ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆದವರ ಪ್ರಮಾಣ ಶೇ.62: ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

Promotion

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯಲು ನಿಗದಿಪಡಿಸಿದವರಲ್ಲಿ ಶೇ.62 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರೊಂದಿಗೆ ವೀಡಿಯೋ ಸಂವಾದ ನಡೆದ ಬಳಿಕ ಸಚಿವರು ಮಾತನಾಡಿದರು.

ಶೇ.62 ರಷ್ಟು ಮಂದಿ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡಿದ್ದು, ಬಹಳ ಆಶಾದಾಯಕವಾಗಿದೆ. ಮೊದಲ ದಿನ 21,658 ಮಂದಿಗೆ ಲಸಿಕೆ ನೀಡಬೇಕೆಂದು ನಿಗದಿಯಾಗಿತ್ತು. ಈ ಪೈಕಿ 13,408 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾರಿಗೂ ಗಂಭೀರ ಸಮಸ್ಯೆ, ಅಡ್ಡ ಪರಿಣಾಮ ಕಂಡುಬಂದಿಲ್ಲ. ಚುಚ್ಚುಮದ್ದು ನೀಡಿದಾಗ ಕೆಲವರಿಗೆ ಊತ ಬಂದಿರಬಹುದು. ಆದರೆ ಅದು ಕೇವಲ ಅರ್ಧಗಂಟೆಯಲ್ಲಿ ಕಡಿಮೆಯಾಗಿ ಮನೆಗೆ ತೆರಳಿದ್ದಾರೆ ಎಂದರು.

ಸೋಮವಾರದಿಂದ ಮತ್ತೆ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಭಾನುವಾರ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ನಾನು ನಾನಾ ಭಾಗಗಳಲ್ಲಿ ಸಂಚರಿಸಿ ಲಸಿಕೆ ಪಡೆಯುವಂತೆ ಉತ್ತೇಜಿಸಲಿದ್ದೇನೆ ಎಂದರು.

ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಂದರೆ 84% ಮಂದಿ ಲಸಿಕೆ ಪಡೆದಿದ್ದಾರೆ. ಉತ್ತರ ಕನ್ನಡದಲ್ಲಿ 80% ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಅಂದರೆ, 37% ಮಂದಿ ಲಸಿಕೆ ಪಡೆದಿದ್ದಾರೆ. ಈ ಜಿಲ್ಲೆಯಲ್ಲಿ 660 ಮಂದಿಗೆ ಲಸಿಕೆ ನೀಡುವ ಗುರಿ ಇದ್ದು, 223 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದು ವಿದ್ಯಾವಂತರ ಜಿಲ್ಲೆಯಾಗಿದ್ದು, ಹೆಚ್ಚಿನವರು ಲಸಿಕೆ ಪಡೆಯಬೇಕು ಎಂದು ಕೋರಿದರು.

ಬೆಂಗಳೂರು ನಗರದಲ್ಲಿ 53% ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 65% ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಳ್ಳಲಾಗಿದೆ. ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಡಿಮೆ ಪ್ರಮಾಣದಲ್ಲಿ 28% ಆಗಿದೆ ಎಂದು ತಿಳಿಸಿದರು. ಮೊದಲ ದಿನ ಲಸಿಕೆ ಪಡೆಯದವರು ಮುಂದಿನ ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆ.

ರಾಜ್ಯದಲ್ಲಿ 7.43 ಲಕ್ಷ ಮಂದಿಯನ್ನು ಗುರುತಿಸಿದ್ದು, 8 ಲಕ್ಷ ಲಸಿಕೆ ಬಂದಿದೆ. ಇನ್ನೂ 8 ಲಕ್ಷ ಲಸಿಕೆ ಕಳುಹಿಸಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದರು.

ಪೌರಕಾರ್ಮಿಕರೊಬ್ಬರಿಗೆ‌‌ ಮೊದಲ ಲಸಿಕೆ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆ ಪ್ರತಿಪಕ್ಷಗಳಿಗೆ ಅರ್ಥವಾಗಿಲ್ಲ.‌ ಆದರೆ ಸಾಮಾನ್ಯ ಜನರಿಗೆ ಅರ್ಥವಾಗಿದೆ ಎಂದರು.