ಮೈಸೂರು ಪೊಲೀಸರ ಕಾರ್ಯಾಚರಣೆ: ಆನ್ ಲೈನ್ ಮೂಲಕ ವಂಚನೆಗೊಳಗಾಗಿದ್ದವರಿಗೆ ಹಣ ಮರುಪಾವತಿ.

ಮೈಸೂರು,ಫೆಬ್ರವರಿ,24,2022(www.justkannada.in): ಆನ್ ಲೈನ್ ಮೂಲಕ ವಂಚನೆಗೊಳಗಾಗಿ ಹಣ ಕಳೆದುಕೊಂಡವರಿಗೆ ಆರೋಪಿಗಳ ಖಾತೆಯನ್ನ ಫ್ರೀಜ್ ಮಾಡಿಸಿ ಸುಮಾರು 6,43,297 ರೂ ಹಣವನ್ನ ವಂಚನೆಗೊಳಗಾದವರಿಗೆ ಮರುಪಾವತಿ ಮಾಡುವ ಮೂಲಕ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ನಗರ, ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ, ಸೈಬರ್ ಕ್ರೈಂ ಗೆ ಸಂಬಂಧಿಸಿದಂತೆ ಪ್ರತ್ಯೇಕ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.

ವಿಜಯನಗರ ನಿವಾಸಿ ಚಂದ್ ಮತ್ತು ಸುನೀತಾ ಲಾಲ್ ಚಂದ್ ಅವರಿಗೆ ಕೆವೈಸಿ ಆಪ್ಡೇಟ್ ಎಂದು ಒಟಿಪಿ ಪಡೆದು ಒಟ್ಟು 4,49,100/- ರೂ ವಂಚನೆ ಮಾಡಲಾಗಿತ್ತು. ಹಾಗೆಯೇ  ಚಂದ್ರು ಎನ್, ವಿದ್ಯಾರಣ್ಯಪುರಂ ನಿವಾಸಿಗೆ ಕೆವೈಸಿ ಅಪ್ಡೇಟ್ ಮಾಡಲು ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಒಟ್ಟು 1,69.199/- ರೂ, ರವಿ ಹೆಬ್ಬರ್. ದಟ್ಟಗಳ್ಳಿ ನಿವಾಸಿ ಇವರಿಗೆ ಬ್ಯಾಂಕ್‌ ನವರು ಎಂದು ಹೇಳಿ ಒಟ್ಟು 22,999/- ರೂ ವಂಚನೆ ಮಾಡಲಾಗಿತ್ತು.  ಪ್ರೇಮ್ ದಾಸ್ ಹಿನಕಲ್ ನಿವಾಸಿಗೆ ಡೆಬಿಟ್ ಕಾರ್ಡ್ ಮೂಲಕ ರಿಚಾರ್ಜ್ ಎಂದು ಒಟ್ಟು 1.999/- ರೂ ಹಣವನ್ನು ವಂಚಿಸಿದ್ದರು.

ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, 4 ಪ್ರತ್ಯೇಕ ಪ್ರಕರಣಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದ ಒಟ್ಟು 6.43.297/- ರೂ ಹಣವನ್ನು ಸೆನ್ ಕೈಂ ಪೊಲೀಸ್ ಠಾಣೆಯ ಕ್ವಿಕ್ ರೆಸ್ಪಾಂನ್ಸ್ ಟೀಮ್‌ ನ ಸಿಬ್ಬಂದಿಗಳು ತ್ವರಿತವಾಗಿ ಕ್ರಮ ಕೈಗೊಂಡು ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್. ನೋಡಲ್ ಆಫೀಸರ್, ಮತ್ತು ಕೋರ್ ಬ್ಯಾಂಕಿಂಗ್‌ ನ ಲೀಗಲ್ ಟೀಮ್ ಅವರನ್ನು ಸಂಪರ್ಕಿಸಿ ಆರೋಪಿಗಳ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿ. ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಣ ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ.

ಈ ಕಾರ್ಯವನ್ನು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ಮೈಸೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಜಯಕುಮಾರ್.ಎನ್, ಪಿ.ಎಸ್.ಐ.ಗಳಾದ ಅನಿಲ್‌ಕುಮಾರ್‌, ಸಿದ್ದೇಶ್ ಎಂ.ಎಲ್. ಮತ್ತು ಸಿಬ್ಬಂದಿಗಳು  ಮಾಡಿದ್ದಾರೆ.

Key words: Operation – Mysore Police- Refund