ಜಕ್ಕೂರ್ ಏರೋಡ್ರಮ್ ನಲ್ಲಿ ಬಾಡಿಗೆ ಬಾಕಿ ಹಣ ನೀಡದ ಕಂಪನಿಗಳ ವಿರುದ್ಧ  ಕ್ರಮಕ್ಕೆ ನೋಟಿಸ್ ನೀಡಿ – ಸಚಿವ ಡಾ. ನಾರಾಯಣಗೌಡ ಸೂಚನೆ.

ಬೆಂಗಳೂರು ಜೂನ್. 11,2021(www.justkannada.in):  ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ವಿವಿಧ ಕಂಪೆನಿಗಳಿಂದ ಇನ್ನೂ ಯಾಕೆ ಬಾಡಿಗೆ ಹಣ ವಸೂಲಿ ಮಾಡಿಲ್ಲ. ಮೂರು ತಿಂಗಳ ಹಿಂದೆಯೇ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಆದಾಗ್ಯೂ ಹಣ ಪಾವತಿಯಾಗಿಲ್ಲ. ದಿವ್ಯ ನಿರ್ಲಕ್ಷ್ಯ ಈ ವಿಳಂಬಕ್ಕೆ ಕಾರಣ. ತಕ್ಷಣ ಹಣ ವಸೂಲಿಯಾಗಬೇಕು. ಅಗತ್ಯವಿದ್ದಲ್ಲಿ ಕಾನೂನಾತ್ಮಕವಾಗಿ ನೋಟಿಸ್ ನೀಡಿ. ಇನ್ನೂ ವಿಳಂಬವಾದರೆ ನಿಮ್ಮ ಮೇಲೆಯೇ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.jk

ಜಕ್ಕೂರು ಏರೋಡ್ರಮ್‍ ನಲ್ಲಿ ವಿಮಾನ ಹಾರಾಟಕ್ಕೆ ಹಾಗೂ ನಿಲ್ದಾಣಕ್ಕೆ ಸ್ಥಳ ನೀಡಲಾಗಿದೆ. ಮೂರು ತಿಂಗಳ ಹಿಂದೆ ಸಭೆ ನಡೆಸಿ, ಬಾಕಿ ಇರುವ ಬಾಡಿಗೆ ವಸೂಲಾಗಬೇಕು ಹಾಗೂ ದರ ಪರಿಷ್ಕರಣೆ ಮಾಡಿ ಮಾಹಿತಿ ನೀಡುವಂತೆ ಸಚಿವರು ಸೂಚಿಸಿದ್ದರು. ಆದರೆ ಈ ವರೆಗೆ ಯಾವುದೇ ರೀತಿಯ ಕ್ರಮ ಜರುಗಿಸದೆ ಇದ್ದ ಕಾರಣ ಸಚಿವ ಡಾ. ನಾರಾಯಣಗೌಡ ಅವರು ಅಧಿಕಾರಿಗಳ ವಿರುದ್ಧ ಗರಂ ಆದರು.

ಬೆಂಗಳೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ನಾರಾಯಣಗೌಡ,  ಈ ವೇಳೆ ಅಧಿಕಾರಿಗಳ ದಿವ್ಯ ಮೌನ ಕಂಡು ಅಕ್ರೋಶಗೊಂಡರು. ಒಂದುವರೆ ಕೋಟಿ ರೂ. ಬಾಡಿಗೆ ಹಣ ಬಾಕಿ ಇದ್ದಾಗಲೇ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿತ್ತು. ಈಗ ಅದು ಸುಮಾರು 5 ಕೋಟಿ ರೂ. ಗೆ ತಲುಪಿದೆ. ಆದಾಗ್ಯೂ ನೋಟಿಸ್ ನೋಡಿ ಬಾಕಿ ಹಣ ಪಾವತಿಸಿಕೊಳ್ಳುವ ಕೆಲಸ ಮಾಡಿಲ್ಲ. ಬಾಡಿಗೆ ಹಣ ನೀಡದ ಕಂಪೆನಿಗಳ ವಾಣಿಜ್ಯ ಕಾರ್ಯನಿರ್ವಹಣೆಯನ್ನು ತಕ್ಷಣ ಸ್ಥಗಿತಗೊಳಿಸಿ ಕ್ರಮ ತೆಗೆದುಕೊಳ್ಳಿ. ಲಕ್ಷಾಂತರ ರೂಪಾಯಿ ಬಾಡಿಗೆ ಬರಬೇಕಾದ ಜಾಗದಲ್ಲಿ ಇನ್ನೂ ನೂರಾರು ರೂಪಾಯಿ ದರ ಇದೆ. ದರ ಪರಿಷ್ಕರಣೆ ಮಾಡುವಂತೆ ಸೂಚಿಸಿದ್ದರೂ, ವರದಿ ನೀಡಿಲ್ಲ. ತಕ್ಷಣ ಕ್ರಮ ಜರುಗಿಸಿ ವರದಿ ನೀಡದಿದ್ದರೆ ನಿಮ್ಮ ಮೇಲೆಯೇ ಮೊದಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸರ್ವೆ ಕಾರ್ಯವೂ ನೆನೆಗುದಿಗೆ- ಕಿಡಿಕಾರಿದ ಸಚಿವರು

ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸುತ್ತಮುತ್ತ Directorate General of Civil Aviation (DGCA) ನಿಯಮಾನುಸಾರ ವಿಮಾನಗಳ ಸುರಕ್ಷತೆ ದೃಷ್ಟಿಯಿಂದ ಕಟ್ಟಡಗಳ ಎತ್ತರದ ಬಗ್ಗೆ ನಿಗದಿತ ನಿಯಮಗಳಿವೆ. ಅಲ್ಲದೆ ಕಟ್ಟಡಗಳನ್ನು ಕಟ್ಟಲು ವೈಮಾನಿಕ ತರಬೇತಿ ಶಾಲೆಯಿಂದ ನಿರಪೇಕ್ಷಣ ಪತ್ರವನ್ನು ಪಡೆಯಬೇಕು. ಆದರೆ ಆವರಣದ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಕಟ್ಟಡಗಳು ನಿರಪೇಕ್ಷಣಾ ಪತ್ರವನ್ನು ಪಡೆದಿಲ್ಲ. ಈ ಬಗ್ಗೆ ಸರ್ವೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಸಭೆ ನಡೆದು ಮೂರು ತಿಂಗಳು ಕಳೆದರೂ ಸರ್ವೆ ನಡೆಸಿ ವರದಿ ನೀಡದ ಕಾರಣ ಅಧಿಕಾರಿಗಳ ವಿರುದ್ಧ ಸಚಿವ ನಾರಾಯಣಗೌಡ ಕಿಡಿ ಕಾರಿದರು. ತಕ್ಷಣವೆ ಸರ್ವೆ ನಡೆಸಿ ಎಲ್ಲೆಲ್ಲಿ ಅಕ್ರಮ ನಡೆದಿದೆ ಎಂಬ ವರದಿಯನ್ನು ನೀಡಬೇಕು. ಇಲ್ಲದಿದ್ದರೆ ಮುಂದಿನ ಸಭೆಯಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಡಾ. ನಾರಾಯಣಗೌಡ ಎಚ್ಚರಿಕೆ ನೀಡಿದರು.

ಖಾಸಗಿ ಏಜೆನ್ಸಿ ಮೂಲಕ ಸರ್ವೆ ಮಾಡುವಂತಿಲ್ಲ- ಡಾ. ಶಾಲಿನಿ ರಜನೀಶ್.

ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸುತ್ತ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿರುವ ಬಗ್ಗೆ ಖಾಸಗಿ ಏಜೆನ್ಸಿ ಮೂಲಕ ಸರ್ವೆ ನಡೆಸಿ ವರದಿ ನೀಡುವಂತಿಲ್ಲ. ಸರ್ಕಾರದಿಂದಲೇ ಸರ್ವೆ ಮಾಡಿಸಬೇಕು. 15 ದಿನಗಳಲ್ಲಿ ಸಂಪೂರ್ಣ ಸರ್ವೆ ಕೆಲಸ ಮುಗಿಸಿ ಮಾಹಿತಿ ನೀಡಬೇಕು. ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಪೂರ್ಣ ವರದಿ ಇಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ತಲೆದಂಡವಾಗುತ್ತದೆ ಎಂದು ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು. ಅಲ್ಲದೆ ಏರೋಡ್ರಮ್‍ನಲ್ಲಿ ಬರಬೇಕಾಗಿರುವ ಬಾಡಿಗೆ ವಸೂಲಿ ತಕ್ಷಣ ಆಗಬೇಕು ಮತ್ತು ದರ ಪರಿಷ್ಕರಣೆ ಸಹ ಇನ್ನಿತರ ವೈಮಾನಿಕ ತರಬೇತಿ ಶಾಲೆಯಲ್ಲಿನ ದರ ಆದರಿಸಿಯೇ ಮಾಡಬೇಕು. ಕನಿಷ್ಟ ದರದಿಂದಾಗಿ ಸಾಕಷ್ಟು ನಷ್ಟವಾಗಿದೆ. ಇನ್ನು ಮುಂದೆ ಹೀಗೆ ಆಗುವಂತಿಲ್ಲ. ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಿ ಸಮಗ್ರ ವರದಿ ನೀಡಬೇಕು ಎಂದು ತಿಳಿಸಿದರು.

ಬಾಡಿಗೆ ಬಾಕಿ ಉಳಿಸಿಕೊಂಡಿರುವ ಕಂಪೆನಿಗಳು ಹಾಗೂ ಮೊತ್ತ

M/S. NATIONAL AEROSPACE LABORATORIES – 70365/-

M/s. JUPITER AVIATION- 31,73,215/-

M/s. DECCAN CHARTERS LTD – 2,87,72,298/-

M/s. AGNI AEROSPORTS ADVENTURE ACADEMY HANGAR -I — 42,16,881/-

HANGAR -II- 42,16,881/-

ಒಟ್ಟು 4,04,49,640 ರೂ. ಹಾಗೂ 18% ಬಡ್ಡಿ ಸಹಿತ ಬಾಡಿಗೆ ಬಾಕಿ ಹಣ ವಸೂಲಾಗಬೇಕಿದೆ‌.

ಆಗಸ್ಟ್ ನಿಂದ ವೈಮಾನಿಕ ತರಬೇತಿ ಶಾಲೆ ಆರಂಭ

ಮೂರು ವರ್ಷಗಳಿಂದ ಸ್ಥಗಿತವಾಗಿದ್ದ ಜಕ್ಕೂರಿನ ಸರ್ಕಾರಿ ವೈಮಾನಿಕ‌ ತರಬೇತಿ ಶಾಲೆ ಪುನಾರಂಭವಾಗುತ್ತಿದೆ. ಸಚಿವ ಡಾ. ನಾರಾಯಣಗೌಡ ಭೇಟಿ ನೀಡಿ ಪರಿಶೀಲಿಸಿ, ತಕ್ಷಣವೇ ಖಾಲಿ ಇರುವ ಮುಖ್ಯ ಬೋಧಕ ಸಿಬ್ಬಂದಿ ನೇಮಕ ಮಾಡುವುದಾಗಿ ತಿಳಿಸಿದ್ದರು. ಅಂತೆಯೆ ಕ್ಯಾ. ಕಮಲ್ ಕಿಶೋರ್ ಮುಖ್ಯ ಬೋಧಕ ಸಿಬ್ಬಂದಿಯಾಗಿ ನೇಮಕವಾಗಿದ್ದಾರೆ. ಆಗಸ್ಟ್ ಮೊದಲವಾರದಿಂದ ವೈಮಾನಿಕ ತರಬೇತಿ ಆರಂಭವಾಗಲಿದೆ‌. ಅರ್ಧದಲ್ಲೇ ಸ್ಥಗಿತವಾಗಿದ್ದ ಕಾರಣ 45 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ಈಗ ತರಬೇತಿ ಪುನಾರಂಭವಾಗುತ್ತಿದ್ದು, ಹೊಸದಾಗಿಯೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು.

ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಡಾ. ಗೋಪಾಲಕೃಷ್ಣ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Notice – action -against -companies – rent – Jakkur Aerodrome- Minister -Narayana Gowda.