ಶೀಘ್ರವೇ ಉದ್ದೇಶಿತ ನೂತನ ಜೈವಿಕ ಇಂಧನ ನೀತಿ 2025-30 ಅನುಷ್ಠಾನಕ್ಕೆ ಕ್ರಮ: ಎಸ್‌.ಈ. ಸುಧೀಂದ್ರ

ಬೆಂಗಳೂರು,ಮೇ,24,2025 (www.justkannada.in):  “ನೂತನ ಜೈವಿಕ ಇಂಧನ ನೀತಿ”ಯ ಕಾರ್ಯಯೋಜನೆ ರೂಪಿಸುತ್ತಿದ್ದು, ಶೀಘ್ರವೇ ಈ ನೀತಿಯನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು  ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ ಸುಧೀಂದ್ರ ತಿಳಿಸಿದರು.

ಮಂಡಳಿಯ 42ನೇ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್. ಈ ಸುಧೀಂದ್ರ ಅವರು, ಉದ್ದೇಶಿತ ಜೈವಿಕ ಇಂಧನ ನೀತಿ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿದರು. ರಾಜ್ಯದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಜೈವಿಕ ಇಂಧನ ಬಳಕೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ನೂತನ ಜೈವಿಕ ಇಂಧನ ನೀತಿಯನ್ನೂ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ನೀತಿಯನ್ನು ಅನುಷ್ಠಾನಗೊಳಿಸುವ ಮೂಲಕ ಜೈವಿಕ ಇಂಧನಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡುವಂತೆ ಮಾಡಲಾಗುವುದು ಎಂದು ಹೇಳಿದರು. ಇದೇ ವೇಳೆ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀ ಕೃಷ್ಣನ್‌, ಜಾಗತಿಕ ಮಟ್ಟದಲ್ಲಿ ಜೈವಿಕ ಇಂಧನಗಳ ಕುರಿತ ಸ್ಥಿತಿಗತಿ, ಉತ್ಪಾದನೆ, ಪೂರೈಕೆ ಹಾಗೂ ಬೇಡಿಕೆಯ ಕುರಿತು ವಿಷಯ ಮಂಡಿಸಿದರು. ಜೈವಿಕ ಇಂಧನ ಕ್ಷೇತ್ರದಲ್ಲಿ ಬಯೋಬ್ರಿಕೆಟ್ಸ್‌, ಬಯೋಪಿಲೆಟ್ಸ್‌, ಕಂಪ್ರೆಸ್ಡ್‌ ಬಯೋಗ್ಯಾಸ್‌, ಬಯೋಮಾಸ್‌ ಆಧಾರಿತ ಗ್ರೀನ್‌ ಹೈಡ್ರೋಜನ್‌ ಮುಂತಾದವುಗಳು ಅಟೋಮೊಬೈಲ್‌ ಸ್ಥಳೀಯ ಸಂಸ್ಥೆಗಳಲ್ಲಿನ ವಿದ್ಯುತ್‌ ಬೇಡಿಕೆಗಳನ್ನು ಸುಧಾರಿಸುವಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಯೋಡೀಸೆಲ್‌ ಉತ್ಪಾದನೆಗೆ ಬೀಜಗಳ ಸಂಗ್ರಹಣೆಗೆ ಕ್ರಮ:

ರಾಜ್ಯದಲ್ಲಿ ಬಯೋಡೀಸಲ್‌ ಉತ್ಪಾದನೆಗೆ ಅವಶ್ಯ ತೈಲ ಬೀಜಗಳಾದ ಹೊಂಗೆ, ಬೇವು, ಹಿಪ್ಪೆ ಸೀಮರೂಬ ಇತ್ಯಾದಿಗಳ ಸಂಗ್ರಹಣೆ ಕೊಡಲೇ ಉಪ ಸಮಿತಿ ರಚಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು. ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌.ಎಲ್‌, ಸದಸ್ಯರುಗಳಾದ, ಕೆ.ಕ್ರಿಷನ್‌, ದಿವಾಕರ್‌ ರಾವ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಉಪ ಕಾರ್ಯದರ್ಶಿಗಳಾದ ಎಂ.ಎಂ.ರಾಜು,  ಡಿಸಿಎಫ್‌ ಮತ್ತು ತಾಂತ್ರಿಕ ಅಧಿಕಾರಿ ಲೋಹಿತ್‌ ಬಿ.ಆರ್‌, ಸಲಹೆಗಾರರುಗಳಾದ ಭರತ್‌ ಸುಬ್ರಮಣ್ಯಂ, ನಿಮ್ಮನ್‌ ದೀಪಿ ಸಿಂಗ್‌, ಸಂತೋಷ್‌ ಬಿ.ಎಲ್‌, ಡಾ.ದಯಾನಂದ ಜಿ.ಎನ್‌, ಅರಣ್ಯ ಇಲಾಖೆಯ ಡಿಸಿಎಫ್‌ ರಮೇಶ್‌ ಬಿ.ಆರ್, ಕೆಎಸ್‌ ಆರ್‌ಟಿಸಿ, ಕೆಎಸ್‌ಸಿಎಸ್‌ ಟಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Key words: implement, new biofuel policy 2025-30,  S.E. Sudhindra