ಮೈಸೂರು,ನವೆಂಬರ್,10,2025 (www.justkannada.in): ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಬಗೆಯರಿಸಲು ನಿರ್ದೇಶಿಸುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ಪಿರಿಯಾಪಟ್ಟಣದಲ್ಲಿರುವ ತಂಬಾಕು ಮಂಡಳಿಗೆ ಭೇಟಿ ನೀಡಿ ನಂತರ ಅಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮನವಿ ಸ್ವೀಕರಿಸಿದ ಎಂ.ಲಕ್ಷ್ಮಣ್ ಬಳಿಕ ಮಾತನಾಡಿ, ನಾನು ಪಿರಿಯಾಪಟ್ಟಣದಲ್ಲಿರುವ ತಂಬಾಕು ಮಂಡಳಿಗೆ ಭೇಟಿ ನೀಡಿದ್ದೆ. ತಂಬಾಕು ಹರಾಜು ಪ್ರಕ್ರಿಯೆ ಕಳೆದ ಒಂದು ತಿಂಗಳಿಂದ ಚಾಲ್ತಿಯಲ್ಲಿದ್ದು ರೈತರು ಪ್ರಮುಖವಾದ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದು ಸುಮಾರು 200ಕ್ಕೂ ಮೇಲ್ಪಟ್ಟ ರೈತರು ಪ್ರತಿಭಟಸುತ್ತಿರುವದನ್ನ ತಿಳಿದು ನಾನು ತಂಬಾಕು ಮಂಡಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದೇನೆ. ರೈತರ ಈ ಸಮಸ್ಯೆಗಳು ನಿಜವಾದ ಸಮಸ್ಯೆಗಳು ಎಂದು ತಿಳಿದುಬಂದಿದ್ದು ಆದ್ದರಿಂದ ದಯಮಾಡಿ ಸಂಬಂಧ ಪಟ್ಟವರಿಗೆ ತುರ್ತಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನಿರ್ದೇಶಸಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದರು.
ತಂಬಾಕು ಬೆಳೆಗಾರರ ಸಮಸ್ಯೆಗಳು ಹೀಗಿವೆ..
ಮೈಸೂರು ಭಾಗದಲ್ಲಿ ಬೆಳೆಯುವ ಹೊಗೆಸೊಪ್ಪು ದೇಶದಲ್ಲೇ ಉತ್ತಮವಾದ ಹಾಗೂ ಮೊದಲನೇ ದರ್ಜೆಯ ಹೊಗೆಸೊಪ್ಪು ಆಗಿರುತ್ತದೆ. ಆದರೆ ಒಂದು ಕೆಜಿ ಹೊಗೆಸೊಪ್ಪುನ್ನು 260 ರೂ ಇಂದ 300 ರೂ ಗಳಿಗೆ ಖರೀದಿಸುತ್ತಾರೆ. ಇದಕ್ಕಿಂತ ಕಡಿಮೆ ದರ್ಜೆಯ ಹೊಗೆಸೊಪ್ಪುನ್ನು ಆಂಧ್ರಪ್ರದೇಶದಲ್ಲಿ 450 ರಿಂದ 460 ರೂ ಕೊಟ್ಟು ಖರೀದಿಸುತ್ತಿದ್ದಾರೆ. ಇದು ಕರ್ನಾಟಕ ರೈತರಿಗೆ ಮಾಡುವ ದೊಡ್ಡ ದ್ರೋಹ.
ಉತ್ತಮ ದರ್ಜೆಯ ಹೊಗೆಸೊಪ್ಪನ್ನು ವಿವಿಧ ದರ್ಜೆಗಳ ಮೂಲಕ ಗುರುತಿಸಲಾಗುತ್ತದೆ. ಆದರೆ ಕೆಲ ಅಧಿಕಾರಿಗಳು ಉತ್ತಮ ದರ್ಜೆಯ ಹೊಗೆಸೊಪ್ಪನ್ನು 3 ಮತ್ತು 4ನೇ ದರ್ಜೆ ಎಂದು ಗುರುತಿಸಿ ಅದರ ಬೆಲೆ ಕೇವಲ 260 ರಿಂದ 290 ರೂ ಗಳಿಗೆ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ.
ವಿವಿಧ ದರ್ಜೆಯ ಹೊಗೆಸೊಪ್ಪನ್ನು X1, X2, X3, X4, X5 ಎಂದು ಗುರುತಿಸುವುದರಿಂದ ಎಲ್ಲವು ಉತ್ತಮ ದರ್ಜೆಯ ಹೊಗೆಸೊಪ್ಪು ಆಗಿದ್ದರೂ ಬೇರೆ ಬೇರೆ ಬೆಲೆಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಕೆಲವು ಹೊಗೆಸೊಪ್ಪುಗಳನ್ನು ಕೀಳಮಟ್ಟದ ಹೊಗೆಸೊಪ್ಪು ಎಂದು NOG, NDG, BPL ಎಂದು ಗುರುತಿಸಿ ಇವುಗಳನ್ನು ಬಿಡ್ ಮಾಡದೆ ತಿರಸ್ಕರಿಸಲಾಗುತ್ತಿದೆ.
ಹರಾಜು ಮಾಡುವ ಸಂದರ್ಭದಲ್ಲಿ ಪಾರದರ್ಶಕವಿಲ್ಲದೆ ರೈತರನ್ನು ಹೊರಗಿಟ್ಟು ಅಧಿಕಾರಿಗಳು ಮತ್ತು ಕಂಪನಿಗಳ ಪ್ರತಿನಿಧಿಗಳು ಬೆಲೆ ನಿರ್ಧಾರವನ್ನು ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ಗ ಸಂಪೂರ್ಣವಾಗಿ ಕಂಪನಿಗಳ ಮುಖ್ಯಸ್ಥರ ಜೊತೆ ಶಾಮೀಲಾಗಿ ಮೋಸವೆಸಗುತ್ತಿದ್ದಾರೆ.
ರೈತರಿಂದ ಮುಂಗಡವಾಗಿ ತಂಬಾಕು ಮಂಡಳಿಯವರು ಹಣವನ್ನು ಪಾವತಿಸಿಕೊಂಡಿರುವ ಸುಮಾರು 7 ಕೋಟಿ ರೈತರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ರೈತರು ಹರಾಜು ಪ್ರಕ್ರಿಯೆ ಯಲ್ಲಿ ಭಾಗವಹಿಸಲು ರಹದರಿ ಪುಸ್ತಕ ವನ್ನು ಪ್ರತಿ ವರ್ಷ ನವೀಕರಿಸಬೇಕಾಗಿರುತ್ತದೆ. ಆದರೆ ಈ ರಹಾದರಿ ಪುಸ್ತಕ ವನ್ನು ನವೀಕರಿಸದೆ ರೈತರನ್ನು ಅಲೆದಾಡಿಸುತ್ತಿದ್ದಾರೆ.
ತಂಬಾಕು ಮಂಡಳಿಯವರು ರೈತರಿಗೆ ರಸಗೊಬ್ಬರವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಹಾಗೂ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಒಂದು ಕೆಜಿ ಹೊಗೆಸೊಪ್ಪು ಬೆಳೆಯಲು ರೈತನಿಗೆ 300 ರೂಪಾಯಿ ವೆಚ್ಚ ತಗಲುತ್ತಿದೆ. ಆದರೆ ರೈತ ಒಂದು ಕೆಜಿ ಹೊಗೆಸೊಪ್ಪನ್ನು 260 ರೂ 290 ರೂಪಾಯಿ ಗಳಿಗೆ ಮಾರಾಟ ಮಾಡುತ್ತಿದ್ದಾನೆ.
ಈ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಸೂಕ್ತ ನಿರ್ದೇಶನವನ್ನು ತಂಬಾಕು ಮಂಡಳಿಯ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
Key words: Mysore, resolve problems, tobacco growers, M. Lakshman







