Monday, August 3, 2026

BDA Apartments

Home Front Page ಸೆ.1ರಂದು ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ

ಸೆ.1ರಂದು ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ

ಮೈಸೂರು ಆಗಸ್ಟ್, 21,2025 (www.justkannada.in): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 1 ರಂದು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (AIISH) ಸಿಲ್ವರ್ ಜ್ಯುಬಿಲಿ(ವಜ್ರ ಮಹೋತ್ಸವ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿದ್ದಾರೆ. ಈ ಸಂಬಂಧ ಅಗತ್ಯ ಸಿದ್ದತೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು  ಸೂಚನೆ ನೀಡಿದರು.

ಮೈಸೂರಿಗೆ ರಾಷ್ಟ್ರಪತಿಗಳು ಆಗಮನದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿಸಿ ಲಕ್ಷ್ಮೀಕಾಂತ ರೆಡ್ಡಿ, ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕು. ರಾಷ್ಟ್ರಪತಿಗಳು ರಾಡಿಷನ್ ಬ್ಲೂ ನಲ್ಲಿ ವಾಸ್ತವ್ಯ ಮಾಡುವರು. ಈ ಸಂಬಂಧ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ರಾಷ್ಟ್ರಪತಿಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವ ಜೊತೆಯಲ್ಲಿ ಯಾವುದೇ ಅಸುರಕ್ಷತಾ ಘಟನೆಗಳಿಗೆ ಅವಕಾಶ ನೀಡಬಾರದು. ರಾಷ್ಟ್ರಪತಿಗಳು ಸಂಚರಿಸುವ ರಸ್ತೆ ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು. ರಿಂಗ್ ರೋಡ್, ಆಯಿಷ್ ನಿಂದ  ರಾಡಿಷನ್ ಬ್ಲೂ ವರೆಗಿನ ರಸ್ತೆಗಳು ಸ್ವಚ್ಚತೆ  ನಗರಪಾಲಿಕೆ, ಮುಡಾ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಅಧಿಕಾರಿಗಳು ಈ ಜವಾಬ್ದಾರಿ ವಹಿಸಬೇಕು. ರಾಷ್ಟ್ರಪತಿಗಳಿಗೆ ಶಿಷ್ಟಾಚಾರದಂತೆ ವೈದ್ಯಕೀಯ ವ್ಯವಸ್ಥೆ ಒದಗಿಸುವುದು ಆರೋಗ್ಯ ಇಲಾಖೆ ಜವಾಬ್ದಾರಿ. ಸೂಕ್ತ ವ್ಯವಸ್ಥೆಯುಳ್ಳ ಆಂಬ್ಯುಲೆನ್ಸ್, ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜ,  ಡಿಸಿಪಿ ಸುಂದರ ರಾಜ್  ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Key words: President, Draupadi Murmu,  Mysuru, DC, Meeting