ವಿವಿಗಳಿಗೆ ಸರಕಾರದ ನೆರವು ಸಿಗುತ್ತಿಲ್ಲ: ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬೇಸರ

ಮೈಸೂರು, 17, 03, 2022: ವಿಶ್ವವಿದ್ಯಾಲಯಗಳಿಗೆ ಸರಕಾರದ ನೆರವು ಸಿಗುತ್ತಿಲ್ಲ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನಲ್ಲಿ
ನಡೆದ ಕನ್ನಡ ಸ್ನಾತಕೋತ್ತರ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸರಕಾರದ ನೆರವು ವಿವಿಗಳಿಗೆ ಸಿಗುತ್ತಿಲ್ಲ. ಯಾವುದೇ ಹೊಸ ಕೋರ್ಸ್ ಶುರು ಮಾಡಿದರೆ ಬೋಧಕರ ನೇಮಕ ಆಗುತ್ತಿಲ್ಲ. ‌ಕಾಯಂ ಬೋಧಕರಿಗಿಂತ ಅತಿಥಿ ಉಪನ್ಯಾಕರೆ ಹೆಚ್ಚಿದ್ದಾರೆ. ವಿವಿಯಲ್ಲಿ ಒಟ್ಟು 660 ಬೋಧಕ ಹುದ್ದೆಗಳಿದ್ದು, ಇದೀಗ ಕೇವಲ 280 ಮಂದಿ ಕಾಯಂ ಬೋಧಕರಿದ್ದಾರೆ. ಉತ್ತಮ ಬೋದಕರು ಸಿಕ್ಕರೆ ಮಕ್ಕಳು ಉನ್ನತ ಭವಿಷ್ಯದ ರೂಪಿಸಿಕೊಳ್ಳಬಹುದು ಎಂದರು.

ಈ ಹಿಂದೆ ದೂರಶಿಕ್ಷಣ ಇರಲಿಲ್ಲ. ಆ ಸ್ಥಾನವನ್ನು ಸಂಜೆ ಕಾಲೇಜು ತುಂಬುತ್ತಿದ್ದವು. ಆಗ ಇದ್ದ ಮರಿಮಲ್ಲಪ್ಪ ಹಾಗೂ ಬನುಮಯ್ಯ ಸಂಜೆ ಕಾಲೇಜು ಈಗ ಇಲ್ಲ.‌ ಆದರೆ, 60 ದಶಕದಲ್ಲಿ ಇದ್ದ ಮೈವಿವಿ ಸಂಜೆ ಕಾಲೇಜು ಈಗಲೂ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆ ವಿಷಯ.‌ ಉದ್ಯೋಗ ಮಾಡಿಕೊಂಡು ಓದುವ ಎಷ್ಟೋ ಜನರ ಕನಸಿಗೆ ಸಂಜೆ ಕಾಲೇಜು ವರದಾನವಾಗಿತ್ತು ಎಂದರು.

ಇಂದಿನ ವಿದ್ಯಾರ್ಥಿಗಳಿಗೆ ಪದವಿ ಮುಗಿದ ಮೇಲೆ ಏನು ಎಂಬುದು ಗೊತ್ತಿರಬೇಕು. ಆಗ ಇದ್ದಾಗ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಇಂದು ಸ್ಪರ್ಧೆ ಹೆಚ್ಚಿದ್ದು, ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳಬೇಕು. ಪ್ರಸ್ತುತ ದಿನದಲ್ಲಿ ಕೆಲಸಕ್ಕೆ‌ಕೊರತೆ ಇಲ್ಲ. ಆದರೆ, ಕೆಲಸಕ್ಕೆ ಬೇಕಾದ ಕೌಶಲ್ಯ ವಿದ್ಯಾರ್ಥಿಗಳಲ್ಲಿ ಇಲ್ಲವಾಗಿದೆ. ಹಾಗಾಗಿ ಮೈವಿವಿ ಕೆರಿಯರ್ ಹಬ್ ಸ್ಥಾಪಿಸಿದ್ದು, ಇದರಿಂದ ಉದ್ಯೋಗ ಸೃಷ್ಟಿ ಆಗುತ್ತಿದೆ. ಬೈಜೂಸ್ ನಂತಹ ಹೊಸ ಹೊಸ ಕಂಪನಿಗಳು ಬರುತ್ತಿದ್ದು, ಹೊಸ ಹೊಸ ಉದ್ಯೋಗಾವಕಾಶಗಳು ಲಭ್ಯವಾಗುತ್ತಿದೆ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಂ.ಜಿ. ಮಂಜುನಾಥ, ಸಂಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ. ಎಚ್.ಸಿ. ದೇವರಾಜೇಗೌಡ, ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜನಾಧಿಕಾರಿ ಡಾ. ಸಿ.ಡಿ. ಪರಶುರಾಮ,
ನಿವೃತ್ತ ಪ್ರಾಂಶುಪಾಲರಾದ ಪ್ರೊ.ಕಾಳಚನ್ನೇಗೌಡ, ಪ್ರೊ.ರುದ್ರಯ್ಯ ಸೇರಿದಂತೆ ಇತರರು ಹಾಜರಿದ್ದರು.