ದಸರಾ, ದೀಪಾವಳಿಯಲ್ಲಿ ನಂದಿನಿ ಬ್ರಾಂಡ್‌ ನಿಂದ ದಾಖಲೆಯ ಸಿಹಿ ಮಾರಾಟ

ಮೈಸೂರು,ಅಕ್ಟೋಬರ್,21,2025 (www.justkannada.in): ದಸರಾ, ದೀಪಾವಳಿ ಅವಧಿಯಲ್ಲಿ ರಾಜ್ಯದ ಹೆಮ್ಮೆಯ “ನಂದಿನಿ” ಬ್ರಾಂಡ್‌ನಿಂದ ದಾಖಲೆಯ ಸಿಹಿ ಮಾರಾಟವಾಗಿದೆ.

2024ರ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ಒಟ್ಟು 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ ರೂ.33.48 ಕೋಟಿ ವಹಿವಾಟು ದಾಖಲಿಸಲಾಗಿತ್ತು. ಈ ಬಾರಿ 2025ರ ಹಬ್ಬದ ಅವಧಿಗೆ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ, ಸುಮಾರು ಎರಡು ತಿಂಗಳುಗಳ ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ 1000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗದಿಪಡಿಸಲಾಯಿತು.

ಸದರಿ ಗುರಿಯನ್ನು ಮೀರಿ ಈ ವರ್ಷ ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು “ಒಟ್ಟಾಗಿ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ ರೂ. 46.00 ಕೋಟಿಗಳ ದಾಖಲೆಯ ವಹಿವಾಟು ಸಾಧಿಸುವ ಮೂಲಕ ಒಂದು ಮಹತ್ವದ ಮೈಲುಗಲ್ಲು ನಿರ್ಮಿಸಲಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ ಶೇ.38 ರಷ್ಟು ವಹಿವಾಟು ಪ್ರಗತಿಯಾಗಿದ್ದು “ಇದು ಕೆ.ಎಂ.ಎಫ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ.

ಈ ಸಾಧನೆ ನಂದಿನಿ ಬ್ರಾಂಡ್‌ನ ಗುಣಮಟ್ಟ, ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲವಾಗಿದ್ದು, ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೂ ಸಾಕ್ಷಿಯಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Key words: Nandini Brand, Record, Sweet ,Sales