ಚಾಮರಾಜನಗರ ಆಕ್ಸಿಜನ್ ದುರಂತ: ತಜ್ಞರ ಸಮಿತಿಯ ವರದಿ ಸಂಪೂರ್ಣ ವಿವರ…

ಬೆಂಗಳೂರು, ಮೇ ,13,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ ೨ರಂದು ನಡೆದಂತಹ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೇಮಿಸಿದ್ದ  ನ್ಯಾ.ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವಗಳ ಪ್ರಾದಿಕಾರದ ಸಮಿತಿ ತನಿಖೆಯನ್ನು ಪೂರ್ಣಗೊಳಿಸಿ  ವರದಿ ಸಲ್ಲಿಸಿದೆ.

31 ಪುಟಗಳ ಸುದೀರ್ಘ ವರದಿಯನ್ನು ನ್ಯಾಯಾಲಯಕ್ಕೆ ಈ ಸಮಿತಿ ಸಲ್ಲಿಸಿದೆ. ವರದಿಯ ಪ್ರಮುಖ ಅಂಶಗಳು ಹೀಗಿವೆ

ವರದಿಯಲ್ಲಿ ಏನಿದೆ?

ಚಾಮರಾಜನಗರದ ಜಿಲ್ಲಾಸ್ಪತ್ರೆಯು ಚಾಮರಾಜನಗರ ಜಿಲ್ಲಾ ವೈದ್ಯಕೀಯ ಕಾಲೇಜಿನ ಸ್ವಾಮ್ಯತೆಯಡಿ ಇದ್ದು, ಇದು 346 ಹಾಸಿಗೆಗಳಿರುವ ಆಸ್ಪತ್ರೆಯಾಗಿದೆ. ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಸೇರಿದೆ. ಒಟ್ಟು 346 ಹಾಸಿಗೆಗಳ ಪೈಕಿ 167 ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿರಸಲಾಗಿದೆ. ಈ ಪೈಕಿ 133 ಆಮ್ಲಜನಕ ಸೌಲಭ್ಯರಹಿತವಾಗಿರುವ ಸಾಮಾನ್ಯ ಹಾಸಿಗೆಗಳಾಗಿದ್ದು, 31 ಲಘು ಆಮ್ಲಜನಕ ಸೌಲಭ್ಯಸಹಿತ ಹಾಗೂ 15 ಹಾಸಿಗೆಗಳು ಹೆಚ್ಚಿನ ಆಮ್ಲಜನಕ ಸೌಲಭ್ಯಸಹಿತ ಹಾಸಿಗೆಗಳಾಗಿವೆ. ಜಿಲ್ಲಾಸ್ಪತ್ರೆಯು 7000 ಲೀಟರ್ ಆಮ್ಲಜನಕ ಶೇಖರಣೆ ಸಾಮರ್ಥ್ಯವುಳ್ಳ 250 ಆಕ್ಷಿಜನ್ ಸಿಲಿಂಡರ್‌ಗಳನ್ನು ಹೊಂದಿದ್ದು, ಕೋವಿಡ್ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರ ಆಸ್ಪತ್ರೆಗಳಿಗೆಂದು ನೀಡಲಾಗಿದ್ದ 100 ಸಿಲಿಂಡರ್‌ಗಳನ್ನೂ ಸಹ ತರಿಸಿಕೊಳ್ಳಲಾಗಿತ್ತು. ಜಿಲ್ಲೆಯು ಆಮ್ಲಜನಕ ಸರಬರಾಜಿಗೆ ೭೦ ಕಿ.ಮೀ.ಗಳ ದೂರದಲ್ಲಿರುವ ಮೈಸೂರನ್ನು ಅವಲಂಭಿಸಿದೆ. ಮೈಸೂರಿನಲ್ಲಿ ಒಟ್ಟು ೫ ಆಮ್ಲಜನಕ ತುಂಬಿಸುವ ಘಟಕಗಳಿದ್ದು, ಪ್ರಸ್ತುತ ೪ ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಆಮ್ಲಜನಕದ ಸಿಲಿಂಡರ್‌ ಗಳು ಖಾಲಿಯಾದಂತೆ ಅವುಗಳನ್ನು ಮೈಸೂರಿನಲ್ಲಿರುವ ಆಮ್ಲಜನಕ ಪೂರೈಕೆ ಘಟಕಗಳಿಗೆ ಕಳುಹಿಸಿ, ತುಂಬಿಸಿ ಪುನಃ ಅವುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಹಾಗಾಗಿ, ಇವುಗಳ ಸಂಪೂರ್ಣ ಜವಾಬ್ದಾರಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೆ ಸೇರಿದೆ. ಮೇ ೧, ೨೦೨೧ರಂದು ಆಮ್ಲಜನಕದ ಅವಶ್ಯಕತೆ ಇದ್ದಂತಹ ಕೋವಿಡ್ ರೋಗಿಗಳೂ ಒಳಗೊಂಡಂತೆ ಒಟ್ಟು ೧೬೪ ಹಾಸಿಗೆಗಳಿಗೆ ಆಮ್ಲಜನಕ ಸರಬರಾಜು ಮಾಡಲಾಗುತಿತ್ತು. ಅವಶ್ಯಕತೆ ಇದ್ದ ಆಮ್ಲಜನಕ ೩೦.೫೦ ಲಕ್ಷ ಲೀಟರ್‌ಗಳಾಗಿತ್ತು. ಆದರೆ ಶೇಖರಣೆಯಲ್ಲಿದ್ದಂತಹ ಆಮ್ಲಜನಕ ಮೇ ೨ ರಂದು ಮಧ್ಯಾಹ್ನ ೨ ಗಂಟೆಗೆ ಖಾಲಿಯಾಗಿತ್ತು.Chamarajanagar -Oxygen –Disaster- Full report - expert panel

ಮೈಸೂರಿನಿಂದ ಮಧ್ಯಾಹ್ನ ಸುಮಾರು ಮಧ್ಯಹ್ನ ೧.೩೦ ಹಾಗೂ ಸಂಜೆ ೬.೩೦ಕ್ಕೆ ಎರಡು ಬಾರಿ ಒಟ್ಟು ೧೩೧ ಸಿಲಿಂಡರ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಆದರೆ ಅದು ರಾತ್ರಿ ೧೦.೩೦ರ ಹೊತ್ತಿಗೆ ಖಾಲಿಯಾಗಿತ್ತು. ಪುನಃ ಹತ್ತಿರದ ಕೊಳ್ಳೇಗಾಲದಿಂದ ೪ ಸಿಲಿಂಡರ್‌ಗಳನ್ನು ತರಿಸಲಾಯಿತು. ಆದರೆ ಅದೂ ಸಹ ಮಧ್ಯರಾತ್ರಿ ೧೨.೩೦ರ ಹೊತ್ತಿಗೆ ಖಾಲಿಯಾಯಿತು. ಹಾಗಾಗಿ ಆಮ್ಲಜನಕದ ಕೊರತೆ ಎದುರಾಯಿತು. ಆಮ್ಲಜನಕವನ್ನು ಸರಬರಾಜು ಮಾಡುವಂತೆ ಕೋರಿದ ಮೇರೆಗೆ ಮೈಸೂರಿನಿಂದ ಪುನಃ ೫೦ ಸಿಲಿಂಡರ್‌ಗಳನ್ನು ಕಳುಹಿಸಲಾಯಿತು. ಆದರೆ ಅದು ತಲುಪುವ ಹೊತ್ತಿಗೆ ಮೇ ೩ರ ಮುಂಜಾನೆ ೨.೩೦ ಆಗಿತ್ತು. ಈ ರೀತಿ ಮೇ ೨ರ ರಾತ್ರಿ ೧೦.೩೦ರಿಂದ ಮೇ ೩ರ ಮುಂಜಾನೆ ೨.೩೦ರವರೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಎದುರಾಯಿತು. ಇದರಿಂದಾಗಿ ದುರ್ಘಟನೆ ಸಂಭವಿಸಿದೆ.

ಚಾಮರಾಜನಗರದ ಜಿಲ್ಲಾಧಿಕಾರಿಗಳು ಮೇ ೨ರಂದು ನಡೆಸಿದಂತಹ ಸಭೆಯಲ್ಲಿ ಆಮ್ಲಜನಕದ ಲಭ್ಯತೆಯ ಕುರಿತು ಯಾವುದೇ ಮಾಹಿತಿ ಪಡೆದುಕೊಂಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ ನೋಡಲ್ ಅಧಿಕಾರಿಯಾಗಲೀ, ಅಥವಾ ಕ್ಯಾಂಪ್ ಅಧಿಕಾರಿಯೂ ಸಹ ಆ ಬಗ್ಗೆ ಪ್ರಸ್ತಾಪಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಿದ್ದರೆ ಇಷ್ಟೊಂದು ಜನರ ಪ್ರಾಣ ಉಳಿಸಬಹುದಾಗಿತ್ತು.

Key words: Chamarajanagar -Oxygen –Disaster- Full report – expert panel