ಕೋವಿಡ್ ನಿರ್ವಹಣೆಯಲ್ಲಿ ನಿಧಾನಗತಿ ಬೇಡ: ಸೋಂಕಿತರಿಗೆ ಮಾನಸಿಕ ಬಲ ತುಂಬಿ- ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಆ,15,2020(www.justkannada.in):  ಕೋವಿಡ್ ನಿರ್ವಹಣೆಗೆ ಸಂಬಂಧಪಟ್ಟಂತೆ  ಜಿಲ್ಲಾಧಿಕಾರಿಗಳು ಮಾತ್ರ ಮಾತನಾಡುತ್ತಾರೆ. ಇಲ್ಲವೇ ಶಾಸಕರು ಮಾತನಾಡುತ್ತಾರೆ. ಆದರೆ, ಅಧಿಕಾರಿಗಳು ಬಹಳ ನಿಧಾನಗತಿ  ಧೋರಣೆ ತಾಳುತ್ತಿದ್ದಾರೆ. ಇಂತಹ ಬೆಳವಣಿಗೆ ಬೇಡ, ನಾನು ಸಹಿಸುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.jk-logo-justkannada-logo

ಕೋವಿಡ್ 19 ಕ್ಕೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲೆಯಲ್ಲಿ  ತೆಗೆದುಕೊಳ್ಳಲಾದ ಹಾಗೂ ತೆಗೆದುಕೊಳ್ಳಲಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿದರು.

ಅಧಿಕಾರಿಗಳೇ ಸ್ವಯಂಪ್ರೇರಿತರಾಗಿ ಸಭೆಯಲ್ಲಿ ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನು ಕೊಡಬೇಕು. ಎಲ್ಲರೂ ಸೇರಿ ಕೆಲಸ ಮಾಡಿದರೆ ಮಾತ್ರ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಇದೆಲ್ಲದರ ಜೊತೆಗೆ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ದೂರುಗಳು, ಕಷ್ಟಗಳು ಗಮನಕ್ಕೆ ಬರುತ್ತವೆ. ಆ ಮಾಹಿತಿಗಳನ್ನು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ತಮ್ಮ ಗಮನಕ್ಕೆ ತಂದರೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು..no-slowdown-covid-management-minister-st-somashekhar-officer

ಸೋಂಕಿತರಿಗೆ ಮಾನಸಿಕ ಬಲ ತುಂಬಿ…

ಕೋವಿಡ್ ಸೋಂಕಿತರಿಗೆ ಮಾನಸಿಕ ಬಲ ತುಂಬುವ ಕೆಲಸ ಆಗಬೇಕು. ಆಸ್ಪತ್ರೆಯ ಒಂದು ಆವರಣದಲ್ಲಿ ದಿನಕ್ಕೊಮ್ಮೆ ಎಲ್ಲ ಸೋಂಕಿತರನ್ನು ಕರೆಸಿ ಅವರಿಗೆ ಪಿಪಿಇ ಕಿಟ್ ಧರಿಸಿದ ಯೋಗ ಶಿಕ್ಷಕರಿಂದ ಯೋಗಾಭ್ಯಾಸ ಮಾಡಿಸುವುದು, ತಜ್ಞ ವೈದ್ಯರಿಂದ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ಕೊಡಿಸುವಂತಹ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಸಚಿವ ಸೋಮಶೇಖರ್ ಅವರು ಸೂಚನೆ ನೀಡಿದರು.

ಮುಖ್ಯಮಂತ್ರಿಗಳಿಂದ ಅವಿರತ ಶ್ರಮ…

ಮುಖ್ಯಮಂತ್ರಿಗಳು 24×7 ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವುದೇ ಕೆಲಸಗಳತ್ತ ಚಿಂತನೆ ಮಾಡದೆ ಕೋವಿಡ್ ಸಂಕಷ್ಟಗಳಿಂದ ದೂರ ಮಾಡಲು ಪ್ರಯತ್ನಪಡುತ್ತಿದ್ದಾರೆ. ನಾವು ಅದಕ್ಕಾಗಿಯೇ ಮೈಸೂರಿನಲ್ಲಿ ದಸರಾ ಸಹಿತ ಯಾವುದೇ ಕಾರ್ಯಗಳತ್ತ ಒತ್ತು ಕೊಡದೆ ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಏನೇ ಸಮಸ್ಯೆ ಇದ್ದರೆ ನಾವು ಬಗೆಹರಿಸುತ್ತೇವೆ. ಅಧಿಕಾರಿಗಳು ಸಹ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿ, ತಾಲ್ಲೂಕುವಾರು ಕೋವಿಡ್ ಸ್ಥಿತಿಗತಿಗಳು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ವಿವರ, ಹಾಸಿಗೆ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಪಡೆದು ಕೆಲವು ಸಲಹೆ, ಸೂಚನೆಗಳನ್ನು ನೀಡಲಾಯಿತು.

ಜನರಲ್ಲಿ ಜಾಗೃತಿ ಮೂಡಲಿ….

ಕೋವಿಡ್ ಪರೀಕ್ಷೆಗೆ ಸಂಬಂಧಪಟ್ಟಂತೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ ಜನರೂ ಸಹ ಗಂಭೀರವಾಗಿ ಪರಿಗಣಿಸಿಲ್ಲ. ಮಾಸ್ಕ್ ಧರಿಸದೇ ಸಂಚಾರ ಮಾಡುತ್ತಿದ್ದಾರೆ. ಜೊತೆಗೆ ಹಬ್ಬದ ದಿನಗಳಲ್ಲಿ ಸಾಮಗ್ರಿಯನ್ನು ಕೊಳ್ಳಲು ಒಂದೇ ಕಡೆ ಸೇರುವಂತಹ ಘಟನೆಗಳು ನಡೆಯುತ್ತವೆ. ಇದನ್ನು ತಪ್ಪಿಸಬೇಕು ಎಂಬ ವಿಷಯ ಪ್ರಸ್ತಾಪವಾಯಿತು.

ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರಕ್ಕೆ ಕ್ರಮ….

ಕೋವಿಡ್ 19 ಸೋಂಕಿತರು ಮೃತಪಟ್ಟರೆ ಅವರ ಮೃತದೇಹ ಅಂತ್ಯಕ್ರಿಯೆಗೆ ಅನುಕೂಲವಾಗುವಂತೆ ಸಮಿತಿ ರಚನೆ ಮಾಡಿ ಅಂತ್ಯಸಂಸ್ಕಾರವನ್ನು ಮಾರ್ಗಸೂಚಿಯನ್ವಯ ಮಾಡುವ ಬಗ್ಗೆ ನಿಗಾ ಇಡಲು ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದರು.

ಚಿತಾಗಾರ ಸದ್ಬಳಕೆಗೆ ಸೂಚನೆ

ಜಯನಗರದಲ್ಲಿ 7 ವರ್ಷದ ಹಿಂದೆ ನಿರ್ಮಾಣವಾದ ಚಿತಾಗಾರ ಇದುವರೆಗೂ ಬಳಕೆಯಾಗಿಲ್ಲ. ಇದರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನು ಕೋವಿಡ್ ನಿಂದ ಮೃತಪಟ್ಟವರು ಸೇರಿದಂತೆ ಎಲ್ಲ ರೀತಿಯ ಸಾವುಗಳ ಸಂದರ್ಭದಲ್ಲಿ ಅಂತ್ಯಕ್ರಿಯೆ ನಡೆಸಲು ಬಳಸಿಕೊಳ್ಳಬಹುದು ಎಂಬ ಬಗ್ಗೆ ವಿಷಯಗಳು ಪ್ರಸ್ತಾಪವಾದವು. ಆಗ ಈ ಬಗ್ಗೆ ಉಸ್ತುವಾರಿ ಸಚಿವರು ವಿವರಣೆ ಕೇಳಿದಾಗ ವಿವರಣೆ ಕೊಡಲು ಅಧಿಕಾರಿಗಳು ತಡಕಾಡಿದರು. ಆಗ ಅಸಮಾಧಾನಗೊಂಡ ಸಚಿವರು, ಸರಿಯಾಗಿ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಬೇಕು. ಯಾರ ಬಳಿಯೂ ಸಮರ್ಪಕ ಮಾಹಿತಿ ಇಲ್ಲವೆಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ತಕ್ಷಣ ಚಿತಾಗಾರಕ್ಕೆ ಭೇಟಿ ನೀಡಿ ಯಾವ ಪರಿಸ್ಥಿತಿಯಲ್ಲಿದೆ. ಏನು ಸೌಲಭ್ಯಬೇಕು ಎಂಬ ಬಗ್ಗೆ ತಿಳಿದುಕೊಂಡು ಕಾರ್ಯಪ್ರವೃತ್ತರಾಗಿ ಎಂದು ಸಚಿವರು ಸೂಚನೆ ನೀಡಿದರು.  ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ನಾಗೇಂದ್ರ, ಹರ್ಷವರ್ಧನ್, ಶಾಸಕರಾದ ಅಶ್ವಿನ್ ಕುಮಾರ್,  ವಿಧಾನಪರಿಷತ್ ಸದಸ್ಯರಾದ ಧರ್ಮಸೇನ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ರಿಷ್ಯಂತ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಇತರರು ಇದ್ದರು.

Key words: no slowdown – Covid –management-  Minister- ST Somashekhar -officer