ರಾಷ್ಟ್ರೀಯ ಲೋಕ್ ಅದಾಲತ್‌: 14,077 ಪ್ರಕರಣಗಳು ಇತ್ಯರ್ಥ

ಮೈಸೂರು,ಡಿಸೆಂಬರ್,16,2025 (www.justkannada.in): ಮೈಸೂರು ಜಿಲ್ಲೆಯಲ್ಲಿ ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ ಪ್ರಕರಣಗಳಲ್ಲಿ (ನ್ಯಾಯಾಲಯದಲ್ಲಿ ಬಾಕಿ ಇರುವ) 14,077 ಪ್ರಕರಣಗಳನ್ನು  ರಾಷ್ಟ್ರೀಯ ಲೋಕ್ ಅದಾಲತ್‌ ನಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಷಾರಾಣಿ ಅವರು ತಿಳಿಸಿದರು.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ನ್ಯಾ. ಉಷಾರಾಣಿ ಅವರು,  ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದಂತೆ ಡಿಸೆಂಬರ್ 13  ರಂದು ಮೈಸೂರು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,30,887 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 65,170 ಸಿವಿಲ್ ಪ್ರಕರಣಗಳು ಹಾಗೂ 65,666 ಕ್ರಿಮಿನಲ್ ಪ್ರಕರಣಗಳಿದ್ದು, ಪ್ರಸ್ತುತ ಸದರಿ ಪ್ರಕರಣಗಳಲ್ಲಿ 49,645 ಪ್ರಕರಣಗಳನ್ನು ರಾಜಿಯಾಗಬಹುದಾದ ಪ್ರಕರಣಗಳಿವೆ.  ಅವುಗಳ ಪೈಕಿ 26,694 ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ ಪ್ರಕರಣಗಳಲ್ಲಿ (ನ್ಯಾಯಾಲಯದಲ್ಲಿ ಬಾಕಿ ಇರುವ) 14,077 ಪ್ರಕರಣಗಳನ್ನು  ರಾಷ್ಟ್ರೀಯ ಲೋಕ್ ಅದಾಲತ್‌ ನಲ್ಲಿ ಇತ್ಯರ್ಥಪಡಿಸಲಾಗಿದೆ.

ಈ ಬಾರಿಯ ಲೋಕ್ ಅದಾಲತ್‌ ನಲ್ಲಿ ವಿಶೇಷವಾಗಿ Traffic Challan 50% ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 10,41,732 ಪ್ರಕರಣಗಳು ವಿಲೇವಾರಿಯಾಗಿದ್ದು, ಸದರಿ ಪ್ರಕರಣಗಳಲ್ಲಿ ಒಟ್ಟು  ರೂ.23,61,37,150/- ಗಳು ಸ್ವೀಕೃತವಾಗಿರುತ್ತದೆ.  ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20 ರ ಅವಧಿಯಲ್ಲಿ ದಾಖಲಾಗಿ, ಪಾವತಿಗೆ ಬಾಕಿಯಿರುವ ಪ್ರಕರಣಗಳ ಮೊತ್ತದಲ್ಲಿ ಶೇಕಡ 50% ರಷ್ಟು ರಿಯಾಯಿತಿಯನ್ನು ನೀಡಿದ್ದು, ಜಿಲ್ಲೆಯಾದ್ಯಂತ ಒಟ್ಟು 116 ಪ್ರಕರಣಗಳು ಇತ್ಯರ್ಥವಾಗಿದ್ದು, ರೂ.141,900/- ಗಳು ಸ್ವೀಕೃತವಾಗಿದೆ ಎಂದು ತಿಳಿಸಿದರು.

ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲ್ಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 42 ದಂಪತಿಗಳು ತಮ್ಮ ಮಧ್ಯದ ವಾಜ್ಯಗಳನ್ನು ಬಗೆಹರಿಸಿಕೊಂಡು ಒಂದಾಗಿದ್ದಾರೆ.

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟಾರೆಯಾಗಿ 14,077 ನ್ಯಾಯಾಲಯದಲ್ಲಿ ಬಾಕಿಯಿದ್ದ ಪ್ರಕರಣಗಳು ತೀರ್ಮಾನವಾಗಿರುತ್ತದೆ. ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನ ಮೂಲಕ ಒಟ್ಟು ರೂ.73,55,63,277/- ಮೊತ್ತಗಳು ಇತ್ಯರ್ಥವಾಗಿದೆ ಎಂದು ನ್ಯಾ.ಉಷಾರಾಣಿ ಅವರು ತಿಳಿಸಿದ್ದಾರೆ.

ಹಾಗೆಯೇ ಈ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಪದಾಧಿಕಾರಿಗಳು, ಎಲ್ಲಾ ವಕೀಲರುಗಳು ಹಾಗೂ ಕಕ್ಷಿಗಾರರು, ಪೊಲೀಸ್ ಇಲಾಖೆಯನ್ನೊಳಗೊಂಡಂತೆ ಇನ್ನಿತರೆ ಎಲ್ಲಾ ಇಲಾಖೆಗಳು ಹಾಗೂ ಮಾಧ್ಯಮ ಮಿತ್ರರುಗಳಿಗೆ ನ್ಯಾಯಾಧೀಶರಾದ ಉಷಾರಾಣಿ  ಅವರು ಕೃತಜ್ಞತೆಯನ್ನು ಸಲ್ಲಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಅಮರ್‌ ನಾಥ್‌ ಕೆ.ಕೆ,  ಮೈಸೂರು ವಕೀಲರ ಸಂಘದ ಅಧ್ಯಕ್ಷ. ಎಸ್.ಲೋಕೇಶ್ ಮತ್ತು ಕಾರ್ಯದರ್ಶಿಎ.ಜಿ.ಸುಧೀರ್ ಹಾಗೂ ಎಲ್ಲಾ ಮೈಸೂರು ನಗರದ ನ್ಯಾಯಾಲಯಗಳ ನ್ಯಾಯಾಧೀಶರು ಹಾಜರಿದ್ದರು.

Key words: National Lok Adalat, Mysore, 14,077 cases, disposed