‘ಒನ್ ನೇಷನ್ ಒನ್ ಸಬ್‌ ಸ್ಕ್ರಿಪ್ಷನ್: ಸಂಶೋಧನಾ ಸಮುದಾಯಕ್ಕೆ ಪರಿಣಾಮಕಾರಿ- ಡಾ. ನಂದೀಶ

ಮೈಸೂರು,ನವೆಂಬರ್,17,2025 (www.justkannada.in): ಒನ್ ನೇಷನ್ ಒನ್ ಸಬ್‌ ಸ್ಕ್ರಿಪ್ಷನ್ ಪ್ರಯೋಜನಗಳು ಸಂಶೋಧನಾ ಸಮುದಾಯಕ್ಕೆ ಪರಿಣಾಮಕಾರಿಯಾಗಿದೆ ಎಂದು ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆಯ (AIISH) ಸಹಾಯಕ ಗ್ರಂಥಾಲಯ ಮತ್ತು ಮಾಹಿತಿ ಅಧಿಕಾರಿ ಡಾ. ನಂದೀಶ ತಿಳಿಸಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ), ಮೈಸೂರಿನಲ್ಲಿ ಆಯೋಜಿಸಿದ್ದ  “ಒನ್ ನೇಶನ್ ಒನ್ ಸಬ್‌ಸ್ಕ್ರಿಪ್ಷನ್ (ONOS)” ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು, ಒನ್ ನೇಷನ್ ಒನ್ ಸಬ್‌ ಸ್ಕ್ರಿಪ್ಷನ್’ (ONOS) ಕುರಿತು ಪ್ರಾಯೋಗಿಕ ದೃಷ್ಟಿಕೋನದೊಂದಿಗೆ ವಿವರವಾದ ಮಾಹಿತಿ ನೀಡಿದರು. ದೇಶವ್ಯಾಪಿ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರಗಳಿಗೆ ONOS ಯೋಜನೆ ನೀಡುವ ಸೌಲಭ್ಯಗಳು, ಸಂಪನ್ಮೂಲಗಳ ಏಕೀಕರಣ, ಪ್ರಕಟಣಾ ಪ್ರವೇಶ ಹಕ್ಕುಗಳ ಸುಗಮತೆ, ಯೋಜನೆಯ ಅಗತ್ಯ, ಉದ್ದೇಶಗಳು ಮತ್ತು ದೇಶದ ಸಂಶೋಧನಾ ಸಮುದಾಯಕ್ಕೆ ಇದು ತರಬಲ್ಲ ಪರಿಣಾಮಕಾರಿ ಪ್ರಯೋಜನಗಳು ಸೇರಿದಂತೆ ಹಲವು ಅಂಶಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರೆಹಮಾನ ಎಂ, ಮಾಹಿತಿ ಸಂಪನ್ಮೂಲಗಳ ಹಂಚಿಕೆ ಹಾಗೂ ದೇಶದಾದ್ಯಂತ ಜ್ಞಾನ ಲಭ್ಯತೆ ಸುಗಮವಾಗಿಸುವಲ್ಲಿ ONOS ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ  ಡಾ. ನಂದಕುಮಾರ್ ವಿ. ಕಾಲೇಜಿನ ಗ್ರಂಥಪಾಲಕ ಜೈಪ್ರಕಾಶ್, ಎಚ್. ಎಲ್. ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Key words: One Nation, One Subscription,Mysore maharani college