ಬೆಳಗಾವಿ,ಡಿಸೆಂಬರ್,11,2025 (www.justkannada.in): ನಂಜನಗೂಡು ರಸಬಾಳೆ ಬೆಳೆಯುವ ರೈತರನ್ನು ಉತ್ತೇಜಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್ .ಎಸ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಬೆಳಗಾವಿಯ ವಿಧಾನಪರಿಷತ್ ನಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನಪರಿಷತ್ ನಲ್ಲಿ ಎಂಎಲ್ ಸಿ ಕೆ.ಶಿವಕುಮಾರ್ ನಂಜನಗೂಡು ರಸಬಾಳೆ ಕುರಿತು ಪ್ರಶ್ನೆಗಳನ್ನ ಕೇಳಿದರು. ನಂಜನಗೂಡು ರಸಬಾಳೆ ತಳಿಯನ್ನು ಎಷ್ಟು ಹೆಕ್ಟೇರ್ ಪ್ರದೇಶಗಳಲ್ಲಿ ಮತ್ತು ಯಾವ ಯಾವ ಭಾಗಗಳಲ್ಲಿ ಬೆಳೆಯಲಾಗುತ್ತಿದೆ. ಈ ತಳಿಯನ್ನು ಹೆಚ್ಚಿನದಾಗಿ ಬೆಳೆಯಲು ಸರ್ಕಾರದಿಂದ ಉತ್ತೇಜನ ನೀಡುವ ಯೋಜನೆಗಳಾವುವು? ಎಂದು ಪ್ರಶ್ನೆಗಳನ್ನ ಕೇಳಿದರು.
ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಸ್ .ಎಸ್ ಮಲ್ಲಿಕಾರ್ಜುನ್, ನಂಜನಗೂಡು ರಸಬಾಳೆ ತಳಿಯನ್ನು 85.30 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 48,853 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಗ್ರಾಂಡ್ ನೈನ್ (ಜಿ9). ನೇಂದ್ರನ್. ಏಲಕ್ಕಿಬಾಳೆ. ನಂಜನಗೂಡು ರಸಬಾಳೆ, ಕಮಲಾಪುರ ಕೆಂಪು ಬಾಳೆ ಮತ್ತು ಇತರೆ ತಳಿಗಳನ್ನು ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.
ಹಾಗೆಯೇ ಈ ತಳಿಯನ್ನು ನಂಜನಗೂಡು ತಾಲ್ಲೂಕಿನ ಹನುಮನಪುರ, ಸಿಂಧುವಳ್ಳಿ, ಮಾಡ್ರಹಳ್ಳಿ, ಹೆಮ್ಮರಗಾಲ, ಹಂಪಾಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಹಳೇಪುರ, ಅಂಬಳೆ, ಕೂಗಲೂರು, ಕುರಹಟ್ಟಿ, ದೇವಿರಮ್ಮನಹಳ್ಳಿ ಸಿದ್ದಯ್ಯನಹುಂಡಿ, ಹೆಡತಲೆ, ಹಳೇಪುರ, ಚಿನ್ನಂಬಳ್ಳಿ, ಅಂಬಳೆ, ಕಾರ್ಯ, ಕಾರಾಪುರ, ಚುಂಚನಹಳ್ಳಿ. ದೇವರಸನಹಳ್ಳಿ ಮತ್ತು ಕೋಡಿನರಸೀಪುರ ಗ್ರಾಮಗಳಲ್ಲಿ ಹರದನಹಳ್ಳಿ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.
ನಂಜನಗೂಡು ರಸಬಾಳೆ ತಳಿಯನ್ನು ಹೆಚ್ಚಿನದಾಗಿ ಬೆಳೆಯಲು ಸರ್ಕಾರ ಹಲವು ಉತ್ತೇಜನ ನೀಡುವ ಯೋಜನೆಗಳು ಕೈಗೊಳ್ಳುತ್ತಿದ್ದು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಭೌಗೋಳಿಕ ಗುರುತು ಬೆಳೆಯಾದ ನಂಜನಗೂಡು ರಸಬಾಳೆಯ ಸಂರಕ್ಷಣೆ, ಪ್ರದೇಶ ವಿಸ್ತರಣೆ ಮತ್ತು ಉತ್ಪಾದನೆಗೆ ಉತ್ತೇಜನ ಕಾರ್ಯಕ್ರಮದಡಿ ಪ್ರದೇಶ ವಿಸ್ತರಣೆಗಾಗಿ ಹನಿ ನೀರಾವರಿ ಸಹಿತ 0.20 ಹೆಕ್ಟೇರ್ ಪ್ರದೇಶಕ್ಕೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರಂತೆ ರೂ.67,312/- ಹಾಗೂ ಇತರ ರೈತರಿಗೆ ಶೇ.75 ರಂತೆ ರೂ.56,093/-ಗಳ ಸಹಾಯಧನ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ತೋಟಗಾರಿಕೆ ಮಹಾ ವಿದ್ಯಾಲಯ ಹಾಗೂ NRC on Banana, ತ್ರಿಚಿ ಅವರ ಸಹಯೋಗದೊಂದಿಗೆ ನಂಜನಗೂಡು ರಸಬಾಳೆ ತಳಿಯ ಬೇಸಾಯದ ತಾಂತ್ರಿಕತೆ ಕುರಿತು 340 ರೈತರಿಗೆ ತರಬೇತಿಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹಾಗೆಯೇ ನಂಜನಗೂಡು ರಸಬಾಳೆ ತಳಿಯ ಪ್ರಾತ್ಯಕ್ಷಿಕೆ ತಾಕುಗಳನ್ನು ಹುಣಸೂರು ತಾಲ್ಲೂಕಿನ ವಾರಂಚಿ ಕ್ಷೇತ್ರ ಹಾಗೂ ಮೈಸೂರು ತಾಲ್ಲೂಕಿನ ಯಲಚನಹಳ್ಳಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ. ನಂಜನಗೂಡು ರಸಬಾಳೆ ತಾಕುಗಳಲ್ಲಿ ಕ್ಷೇತ್ರೋತ್ಸವವನ್ನು ಕೈಗೊಂಡು ಉತ್ತಮ ಬೇಸಾಯ ಪದ್ಧತಿಗಳನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.
ವಿವಿಧ ಫಲಪುಷ್ಪ ಪ್ರದರ್ಶನದಲ್ಲಿ ನಂಜನಗೂಡು ರಸಬಾಳೆ ಪ್ರದರ್ಶನಗೊಂಡು ಬಳಕೆದಾರರಿಗೂ ಈ ಬೆಳೆ ಬಗ್ಗೆ 5. ವಿವಿಧ ಫಲ-ಪುಷ್ಪ ಪ್ರದರ್ಶನಗಳಲ್ಲಿ ಆಸಕ್ತಿ ಮೂಡಿಸಿ ಕೈಗೊಳ್ಳಲಾಗುತ್ತಿದೆ. ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
Key words: Nanjangudu Rasabale, Bumper offer, encourage, farmers







