅವರು ಮಾತನಾಡಿ  ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಇಂದು ಪ್ರಕೃತಿಯ ಸಮತೋಲನ ತಪ್ಪುತ್ತಿದ್ದು, ಕೃಷಿ ಹಾಗೂ ತೋಟಗಾರಿಕಾ ವಲಯಗಳು ಭೀತಿ ಎದುರಿಸುತ್ತಿವೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಇಂದು ಪರಿಸರ ಸಮತೋಲನ ತಪ್ಪುತ್ತಿದೆ. ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣವು ಇರಬೇಕಾದ ಮಿತಿಗಿಂತ ಅಧಿಕ ಪಟ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರಗಾಲ ಹಾಗೂ ಬಿಸಿಲಿನ ಬೇಗೆಯಂತಹ  ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಇದು ನೇರವಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನೆ ಹಾಗೂ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ಹವಾಮಾನ ಬದಲಾವಣೆಯಿಂದಾಗಿ ತೋಟಗಾರಿಕಾ ಬೆಳೆಗಳ ಜೈವಿಕ ಕ್ರಿಯೆಯಲ್ಲಿ ಏರುಪೇರಾಗುತ್ತಿದೆ. ಸಿ.ಪಿ.ಸಿ.ಆರ್.ಐ  ವರದಿ ಪ್ರಕಾರ, ಕೇವಲ 1 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಏರಿಕೆಯಿಂದಾಗಿ ತೆಂಗು ಇಳುವರಿಯಲ್ಲಿ ಶೇ. 20 ರಷ್ಟು ಕುಸಿತ ಕಂಡುಬಂದಿದೆ. ಇನ್ನು ಮಾವಿನ ಬೆಳೆಯಲ್ಲೂ ಸಹ ಡಿಸೆಂಬರ್ ಜನವರಿಯಲ್ಲಿ ಬರಬೇಕಾದ ಹೂವು, ಈಗ ಜೂನ್-ಜುಲೈ ತಿಂಗಳಲ್ಲೂ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ರೈತರ ಆದಾಯಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಹೇಳಿದರು.

ನಾವು ಕೇವಲ ಗಿಡ ನೆಡುವುದಷ್ಟೇ ಅಲ್ಲ, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕಿದೆ. ಇಂದು ನಾವು ಕುಡಿಯುವ ನೀರು, ಉಸಿರಾಡುವ ಗಾಳಿ ಹಾಗೂ ತಿನ್ನುವ ಆಹಾರವನ್ನು ವಿಷವಾಗಿಸಿಕೊಂಡಿದ್ದೇವೆ. ಕೃಷಿಯಲ್ಲಿ ಮಿತಿಮೀರಿದ ರಾಸಾಯನಿಕಗಳ ಬಳಕೆಯಿಂದಾಗಿ ಮಣ್ಣಿನಲ್ಲಿರುವ ಉಪಕಾರಿ ಸೂಕ್ಷ್ಮಜೀವಿಗಳು  ನಾಶವಾಗಿ, ಭೂಮಿ ಬಂಜರಾಗುತ್ತಿದೆ. ನೀರನ್ನು ಮರುಬಳಕೆ ಮಾಡುವುದು ಮತ್ತು ಜಾಗರೂಕತೆಯಿಂದ ಬಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ದೇಶದಲ್ಲಿ ಕೃಷಿ ಭೂಮಿಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ, ಆದರೆ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ. 1950ರಲ್ಲಿ ನಮ್ಮ ದೇಶದ ಜನಸಂಖ್ಯೆ 40 ಕೋಟಿಯಿದ್ದಾಗ ಆಹಾರ ಉತ್ಪಾದನೆ 50 ಮಿಲಿಯನ್ ಟನ್ ಇತ್ತು. ಇಂದು ಜನಸಂಖ್ಯೆ 150 ಕೋಟಿ ತಲುಪಿದ್ದರೂ, ನಮ್ಮ ಆಹಾರ ಉತ್ಪಾದನೆ 350 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ.  ಮುಂದಿನ ದಿನಗಳಲ್ಲಿ  ಸಮತೋಲನ ಕಾಯ್ದುಕೊಳ್ಳಲು ಪರಿಸರ ರಕ್ಷಣೆ ಅತ್ಯಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಅಧ್ಯಕ್ಷರರಾದ ಉಷಾರಾಣಿ, , ಡಿ.ಸಿ.ಎಫ್. ಪರಮೇಶ ಕೆ., ವಕೀಲರ ಸಂಘದ ಅಧ್ಯಕ್ಷಎಸ್. ಲೋಕೇಶ್, Regional Felicitator, Heartfulness Institute ನ ಕೆ. ಮಧುಸೂಧನ್, ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಚಂದ್ರಶೇಖರ್ ಹಂಚಿನಮನಿ ಅವರು ಉಪಸ್ಥಿತರಿದ್ದರು.

Key words: Environmental, protection, awareness, school, Justice, S. G. Pandit

ವಿಬಿ-ಜಿ ರಾಮ್ ಜಿ ಜಾರಿ, ಕೂಲಿ ದರ ಹೆಚ್ಚಳ: CEO ಎಸ್ .ಯುಕೇಶ್ ಕುಮಾರ್

ಮೈಸೂರು,ಜುಲೈ,4,2026 (www.justkannada.in):  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮ-ನರೇಗಾ) ಯೋಜನೆಗೆ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ ) ಯೋಜನೆಯು ಜುಲೈ 1 ರಿಂದಲೇ  ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬಂದಿದ್ದು, ಅದೇ ದಿನವೇ ಕೇಂದ್ರ ಸರ್ಕಾರ ಯೋಜನೆಯಡಿ ದೊರೆಯುವ ಪರಿಷ್ಕೃತ ಕೂಲಿ ದರ ಏರಿಕೆ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ .ಯುಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಜುಲೈ 1 ರಿಂದಲೇ ಅನ್ವಯವಾಗುವಂತೆ ಪರಿಷ್ಕೃತ ಕೂಲಿ ದರ ಅನ್ವಯವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಕರ್ನಾಟಕ ರಾಜ್ಯದಲ್ಲಿ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇದ್ದಂತಹ ಕೂಲಿ ದರ ರೂ.370  ರೂ.ಗಳನ್ನು ವಿಬಿ-ಜಿ ರಾಮ್ ಜಿ ಅಡಿ 382 ರೂ.ಗೆ ಹೆಚ್ಚಿಸಿದ್ದು, ಇದು ಈಗಾಗಲೇ ಚಾಲ್ತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಬಡವರು, ರೈತರು, ಮಹಿಳೆಯರು ಹಾಗೂ ಯುವಶಕ್ತಿಯನ್ನು ಆಧಾರಿಸಿ ವಿಬಿ-ಜಿ ರಾಮ್ ಜಿ ಯೋಜನೆಯ ರೂಪು ರೇಷೆಗಳನ್ನು ಮರು ರೂಪಿಸಲಾಗಿದೆ. 125 ದಿನಗಳಿಗೆ ಕೂಲಿ ಖಾತ್ರಿಯ ಉದ್ಯೋಗ ದಿನಗಳನ್ನು ಹೆಚ್ಚಿಸಲಾಗಿದೆ.  ಕೆಲಸ ಮಾಡಿದ 15 ದಿನಗಳಲ್ಲಿ ಕೂಲಿ ಪಾವತಿ ಮಾಡಲಾಗುತ್ತದೆ. ಜಲ ಭದ್ರತೆಗಾಗಿ ನೀರು ಸಂಬಂಧಿತ ಕಾಮಗಾರಿಗಳು, ಉತ್ಕೃಷ್ಟ ಗ್ರಾಮೀಣ ಮೂಲ ಸೌಕರ್ಯಗಳ ನಿರ್ಮಾಣ ಸುಸ್ಥಿರ  ಆದಾಯಕ್ಕಾಗಿ ಜೀವನೋಪಾಯ ಮೂಲಸೌಕರ್ಯ, ಹವಮಾನ ಸ್ಥಿತಿ ಸ್ಥಾಪಕತ್ವ ಮತ್ತು ವಿಪತ್ತು ಸನ್ನದ್ಧ ಕಾಮಗಾರಿಗಳಿಗೆ ಆಧ್ಯತೆ ನೀಡಲಾಗಿದೆ ಎಂದು ಯುಕೇಶ್ ಕುಮಾರ್ ತಿಳಿಸಿದರು.

ವಿಬಿ ಜಿ-ರಾಮ್ ಜಿ ಯೋಜನೆ ಕುರಿತು ತರಬೇತಿ

ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ತರಬೇತಿ ಪಡೆದ ಮಾಸ್ಟರ್ ಟ್ರೈನರ್ಸ್ ಗಳಿಂದ ಸರ್ಕಾರದ ಮಾರ್ಗಸೂಚಿಯಂತೆ ಜುಲೈ 1 ರಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಎಲ್ಲಾ ವರ್ಗದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರು, ಆಡಳಿತಾಧಿಕಾರಿಗಳು, ಪಿಡಿಒ ಹಾಗೂ ಎಲ್ಲಾ  ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಮೈಸೂರು ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬೀಮಪ್ಪ ಕ ಲಾಳಿ ಮಾತನಾಡಿ, ಪ್ರತಿ ದಿನಕ್ಕೆ ರೂ.370 ಇದ್ದ ಕೂಲಿ ದರವನ್ನು ರೂ.12 ಹೆಚ್ಚಿಸಲಾಗಿದ್ದು,  ಜುಲೈ 1 ರಿಂದಲೇ ರೂ.382 ಕೂಲಿ ದರ ನಿಗದಿಪಡಿಸಲಾಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಬದಲಾಗಿ ಈಗ 125 ದಿನಗಳವರೆಗೆ ಉದ್ಯೋಗ ನೀಡಲಾಗುವುದು. ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದೆ ಎಂದರು.

Key words: VB-G Ram Ji, implemented, Mysore ZP, CEO

ಫುಟ್ ಪಾತ್ ಒತ್ತುವರಿ ತೆರವು: ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ- ಕೇಂದ್ರ ಸಚಿವ HDK

ಬೆಂಗಳೂರು,ಜುಲೈ,4,2026 (www.justkannada.in):  ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಲಕ್ಷಾಂತರ ಕುಟುಂಬ ಬೀದಿಬದಿ ವ್ಯಾಪಾರ ಮಾಡಿ ಬದುಕುತ್ತಿವೆ.  ಸುಪ್ರೀಂ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿ. ಆದರೆ ಅವರ ಬದುಕು ಏನು ಮಾಡುತ್ತೀರಾ?  ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯವಾಗಿ ಏನು ಮಾಡಿದ್ದೀರಿ. ಏಕಾ ಏಕಿ ಖಾಲಿ ಮಾಡಿಸಿದರೇ ಅವರು ಎಲ್ಲಿಗೆ ಹೋಗಬೇಕು.  ಪರ್ಯಾಯ ವ್ಯವಸ್ಥೆ ಮಾಡಬೇಕು ಅನ್ನೋದು ನನ್ನ ಒತ್ತಾಯ.  ರಸ್ತೆಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಹೇಳಿದರು.

ಡಿಕೆ ಶಿವಕುಮಾರ್ ಸಿಎಂ ಆಗಿ ಒಂದು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ,  ಸಿಎಂ ಸಾಧನೆ ಏನು ಮಾಡಿದ್ದಾರೆ. ಬರೀ ಘೋಷಣೆ ಅಷ್ಟೆ.  ಡಿಕೆ ಶಿವಕುಮಾರ್ ರವರ ಯಾವ ಘೋಷಣೆ ಅನುಷ್ಟಾನ ಆಗಿದೆ . ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಎಲ್ಲಿಗೆ ಬಂದಿದೆ ಹೇಳಿದ್ರಾ? ಕಳೆದ ಒಂದು ತಿಂಗಳಲ್ಲಿ ಯಾವುದೇ ಯೋಜನೆ ಜಾರಿಯಾಗಿಲ್ಲ. ಸರ್ಕಾರ ಪಿಕ್ ಪಾಕೆಟ್ ಮಾಡೋದು ಹೇಗೆ ಅಂತಾ ಯೋಚನೆ ಮಾಡುತ್ತಿದ್ದಾರೆ . ದುಡ್ಡು ಹೊಡೆಯುವ ಕಾರ್ಯಕ್ರಮ ಇದ್ದರೇ ಶಂಕು ಸ್ಥಾಪನೆ ಅಷ್ಟೆ ಎಂದು ವ್ಯಂಗ್ಯವಾಡಿದರು.

Key words: Clearing, footpath, encroachment, street vendors, Union Minister, HDK

ಸರ್ಕಾರ ಯಾರಿಗೂ ಒತ್ತಾಯಿಸಿ  SIR ಮಾಡಿಸುತ್ತಿಲ್ಲ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜುಲೈ,4,2026 (www.justkannada.in):  ಎಸ್ ಐಆರ್ ನಲ್ಲಿ ಲೋಪವಾಗುತ್ತಿದೆ ಎಂಬ ವಿಪಕ್ಷಗಳ ಆರೋಪ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಮೀರಿ ಯಾರು ಏನು ಮಾಡುವುದಕ್ಕೂ ಆಗುವುದಿಲ್ಲ. ಚುನಾವಣಾ ಆಯೋಗದ ವಿಕ್ಷಕರು ಇರುತ್ತಾರೆ.  ಲೋಪ ಆಗಿದ್ದರೇ ಆಯೋಗ ಕ್ರಮ ತೆಗೆದುಕೊಳ್ಳಬಹುದು. ಸರ್ಕಾರ ಯಾರಿಗೂ ಒತ್ತಾಯ ಮಾಡಿ ಎಸ್ ಐಆರ್ ಮಾಡಿಸುತ್ತಿಲ್ಲ ಎಂದರು.

ಸಮುದಾಯ ಭವನ ಕಚೇರಿಯಲ್ಲಿ ಎಸ್ ಐಆರ್ ಮಾಡಿ ಅಂತಾ ಹೇಳಿಲ್ಲ. ಎಸ್ ಐಆರ್ ಬಗ್ಗೆ ಜನರಲ್ಲಿ ಆತಂಕ ಇರೋದು ನಿಜ. ಅದಕ್ಕೆ 12 ಪ್ರಶ್ನೆ ಕೇಳಿದ್ದೇವೆ ಚುನಾವಣಾ ಆಯೋಗ ಉತ್ತರಿಸಿಲ್ಲ. ಎಸ್ ಐ ಆರ್  ಪ್ರಕ್ರಿಯೆ ಬಗ್ಗೆ ಜನರಿಗೆ ಆತಂಕ ಸಂಶಯ ಇದೆ.  ರೂಲ್ಸ್ ಮಾಡೋದು ನಾವಲ್ಲ. ಆಯೋಗ ಉತ್ತರ ಕೊಡಬೇಕು ಎಂದರು.

Key words: government, SIR, Home Minister, Priyank Kharge

BMTC ಬಸ್ ಗಳ ಅಪಘಾತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಭೈರತಿ ಸುರೇಶ್

ಬೆಂಗಳೂರು,ಜುಲೈ,4,2026 (www.justkannada.in):  ಇಂದು ಬೆಂಗಳೂರಿನ ಕೆಆರ್ ಸರ್ಕಲ್ ಬಳಿ ಎರಡು ಬಿಎಂಟಿಸಿ ಬಸ್ ಗಳ ನಡುವೆ ಅಪಘಾತವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಸಾರಿಗೆ ಸಚಿವ ಭೈರತಿ ಸುರೇಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೆಆರ್ ಸರ್ಕಲ್ ಬಳಿ ಎರಡು ಬಿಎಂಟಿಸಿ ಬಸ್ ಗಳ ನಡುವೆ ಅಪಘಾತವಾಗಿ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಂಟ್ ಮಾರ್ಥಸ್ ಆಸ್ಪತ್ರೆಗೆ ಭೇಟಿ ನೀಡಿದ ಸಾರಿಗೆ ಸಚಿವ ಭೈರತಿ ಸುರೇಶ್ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಬಳಿಕ ಮಾತನಾಡಿದ ಸಚಿವ ಭೈರತಿ ಸುರೇಶ್, 13 ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಕೆಲವರು ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಎಲ್ಲರನ್ನೂ ಸೇಂಟ್ ಮಾರ್ಥಸ್ ಆಸ್ಪತ್ರೆಗ ದಾಖಲಿಸಲು ಹೇಳಿದ್ದೇನೆ. ಎಲ್ಲರು ಔಟ್ ಆಫ್ ಡೇಂಜರ್.  ಮಳೆ ಬೀಳುತ್ತಿದ್ದರಿಂದ  ಸ್ಕಿಡ್ ಆಯ್ತು ಅಂತಾ ಸಿಬ್ಬಂದಿ ಹೇಳಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ಇದೆ.  ಅದನ್ನು ಆಧರಿಸಿ ತನಿಖೆ ಆಗುತ್ತೆ  ಎಂದರು.

Key words: BMTC bus, accident, Minister, Bhairati Suresh,