ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸದ ಅಸ್ತ್ರ!

ಬೆಂಗಳೂರು, ಜುಲೈ 26, 2023 (www.justkannada.in): ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸದ ಅಸ್ತ್ರ ಪ್ರಯೋಗಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಮಣಿಪುರ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ಆಡಳಿತಾರೂಢ ಬಿಜೆಪಿ ಇದಕ್ಕೆ ಒಪ್ಪುತ್ತಿಲ್ಲ. ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸದ ಅಸ್ತ್ರ ಪ್ರಯೋಗಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಮಣಿಪುರ ಹಿಂಸಾಚಾರವು ಸಂಸತ್‌ನ ಮುಂಗಾರು ಅಧಿವೇಶನವನ್ನು ಸಂಪೂರ್ಣವಾಗಿ ಬಲಿಪಡೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ನೋಟಿಸ್‌ ಮಂಡಿಸಲು ಪ್ರತಿಪಕ್ಷಗಳ ಒಕ್ಕೂಟ ಮುಂದಾಗಿವೆ.

ಮಣಿಪುರ ಗಲಭೆ ಕುರಿತು ಸರ್ಕಾರ ಚರ್ಚೆಗೆ ಅವಕಾಶ ನೀಡುವಂತೆ ಒಪ್ಪಿಸಲು ಇದೊಂದೇ ಮಾರ್ಗ ಎಂಬ ನಿರ್ಧಾರಕ್ಕೆ ಪ್ರತಿಪಕ್ಷಗಳ ಮೈತ್ರಿಕೂಟ ಬಂದಿದೆ. ಹಾಗೆಯೇ, ಲೋಕಸಭೆಯಲ್ಲಿಯೂ ‘ಇಂಡಿಯಾ’ದ ಒಗ್ಗಟ್ಟು ಪ್ರದರ್ಶನಕ್ಕೂ ಅವುಗಳು ಮುಂದಾಗಿವೆ.

ಈಗಾಗಲೇ ಅವಿಶ್ವಾಸ ಗೊತ್ತುವಳಿಯ ಕರಡು ಸಿದ್ಧಪಡಿಸಲಾಗಿದ್ದು, ಅಗತ್ಯವಿರುವ 50 ಸಂಸದರ ಸಹಿ ಪಡೆಯುವ ಪ್ರಕ್ರಿಯೆ ನಡೆಸುತ್ತಿದೆ ಎನ್ನಲಾಗಿದೆ.