ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ‘ನಾರೇಯಣ ಪ್ರಶಸ್ತಿ’:  ಮಾ.22 ರಂದು ಪ್ರದಾನ

ಮೈಸೂರು,ಮಾರ್ಚ್,17,2026 (www.justkannada.in): ಶ್ರೀ ಯೋಗಿನಾರೇಯಣ ಯತೀಂದ್ರ ಪ್ರಚಾರ ಸಭಾ ವತಿಯಿಂದ 2026ನೇ ಸಾಲಿನ ಪ್ರತಿಷ್ಠಿತ “ನಾರೇಯಣ ಪ್ರಶಸ್ತಿ”ಯನ್ನು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೀಡಲಾಗಿದ್ದು ಮಾರ್ಚ್ 22 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

22-03-2026 ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಚಾಮರಾಜನಗರದ ವರನಟ ಡಾ.  ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  “ನಾರೇಯಣ ಪ್ರಶಸ್ತಿ” ಯನ್ನು ಆಶ್ರಮದ ಪರವಾಗಿ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಜಿ ಮಹರಾಜ್ ಸ್ವೀಕರಿಸಲಿದ್ದಾರೆ. ಪ್ರಶಸ್ತಿಯು ಅಭಿನಂದನಾ ಪ್ರಶಂಸಾ ಪತ್ರ, ಶ್ರೀ ಯೋಗಿನಾರೇಯಣ ಯತೀಂದ್ರರ ಸ್ಮರಣ ಫಲಕ ಹಾಗೂ 50,000/- ರೂಪಾಯಿಗಳ ನಗದು ನೀಡಿ ಗೌರವಿಸಲಾಗುತ್ತದೆ.

ಮೊದಲನೇ ಬಾರಿ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರೊ ಸಿ ಎನ್ ಶ್ರೀನಾಥ್ ಅವರಿಗೆ ಎರಡನೇ ಬಾರಿ ಮಂಡ್ಯ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಎಂ ಆರ್ ಶ್ರೀನಿವಾಸ್ ಮೂರ್ತಿ ಅವರಿಗೆ ಉತ್ತಮ ಆಡಳಿತಗಾರರಾಗಿ ಸೇವೆ ಸಲ್ಲಿಸಿದ್ದಕ್ಕೆ “ನಾರೇಯಣ ಪ್ರಶಸ್ತಿ” ನೀಡಲಾಗಿತ್ತು.

ಪ್ರಶಸ್ತಿ ಸಮಾರಂಭದಲ್ಲಿ ಸುತ್ತೂರು ಶ್ರೀಕ್ಷೇತ್ರದ ಶ್ರೀ ಶ್ರೀ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಗಳವರ ಸಾನಿಧ್ಯದಲ್ಲಿ ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಎಂಆರ್ ಜಯರಾಮ್, ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್ ಸೀತಾರಾಮ್, ಚಾಮರಾಜನಗರದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ ಆರ್ ಗಂಗಾಧರ್, ಚಾಮರಾಜನಗರದ ಜಿಲ್ಲಾಧಿಕಾರಿ ಶ್ರೀರೂಪಾ, ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಎಂ ಮುತ್ತುರಾಜು, ಇವರುಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರರ ಕುರಿತು ಲೇಖಕಿ ಡಾ. ಎಂ ಎನ್ ಕವಿತಾ ಅವರು ವಿಷಯ ಮಂಡಿಸಲಿದ್ದಾರೆ ಎಂದು ಪ್ರಧಾನ ಸಂಚಾಲಕ ಎಚ್.ಎ. ವೆಂಕಟೇಶ್ ತಿಳಿಸಿದ್ದಾರೆ.

Key words: Narayana Award, Mysore, Sri Ramakrishna Ashram,