ಮುಕ್ತ ವಿವಿ: ಮಲ್ಲೇಶ್ವರಂ ಪ್ರಾದೇಶಿಕ ಕೇಂದ್ರದಲ್ಲೂ ಪ್ರವೇಶ ಸೌಲಭ್ಯ.

ಬೆಂಗಳೂರು,ಜುಲೈ,5,2022(www.justkannada.in):  ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2022-23ನೇ ಶೈಕ್ಷಣಿಕ ಸಾಲಿನಲ್ಲಿ (ಜುಲೈ ಆವೃತ್ತಿ) ವಿವಿಧ ಕೋರ್ಸುಗಳಿಗೆ ಪ್ರವೇಶಾತಿಯನ್ನು ಆರಂಭಿಸಿದೆ. ಈ ಕೋರ್ಸುಗಳಿಗೆ ನಿಗದಿತ ಶುಲ್ಕ ತುಂಬಿ, ಮಲ್ಲೇಶ್ವರಂನಲ್ಲಿರುವ ಮಹಿಳಾ ಪ್ರಾದೇಶಿಕ ಕೇಂದ್ರದ ಮೂಲಕವು ಪ್ರವೇಶ ಪಡೆಯಬಹುದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ತಿಳಿಸಿದ್ದಾರೆ.

ಈ ಬಗ್ಗೆ  ಮಾಧ್ಯಮ ಪ್ರಕಟಣೆ ನೀಡಿರುವ ಸಚಿವ ಅಶ್ವಥ್ ನಾರಾಯಣ್, `ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಮಾತ್ರ ದೂರಶಿಕ್ಷಣ ನೀಡಲು ನಿಯಮಾನುಸಾರ ಅರ್ಹತೆ ಪಡೆದಿರುವ ಏಕೈಕ ಸಂಸ್ಥೆಯಾಗಿದೆ. ಆದ್ದರಿಂದ ಆಸಕ್ತರು, ಇತರೆ ಸಂಸ್ಥೆಗಳ ಜಾಹೀರಾತು/ಸುಳ್ಳು ಮಾಹಿತಿಗಳನ್ನು ನಂಬಿ, ಮೋಸ ಹೋಗಬಾರದು’ ಎಂದು ಸ್ಪಷ್ಟಪಡಿಸಿದ್ದಾರೆ.

ಆಸಕ್ತರು ಮುಕ್ತ ವಿ.ವಿಯ ಅಧಿಕೃತ ಜಾಲತಾಣ www.ksoumysuru.ac.in ಗೆ ಭೇಟಿ ನೀಡಿ, ಅಲ್ಲಿ ಪ್ರವೇಶಾತಿ ಪೋರ್ಟಲ್ ಮೂಲಕ ತಮಗೆ ಆಸಕ್ತಿ ಇರುವ ಕೋರ್ಸುಗಳಿಗೆ ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು. ನಂತರ, ಮಲ್ಲೇಶ್ವರಂ 4ನೇ ಮುಖ್ಯರಸ್ತೆಯ 13ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು ಆವರಣದಲ್ಲಿರುವ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ತೆರಳಿ, ಶುಲ್ಕ ಪಾವತಿಸಿ, ಪ್ರವೇಶಾತಿ ಪ್ರಕ್ರಿಯೆ ಮುಗಿಸಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

ನಿಯಮಾವಳಿ ಪ್ರಕಾರ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ವಿದ್ಯಾರ್ಥಿನಿಯರಿಗೆ, ರಕ್ಷಣಾ ಪಡೆಗಳ ನಿವೃತ್ತ ಸಿಬ್ಬಂದಿ/ಯೋಧರಿಗೆ,  ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಕೊಡಲಾಗುವುದು. ಜತೆಗೆ, ಕೋವಿಡ್ ಪಿಡುಗಿನಲ್ಲಿ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ,  ತೃತೀಯ ಲಿಂಗಿಗಳಿಗೆ ಹಾಗೂ ದೃಷ್ಟಿಹೀನರಿಗೆ ಪೂರ್ಣ ಶುಲ್ಕ ವಿನಾಯಿತಿ ಇರಲಿದೆ. ಈ ಪೈಕಿ, ದೃಷ್ಟಿಹೀನರಿಗೆ ಬಿ.ಎಡ್ ಮತ್ತು ಎಂಬಿಎ ಕೋರ್ಸುಗಳನ್ನು ಹೊರತುಪಡಿಸಿ, ಉಳಿದ ಕೋರ್ಸುಗಳಿಗೆ ಈ ವಿನಾಯಿತಿ ಸಿಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಯುಜಿಸಿ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಭೌತಿಕವಾಗಿ ಒಂದು ಪೂರ್ಣಾವಧಿ ಕೋರ್ಸ್ ಮತ್ತು ದೂರಶಿಕ್ಷಣದಲ್ಲಿ ಒಂದು ಕೋರ್ಸನ್ನು ಏಕಕಾಲದಲ್ಲಿ ಅಧ್ಯಯನ ಮಾಡಲು ಅವಕಾಶವಿದೆ. ಆದ್ದರಿಂದ ಆಸಕ್ತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಶ್ವತ್ ನಾರಾಯಣ್ ಮನವಿ ಮಾಡಿಕೊಂಡಿದ್ದಾರೆ.

ವಿವರಗಳಿಗೆ ಸಂಪರ್ಕಿಸಿ: 08-23448811, 97411-97921, 96203-95584 ಮತ್ತು 77608-48564.

Key words: Open University-Access -facility -Malleswaram -regional –center-minister-ashwath narayan