10 ವರ್ಷದರೆಗೆ ಚೆನ್ನಾಗಿದ್ದ ಮೂವರು ಮಕ್ಕಳಿಗೆ ದಿಢೀರ್ ವಿಚಿತ್ರ ಕಾಯಿಲೆ: ಸಹಾಯದ ನಿರೀಕ್ಷೆಯಲ್ಲಿ ಕುಟುಂಬ

ಮೈಸೂರು,ಸೆಪ್ಟಂಬರ್,4,2021(www.justkannada.in):  ತಮ್ಮ ಹತ್ತು ವರ್ಷದವರಗೆ ಎಲ್ಲಾ ಮಕ್ಕಳಂತೆ ಚೆನ್ನಾಗಿ ಆಟವಾಡಿಕೊಂಡಿದ್ದ  ಮೂವರು ಮಕ್ಕಳಿಗೆ ವಿಚಿತ್ರ ಕಾಯಿಲೆಯೊಂದು ವಕ್ಕರಿಸಿದ ಪರಿಣಾಮ ಸದ್ಯ ಮೂವರು ವೈದ್ಯಲೋಕಕ್ಕೆ ಸವಾಲೆನಿಸಿದ್ದಾರೆ. ವಿಚಿತ್ರ ರೋಗಕ್ಕೆ ತುತ್ತಾಗಿ, ತಂದೆ-ತಾಯಿಯ ಆಸರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

ಹೌದು, ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮ  ಒಂದೇ ಕುಟುಂಬದ ಮೂವರು ಮಕ್ಕಳು ವಿಚಿತ್ರ ರೋಗಕ್ಕೆ ತುತ್ತಾಗಿದ್ದಾರೆ. ಗ್ರಾಮದ ರಾಜು ಹಾಗೂ ತುಳಸಮ್ಮ ದಂಪತಿಯ ಮೂವರು ಮಕ್ಕಳು ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಪಡೆಯಲಾಗದೆ ಜೀವನೋತ್ಸಾಹವನ್ನೇ ಕಳೆದುಕೊಂಡಿದ್ದಾರೆ. ಹುಣಸೂರು ತಾಲೂಕು ಕಚೇರಿಯಲ್ಲಿ ರಾಜು ಅವರು ಡಿ ಗ್ರೂಪ್ ನೌಕರರಾಗಿ ದುಡಿಯುತ್ತಿದ್ದಾರೆ. ವಿಚಿತ್ರವೆಂಬಂತೆ ಇವರ ಪುತ್ರ ಮಹೇಶ್ 10 ವರ್ಷದವನಿದ್ದಾಗ ಇದ್ದಕ್ಕಿದ್ದಂತೆ ಕುತ್ತಿಗೆ ಕೆಳಗಿನ ದೇಹದ ಎಲ್ಲ ಭಾಗಗಳು ಸ್ವಾಧೀನ ಕಳೆದುಕೊಂಡಿವೆ. ಇದಾದ ಕೆಲವೇ ವರ್ಷಗಳಲ್ಲಿ ಉಳಿದ ಇಬ್ಬರು ಪುತ್ರಿಯರಾದ ಅಂಜಲಿ ಮತ್ತು ಸ್ವಾತಿ ಅವರೂ  ಕೂಡ ಹತ್ತು ವರ್ಷಗಳು ತುಂಬಿದ ನಂತರ ಇದೇ ಸಮಸ್ಯೆಗೆ ತುತ್ತಾಗಿದ್ದಾರೆ, ಮಕ್ಕಳ ಆರೋಗ್ಯದ ಸಮಸ್ಯೆ ತಂದೆ-ತಾಯಿಗೆ ಬರಸಿಡಿಲು ಅಪ್ಪಳಿಸಿದಂತಾಯಿತು.

ಸಾಕಷ್ಟು ಆಸ್ಪತ್ರೆಗಳು, ಕಂಡ ಕಂಡ ವೈದ್ಯರನ್ನೂ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ವೈದ್ಯಲೋಕಕ್ಕೆ ಅಚ್ಚರಿಯಾಗಿರುವ ಈ ಮೂವರ ಚಿಕಿತ್ಸೆ ಹಾಗೂ ಆರೈಕೆ ಈಗ ಪೋಷಕರಿಗೆ ಸಂಕಟದ ಜೊತೆಗೆ ಬದುಕೇ ದುಸ್ತರ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ಇದೀಗ ಈ ಮೂವರ ಆರೈಕೆಯನ್ನು ತಾಯಿ ತುಳಸಮ್ಮ ನೋಡಿಕೊಂಡಿದ್ದಾರೆ. ಪತಿ ರಾಜು ಅವರ ಸಂಬಳವೇ ಇಡೀ ಕುಟುಂಬಕ್ಕೆ ಅನ್ನ ನೀಡುತ್ತಿದೆ, ದಿನವಿಡೀ ಮೂವರು ಮಕ್ಕಳನ್ನು ನೋಡಿಕೊಳ್ಳಬೇಕಾಗಿರುವುದರಿಂದ ತುಳಸಮ್ಮ ಕೂಲಿ ಕೆಲಸಕ್ಕೂ ಹೋಗಲಾಗದ ಪರಿಸ್ಥಿತಿ ಇದೆ.  ನಾವು ಎಲ್ಲ ವೈದ್ಯರನ್ನು ಸಂಪರ್ಕಿಸಿದೆವು ಆದರೆ ಅವರು ಇದಕ್ಕೆ ಪರಿಹಾರ ಇಲ್ಲವೆಂದು ಕೈಚೆಲ್ಲಿದ್ದರು ಎಂದು ತಾಯಿ ತುಳಸಮ್ಮ ಅಳಲು ತೋಡಿಕೊಂಡಿದ್ದಾರೆ.

ನನ್ನ ಪತಿ ದುಡಿಮೆ ನಿಂತು ಹೋದಲ್ಲಿ ನಮಗೆ ಗತಿ ಯಾರು ? ಯಾರಾದರೂ ನನ್ನ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಗುಣಪಡಿಸಲಿ ಎಂದು ತುಳಸಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ.

ಚುನಾವಣೆ ವೇಳೆ ಮತಕ್ಕಾಗಿ ಈ ಮಕ್ಕಳನ್ನ ಎತ್ತಿಕೊಂಡು ಹೋಗಿ ಮತ ಹಾಕಿಸುತ್ತಾರೆ ಅಷ್ಟೇ, ಮತಕ್ಕಾಗಿ ಮಾತ್ರ ಸೀಮಿತವಾಗುವ ಈ ಮಂದಿಗೆ ,ಮತ ಪಡೆದ ಬಳಿಕ ಯಾವ ಜನಪ್ರತಿನಿಧಿಯು ಅವರ ಕೆಲಸ ಸಮಸ್ಯೆ ಕೇಳೋದಿಲ್ಲ.

ಸರ್ಕಾರದಿಂದ ಈ ನೊಂದ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಯಾವುದೇ ಸೌಲಭ್ಯ ಸಿಕ್ಕಿಲ್ಲ, ಜಿಲ್ಲೆಯ ಜನಪ್ರತಿನಿಧಿಗಳು ಈ ಕುಟುಂಬದ ಸಮಸ್ಯೆಗೆ ಸ್ಪಂದಿಸುವುದಾದರೆ ನಿಜಕ್ಕೂ ಕುಟುಂಬದಲ್ಲಿ ಹಲವು ವರ್ಷಗಳ ಬಳಿಕ ನಗುವನ್ನು ಕಾಣಬಹುದಾಗಿದೆ.

 

Key words: mysore-Sudden Disease – Three Children – Family – Expectation -Help.