ಅವಧಿಯಂತೆ ಬಿಬಿಎಂಪಿ ಚುನಾವಣೆ: ತಯಾರಿ ನಡೆಸಲು ಸಮಿತಿ ರಚನೆ-ಕಂದಾಯ ಸಚಿವ ಆರ್‌ ಅಶೋಕ್‌

Promotion

ಬೆಂಗಳೂರು, ಸೆಪ್ಟೆಂಬರ್‌, 7, 2020(www.justkannada.in):  ಅವಧಿಯಂತೆ ಬಿಬಿಎಂಪಿ ಚುನಾವಣೆ ನಡೆಸುವುದು ಸರಕಾರದ ಉದ್ದೇಶವಾಗಿದ್ದು, ಇದಕ್ಕೆ ಬೇಕಾದ ತಯಾರಿಯನ್ನು ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್‌ ಹೇಳಿದ್ದಾರೆ.jk-logo-justkannada-logo

ಬೊಮ್ಮನಹಳ್ಳಿ – ಬಿ.ಟಿ.ಎಂ ಲೇಔಟ್‌ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆಯನ್ನು ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಬೊಮ್ಮನಹಳ್ಳಿ – ಬಿ.ಟಿ.ಎಂ ಲೇಔಟ್‌ ರಸ್ತೆ ನಿರ್ಮಾಣದ ಕಾರ್ಯ ಒಂದು ಹಂತ ಪೂರ್ಣ ಆಗಿದೆ. ಇನ್ನು ಕೆಲವು ಭಾಗದ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ. ಬೆಂಗಳೂರು ನಗರ ನಿರೀಕ್ಷೆಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಸೌಕರ್ಯ ಕೊಡುವ ದೃಷ್ಟಿಯಿಂದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯ ಆಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯದ್ದೇ ಸಮಸ್ಯೆ. ಸಿಲ್ಕ್‌ ಬೋರ್ಡ್‌ ನಲ್ಲಿ ನಾವೂ ಕೂಡಾ ಹಲವಾರು ಬಾರಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದೇವೆ. ಸಂಚಾರ ದಟ್ಟಣೆ ನಿವಾರಣೆಗೆ ಈ ರಸ್ತೆ ಕೊಡುಗೆ ನೀಡಲಿದೆ. ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಬೊಮ್ಮನಹಳ್ಳಿ – ಬಿ.ಟಿ.ಎಂ ಲೇಔಟ್‌ ಸಂಪರ್ಕಿಸುವ ರಸ್ತೆಯನ್ನು ನಿರ್ಮಿಸಲಾಗಿದೆ. ಇದಕ್ಕೆ ಈ ಭಾಗದ ಶಾಸಕರಾದ ಸತೀಶ್‌ ರೆಡ್ಡಿ ಹಾಗೂ ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯರು ಹಾಗೂ ಉಪಮಹಾಪೌರರಾದ ರಾಮ್‌ ಮೋಹನ್‌ ರಾಜ್‌ ಅವರ ಒತ್ತಾಸೆ ಬಹಳಷ್ಟಿದೆ. ರಾಜ್ಯಕ್ಕೆ ಹೆಚ್ಚು ಸಂಪನ್ಮೂಲ ನೀಡುವ ನಗರ ಬೆಳೆಯುತ್ತಿರುವಂತೆ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

ಅವಧಿಯಂತೆ ಬಿಬಿಎಂಪಿ ಚುನಾವಣೆ ನಡೆಯಬೇಕು. ನಡೆಯಬೇಕು ಎನ್ನುವ ಉದ್ದೇಶದಿಂದಲೇ ಸಮಿತಿಗಳನ್ನು ರಚನೆ ಮಾಢಿದ್ದೇವೆ. ವಾರ್ಡಗಳನ್ನು ಪುನರ್‌ ರಚನೆ ಯಂತಹ ಕಾರ್ಯಗಳು ಅಧಿಕಾರಿಗಳಿಗೆ ಸಂಬಂಧಪಟ್ಟ ವಿಷಯವಾಗಿದೆ ಎಂದು ಹೇಳಿದರು. bbmp-election-period-minister-r-ashok

ಬೊಮ್ಮನಹಳ್ಳಿ ವಾರ್ಡ್ ನ ಪಾಲಿಕೆ ಸದಸ್ಯರೂ ಆಗಿರುವ ಉಪ ಮೇಯರ್ ಸಿ.ಆರ್.ರಾಮಮೋಹನ್ ರಾಜ್  ಮಾತನಾಡಿ, ಟ್ರೋಲ್‌ಗಳು ಹಾಗೂ ವೈರಲ್‌ ವಿಡಿಯೋಗಳ ಮೂಲಕ ವಿಶ್ವವಿಖ್ಯಾತಿಯನ್ನ ಪಡೆದಿರುವ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ನ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಬೊಮ್ಮನಹಳ್ಳಿ – ಬಿ.ಟಿ.ಎಂ ಲೇಔಟ್‌ ರಸ್ತೆ ಹಾಗೂ ಸಂಪರ್ಕ ಸೇತುವೆಯನ್ನು ಈ ದಿನ ವಾಹನ ಸವಾರರ ಬಳಕೆಗೆ ಮುಕ್ತಗೊಳಿಸಲಾಗಿದೆ. ಪ್ರತಿದಿನ ಲಕ್ಷಾಂತರ ವಾಹನ ಸವಾರರು ಈ ಜಂಕ್ಷನ್‌ ನಲ್ಲಿ ಸಂಚಾರ ದಟ್ಟಣೆಯ ಕಾರಣ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ಬವಣೆಯನ್ನು ನಿವಾರಿಸುವ ದೃಷ್ಟಿಯಿಂದ ಕೈಗೊಂಡ ಕಾಮಗಾರಿಯ ಪೂರ್ಣಗೊಂಡಿದೆ. ಈ ಸಂಪರ್ಕ ರಸ್ತೆಯ ಕಾರಣದಿಂದಾಗಿ ಸುಮಾರು 50 ಸಾವಿರ ವಾಹನ ಸವಾರರು ಸಂಚಾರ ದಟ್ಟಣೆಯ ಬವಣೆಯಿಂದ ಬಚಾವ್‌ ಆಗಲಿದ್ದಾರೆ. ಬೊಮ್ಮಹಳ್ಳಿ ಹಾಗೂ ಬಿ.ಟಿ.ಎಂ ಪ್ರದೇಶದ ಜನರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ, ಬಿಟಿಎಂ ಲೇಔಟ್ ನ ಶಾಸಕ ರಾಮಲಿಂಗಾ ರೆಡ್ಡಿ, ಮೇಯರ್ ಗೌತಮ್‌ ಕುಮಾರ್‌ ಸೇರಿದಂತೆ ಬಿಬಿಎಂಪಿಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.

Key words: BBMP -election – period- Minister – R Ashok