ಮಕ್ಕಳಿಗೆ ರೋಟಾ ವೈರಸ್ ಲಸಿಕೆ ಆಗಸ್ಟ್​ನಿಂದ ಹಾಕಲು ರಾಜ್ಯಾದ್ಯಂತ ಸಿದ್ಧತೆ: ಅತಿಸಾರ ಭೇದಿ ತಡೆಗಟ್ಟಲು ಅಭಿಯಾನ

Promotion

ಬೆಂಗಳೂರು:ಜುಲೈ-13: ರೋಟಾ ವೈರಸ್ ಸೋಂಕಿನಿಂದ ಮಕ್ಕಳಲ್ಲಿ ಹರಡುವ ಅತಿಸಾರ ಭೇದಿ ತಡೆಗಟ್ಟಲು ಆರೋಗ್ಯ ಇಲಾಖೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ‘ರೋಟಾ ವೈರಸ್ ಲಸಿಕೆ’ ಹಾಕಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಜಿಲ್ಲಾಮಟ್ಟದ ವೈದ್ಯರು ಮತ್ತು ಸಿಬ್ಬಂದಿ ಸೇರಿ ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿಗಳನ್ನು ಪ್ರಾರಂಭಿಸಿದೆ.

6 ತಿಂಗಳಿನಿಂದ 5ವರ್ಷದೊಳಗಿನ ಮಕ್ಕಳಲ್ಲಿ ರೋಟಾ ವೈರಸ್ ಸೋಂಕು ಹೆಚ್ಚಾಗಿ ಕಂಡುಬರಲಿದ್ದು, ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಅತಿಸಾರ ಉಂಟಾಗಲು ಕಾರಣವಾಗಿ ಸಾವನ್ನೂ ತಂದೊಡ್ಡಲಿದೆ.

ದೇಶದಲ್ಲಿ ಅತಿಸಾರದಿಂದ ಆಸ್ಪತ್ರೆಗೆ ಸೇರುವವರಲ್ಲಿ ಅಂದಾಜು ಶೇ.40 ಮಕ್ಕಳು ರೋಟಾ ವೈರಸ್ ಸೋಂಕಿಗೆ ಗುರಿಯಾಗುತ್ತಿದ್ದಾರೆ. 32.7 ಲಕ್ಷ ಮಕ್ಕಳು ಹೊರ ರೋಗಿಗಳ ಚಿಕಿತ್ಸೆಗೆ ಪಡೆಯುತ್ತಿದ್ದಾರೆ. 8.72 ಲಕ್ಷ ಮಕ್ಕಳು ಆಸ್ಪತ್ರೆ ಸೇರುತ್ತಿದ್ದಾರೆ. 78 ಸಾವಿರದಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ. ಅವರಲ್ಲಿ 59 ಸಾವಿರ ಮಕ್ಕಳ ವಯಸ್ಸು ಎರಡು ವರ್ಷಕ್ಕಿಂತ ಕಡಿಮೆ ಇರುತ್ತದೆ ಎನ್ನಲಾಗಿದೆ. ರೋಟಾ ವೈರಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಇದಕ್ಕೆ ರೋಟಾ ವೈರಸ್ ಲಸಿಕೆಯೇ ಸೂಕ್ತ ಔಷಧವಾಗಿದೆ.

ಆಗಸ್ಟ್​ನಿಂದ ಲಸಿಕೆ: ರೋಟಾ ವೈರಸ್ ಲಸಿಕೆಯನ್ನು (ರೋಟಾಸಿಲ್) ಮಗು ಜನಿಸಿದ 6, 10 ಮತ್ತು 14ನೇ ವಾರದಲ್ಲಿ ನೀಡಲಾಗುತ್ತದೆ. ಈ ಲಸಿಕೆಯನ್ನು ದೇಶದ 11 ರಾಜ್ಯಗಳಲ್ಲಿ ಈಗಾಗಲೇ ನೀಡಲಾಗುತ್ತಿದೆ. ರಾಜ್ಯದಲ್ಲಿ 2019ರ ಆಗಸ್ಟ್​ನಿಂದ ಎಲ್ಲಾ ಸರ್ಕಾರಿ ಅಸ್ಪತ್ರೆಗಳಲ್ಲೂ ಲಸಿಕೆ ಹಾಕಲು ಸಿದ್ಧತೆ ನಡೆಯುತ್ತಿದೆ.

ರೋಟಾ ವೈರಸ್ ಲಕ್ಷಣಗಳು: ರೋಟಾ ವೈರಸ್ ಸೋಂಕು ದೇಹ ಸೇರಿದ ನಂತರ 1ರಿಂದ 3 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಬಹುದು. ಭೇದಿ ಜತೆಗೆ ಜ್ವರ ಮತ್ತು ವಾಂತಿ, ಒಮ್ಮೊಮ್ಮೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಭೇದಿ ಮತ್ತು ಇತರ ಲಕ್ಷಣಗಳು ಅಂದಾಜು 3ರಿಂದ 7 ದಿನಗಳವರೆಗೆ ಇರುತ್ತದೆ.

ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದಲ್ಲಿ ಶರೀರದಲ್ಲಿ ನೀರು ಮತ್ತು ಲವಣಾಂಶದ ಕೊರತೆ ಉಂಟಾಗಿ ಮೃತ ಪಡುವ ಸಂಭವವೂ ಸಾಧ್ಯವಿದೆ.

ದಾಖಲಾದ ಪ್ರಕರಣಗಳ ವಿವರ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್​ಎಫ್​ಎಚ್​ಸಿ) ಪ್ರಕಾರ ರಾಜ್ಯದಲ್ಲಿ 2006-07ನೇ ಸಾಲಿನಲ್ಲಿ ಶೇ.8.6 ಮಕ್ಕಳ ಅತಿಸಾರ ಪ್ರಕರಣಗಳು ವರದಿಯಾಗಿವೆ. 2015-16ರ ಸರ್ವೆ ಪ್ರಕಾರ ಶೇ. 4.8 ರೋಗ ಪತ್ತೆಯಾಗಿದೆ. ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸೆ ್ಥಎಚ್​ಎಂಐಎಸ್) ವರದಿ ಪ್ರಕಾರ 2017-18ನೇ ಸಾಲಿನಲ್ಲಿ 68 (ಶೇ.0.04) ಮತ್ತು 2018-19ರ ಪ್ರಕಾರ 53 (ಶೇ.0.03) ಮಕ್ಕಳು ಅತಿಸಾರದಿಂದ ಸಾವಿಗೀಡಾಗಿವೆ.

ವೈರಸ್ ಹರಡುವಿಕೆ

ರೋಟಾ ವೈರಸ್ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕಲುಷಿತ ನೀರು, ಆಹಾರ ಮತ್ತು ಕೊಳೆಯಾದ ಮಕ್ಕಳ ಕೈಯಿಂದ ಹರಡುತ್ತದೆ. ತಕ್ಷಣ ಮಗುವಿನ ಮಲ ಪರೀಕ್ಷೆ ಮಾಡಿಸಿದಾಗ ರೋಟಾ ವೈರಸ್ ಪತ್ತೆಯಾಗುತ್ತದೆ. ವೈರಸ್ ಹರಡುವಿಕೆ ತಡೆಗಟ್ಟಲು ನೈರ್ಮಲ್ಯತೆ ಕಾಪಾಡಿಕೊಳ್ಳುವುದು, ಆಗಾಗ ಕೈ ತೊಳೆಯುವುದು, ಸ್ಪಚ್ಛ- ಸುರಕ್ಷಿತ ನೀರು, ಊಟ ಸೇವಿಸುವುದು, ಮಗು ಹುಟ್ಟಿದ ಮೊದಲ 6 ತಿಂಗಳು ಕೇವಲ ಎದೆ ಹಾಲುಣಿಸುವುದು, ಎ ವಿಟಮಿನ್ ಇರುವ ಪೂರಕ ಆಹಾರಗಳನ್ನು ನೀಡುವ ಮೂಲಕ ರೋಗ ತಡೆಗಟ್ಟಬಹುದಾಗಿದೆ.

ಅತಿಸಾರದಿಂದ ಬಳಲುತ್ತಿರುವ ಮಕ್ಕಳ ಸಾವನ್ನು ರೋಟಾ ವೈರಸ್ ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಪೋಷಣ್ ಅಭಿಯಾನ ಮೂಲಕ ರೋಟಾ ವೈರಸ್ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ.
| ಬಿ.ಎನ್. ರಜನಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಉಪ ನಿರ್ದೇಶಕಿ
ಕೃಪೆ:ವಿಜಯವಾಣಿ

ಮಕ್ಕಳಿಗೆ ರೋಟಾ ವೈರಸ್ ಲಸಿಕೆ ಆಗಸ್ಟ್​ನಿಂದ ಹಾಕಲು ರಾಜ್ಯಾದ್ಯಂತ ಸಿದ್ಧತೆ: ಅತಿಸಾರ ಭೇದಿ ತಡೆಗಟ್ಟಲು ಅಭಿಯಾನ
children-to-be-given-rota-virus-drops-from-august