ಬೆಂಗಳೂರು,ಸೆಪ್ಟಂಬರ್,5,2025: ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ಮೂರು ದಶಕದ ಹಿಂದೆ ಆರಂಭವಾಗಿದ್ದ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಲ್ಲೀಗ ಟ್ರಸ್ಟಿಗಳ ನಡುವೆ ಶೀತಲ ಸಮರ ಆರಂಭವಾಗಿದೆ. ವರುಣ ಕ್ಷೇತ್ರದ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಅಧ್ಯಕ್ಷರೂ ಆಗಿರುವ ಈ ಸಂಸ್ಥೆಯ ಟ್ರಸ್ಟಿಗಳ ನಡುವೆ ಎದ್ದಿರುವ ಅಂತಃಕಲಹವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಲೆನೋವಾಗಿ ಪರಿಣಿಮಿಸಿದೆ.
ಸಂಸ್ಥೆಯ ಇತಿಹಾಸವಿದು
ಗೋಕಾಕ್ ಚಳವಳಿಯ ಸೃಜನಾತ್ಮಕ ಕೆಲಸದ ಭಾಗವಾಗಿ ಮೈಸೂರಿನಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರು ಕನ್ನಡ ಚಳವಳಿಯ ಗೆಳೆಯರೊಂದಿಗೆ ಸೇರಿ ರಾಮಕೃಷ್ಣನಗರದಲ್ಲಿ 1991ರಲ್ಲಿ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯನ್ನು ಕಟ್ಟಿದ್ದರು. ಈ ಸಂಸ್ಥೆಯು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಮೈಸೂರಿನಲ್ಲಿ ನೃಪತುಂಗ ಕನ್ನಡ ಶಾಲೆಯನ್ನು ಆರಂಭಿಸಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಈ ಶಾಲೆಗೆ ಸರ್ಕಾರದಿಂದ ಬಹುಕೋಟಿಯಷ್ಟು ಅನುದಾನ ಒದಗಿಸಿದ್ದರು. ಅಲ್ಲದೇ ಕಾರ್ಪೋರೇಟ್ ಸಂಸ್ಥೆಗಳು ಸಹ ಸಿಎಸ್‌ಆರ್ ಅನುದಾನದಡಿಯಲ್ಲಿಯೂ ಕೋಟಿಯಷ್ಟು ದೇಣಿಗೆ ಹರಿದು ಬಂದಿತ್ತು.
ಸಂಸ್ಥೆಯಲ್ಲಿ ಸೃಷ್ಟಿಯಾಗಿದೆಯೇ ಅಸಹನೀಯ ಸ್ಥಿತಿ?
ಈ ಸಂಸ್ಥೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮತ್ತು ‘ಕನ್ನಡ ನುಡಿ’ ಕಲರವದ ಬದಲು ಆರೋಪ ಪ್ರತ್ಯಾರೋಪ, ದರ್ಪ, ಮತ್ಸರ, ಪರಸ್ಪರ ಎತ್ತಿಕಟ್ಟುವ ಅಧಿಕಾರ ಮೇಲಾಟದಂತಹ ಅನಪೇಕ್ಷಿತ ಸಂಗತಿಗಳು ಸದ್ದು ಮಾಡುತ್ತಿವೆ. ಇವೆಲ್ಲ ಶಾಲೆಯ ಅಂಗಳದಲ್ಲಿನ ಶೈಕ್ಷಣಿಕ ವಾತಾವರಣವನ್ನು ಹದಗೆಡಿಸಿವೆ. ಅಲ್ಲದೇ ಈ ಬೆಳವಣಿಗೆಯು ಹಲವು ಹಿರಿಯ ಧರ್ಮದರ್ಶಿಗಳಲ್ಲಿ ಅಸಹನೀಯ ಸ್ಥಿತಿಯನ್ನು ಸೃಷ್ಟಿಸಿವೆ ಎಂದು ತಿಳಿದು ಬಂದಿದೆ.
ಡಾ ಎಚ್. ತಿಪ್ಪೇರುದ್ರಸ್ವಾಮಿ ಅವರು ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದವರು. ಅವರ ಅವಧಿ ನಂತರ ಪ. ಮಲ್ಲೇಶ್ ಅವರು ಈ ಸಂಸ್ಥೆಯನ್ನು ಬಹು ವರ್ಷಗಳ ಕಾಲ ಮುನ್ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹುಕಾಲದ ಒಡನಾಡಿಯಾಗಿದ್ದರಿಂದಾಗಿ ಸರ್ಕಾರದಿಂದ ಅನುದಾನ ತರುವಲ್ಲಿಯೂ ಯಶಸ್ವಿಯಾಗಿದ್ದರು. ಆದರೀಗ ಪ ಮಲ್ಲೇಶ್ ಅವರ ನಿಧನದ ಬಳಿಕ ಸಂಸ್ಥೆಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳು ಸಂಸ್ಥೆಯ ಹಿತೈಷಿಯೂ ಆಗಿರುವ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಿಮಿಸಿದೆ.
ಈಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಈ ಸಂಸ್ಥೆಯ ಟ್ರಸ್ಟಿಗಳ ನಿಯೋಗವೊಂದು ತೆರಳಿ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಆದರೂ ಸಂಸ್ಥೆಯನ್ನು ಸರಿದಾರಿಗೆ ತರುವ ಯತ್ನವು ಫಲ ನೀಡಿಲ್ಲ. ಹಲವು ಸಿಕ್ಕುಗಳಲ್ಲಿ ಸಿಲುಕಿರುವ ಸಂಸ್ಥೆಯ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಭವಿಷ್ಯದ ಒಳಿತಿಗಾಗಿ ಮುಖ್ಯಮಂತ್ರಿಗಳೇ ಸ್ಪಷ್ಟ ಕಠಿಣ ನಿಲುವು ತಳೆಯಬೇಕು ಎಂದು ಟ್ರಸ್ಟಿಗಳು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದೆ ಎಂದು ಗೊತ್ತಾಗಿದೆ.
ಲಕ್ಷಾಂತರ ದೇಣಿಗೆ, ಸರ್ಕಾರದ ಹಣ
ಮಾತೃಭಾಷೆ ಶಿಕ್ಷಣ ಮಾಧ್ಯಮದ ಮಹತ್ವ ಸಾರುವ ಹಲವಾರು ಪ್ರಯೋಗಗಳಿಗೆ ಕಾರಣವಾದ ಮತ್ತು ಕಾನೂನು ಹೋರಾಟಕ್ಕೂ ಸ್ಫೂರ್ತಿಯಾಗಿದ್ದ ಈ ಸಂಸ್ಥೆಯನ್ನು ಕಟ್ಟಲು ಮಲ್ಲೇಶ್ ಅವರು ತಮ್ಮ ವೈಯಕ್ತಿಕ – ರಾಜಕೀಯ ಸಂಪರ್ಕ ಬಳಸಿ ಲಕ್ಷಾಂತರ ರೂ. ದೇಣಿಗೆ ತಂದಿದ್ದರು. ಕನ್ನಡ ಶಾಲೆಗೆ ಮಕ್ಕಳನ್ನು ಸೆಳೆಯುವುದು ಸುಲಭವಲ್ಲ. ಆದರೂ ಅವರು ಅವಿರತ ಶ್ರಮ ಹಾಕಿ ಅದನ್ನು ಸಾಧ್ಯ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಸರ್ಕಾರದಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿಸಿ ಕಟ್ಟಡ ಕಟ್ಟಿಸಿದರು. ಶಾಲಾ ಕೊಠಡಿ, ರಂಗಮಂದಿರ ಮುಂತಾದ’ ಕಟ್ಟುವ ಕೆಲಸಗಳಿಗೆ ಮುನ್ನೂರಕ್ಕೂ ಹೆಚ್ಚು ದಾನಿಗಳು ಲಕ್ಷಾಂತರ ರೂ. ದೇಣಿಗೆ ನೀಡಿದರು. ಈ ಎಲ್ಲ ಕೆಲಸಗಳಿಗೆ ಹಲವು ಸಮಾನ ಮನಸ್ಕ ಗೆಳೆಯರು ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದಾರೆ. ಈ ಮಧ್ಯೆ ಸಂಸ್ಥೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಎಂಬೆಸಿ ಗ್ರೂಪ್ ನ ಸಿಎಸ್‌ಆರ್ ಫಂಡ್ ಮೂಲಕ 4 ಕೋಟಿ ರೂ. ಬರುವ ನಿರೀಕ್ಷೆ ಇದೆ. ಗೊಂದಲಗಳು ಮುಂದುವರೆದರೆ ದೊಡ್ಡ ಮೊತ್ತದ ಅನುದಾನ ಕೈತಪ್ಪಲಿದೆ ಎಂದು ಟ್ರಸ್ಟಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವಾರಸುದಾರೆಯ ಪ್ರತಿಷ್ಠೆ!?
ಎರಡೂವರೆ ವರ್ಷದ ಹಿಂದೆ ಮಲ್ಲೇಶ್ ಹಠಾತ್ ಹೃದಯಾಘಾತಕ್ಕೆ ತುತ್ತಾದರು. ಬಳಿಕ ಯತೀಂದ್ರ ಸಿದ್ದರಾಮಯ್ಯ ಅವರು ಸಂಸ್ಥೆಯ ಅಧ್ಯಕ್ಷರಾದರು. ಹಿರಿಯರಾದ ಸ.ರ.ಸುದರ್ಶನ ಉಪಾಧ್ಯಕ್ಷರಾಗಿ, ಕೃಷ್ಣಪ್ಪ ಕಾರ್ಯದರ್ಶಿಯಾಗಿ ಮುಂದುವರಿದರು. ಈ ಮಧ್ಯೆ ಮಲ್ಲೇಶ್ ನಿಧನಕ್ಕೆ ಆರೇಳು ತಿಂಗಳು ಮೊದಲು ಅವರ ಮಗಳು ಸವಿತಾ ಅವರು ಎರಡನೇ ಕಾರ್ಯದರ್ಶಿಯಾಗಿ ನೇಮಕ ಗೊಂಡರು. ಟ್ರಸ್ಟ್ ಡೀಡ್ ನಲ್ಲಿ ಇದಕ್ಕೆ ಆಸ್ಪದ ಇಲ್ಲದಿದ್ದರೂ, ಸರ್ವ ಸದಸ್ಯರ ಸಭೆಯ ಒಪ್ಪಿಗೆಯೂ ಇಲ್ಲದೆ ಈ ನೇಮಕವಾಗಿತ್ತು.
‘ಮಲ್ಲೇಶ್ ಮಗಳು ಎನ್ನುವ ಕಾರಣಕ್ಕೆ ದಕ್ಕಿದ ಈ ಹುದ್ದೆಯನ್ನು ಸವಿತಾ ಅವರು ತಮ್ಮ ತಂದೆಯ ಆಶಯಗಳ ಮುಂದುವರಿಕೆಗೆ ಬಳಸಿಕೊಂಡಿದ್ದರೆ ಬಹುಶಃ ಈಗಿನ ಸ್ಥಿತಿ ಉದ್ಭವಿಸುತ್ತಿರಲಿಲ್ಲ. ಅದನ್ನು ತಮ್ಮ ವಾರಸುದಾರಿಕೆಯ ಪ್ರತಿಷ್ಠೆ ಪ್ರತಿಷ್ಟಾಪನೆಗೆ ಬಳಸುತ್ತಿರುವುದರಿಂದ ಸಂಸ್ಥೆ ಗೊಂದಲದ ಗೂಡಾಗಿದೆ’ ಎಂದು ಹಿರಿಯ ಧರ್ಮದರ್ಶಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಂತಃಕಲಹಕ್ಕೆ ಕಾರಣವೇನು?
ಒಬ್ಬರಲ್ಲ, ಈ ಸಂಸ್ಥೆಗೆ ಸಂಬಂಧಿಸಿದ ಹಲವರು ಮತ್ತು ದೇಣಿಗೆ ನೀಡಿರುವ ಹೊರಗಿನ ಹಿತೈಷಿಗಳನೇಕರು ಈಗಿನ ಅನಪೇಕ್ಷಿತ ವಿದ್ಯಮಾನಗಳಿಗೆ ಇಂಥದೇ ಕಾರಣ ನೀಡುತ್ತಿದ್ದಾರೆ.
‘ಸವಿತಾ ಮೇಡಂ ತರಗತಿಗಳಿಗೆ ಬಂದು ವಿದ್ಯಾರ್ಥಿಗಳ ಎದುರೇ ನಮ್ಮನ್ನು ನಿಂದಿಸುತ್ತಾರೆ. ವಿದ್ಯಾರ್ಥಿ, ಪೋಷಕರ ಎದುರೇ ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಶಿಕ್ಷಣ ಇಲಾಖೆ ನೀಡಿದ ಮಾರ್ಗದರ್ಶನದ ಪ್ರಕಾರ ನಾವು ಪಾಠ ಮಾಡುತ್ತೇವೆ. ಇವರು ತಮ್ಮದೇ ವಿಧಾನ ಅನುಸರಿಸುವಂತೆ ಒತ್ತಡ ಹಾಕುತ್ತಾರೆ. ಇದರಿಂದ ನಮಗೆ ಮಾನಸಿಕ ಹಿಂಸೆಯಾಗುತ್ತಿದೆ’ ಮುಂತಾಗಿ ಶಾಲೆಯ ಶಿಕ್ಷಕಿಯರು ಧರ್ಮದರ್ಶಿಗಳಿಗೆ ಹಲವು ಬಾರಿ ದೂರು ಪತ್ರಗಳನ್ನು ಬರೆದಿದ್ದಾರೆ.
ಸವಿತಾ ಅವರು ಕಾರ್ಯದರ್ಶಿಯಾಗಿ ಉಳಿದ ಯಾವುದೇ ಪದಾಧಿಕಾರಿಗಳ ಸಮ್ಮತಿ ಇಲ್ಲದೆ ಶಿಕ್ಷಕಿಯರಿಗೆ ನೋಟೀಸ್‌ಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸವಿತಾ ಅವರು ಶಾಲೆಯ ಸಹ ಶಿಕ್ಷಕರಾದ ಪದ್ಮ ಎಂಬುವರಿಗೆ ನೋಟೀಸ್ ಕಳಿಸಿದ್ದರು.
‘2025 ರ ಜೂನ್ 23ರಂದು ಮಧ್ಯಾಹ್ನ 2 ಗಂಟೆಗೆ ಒಂದನೇ ತರಗತಿಗೆ ಬಂದಾಗ ನೀವು ಕುರ್ಚಿಯ ಮೇಲೆ ಸುಮ್ಮನೆ ಕುಳಿತಿದ್ದು ಕಂಡು ಬಂದಿತು. ಮಕ್ಕಳು ತಮ್ಮಷ್ಟಕ್ಕೆ ತಾವು ಕುಳಿತುಕೊಂಡಿದ್ದರು. ಮತ್ತು ಯಾವುದೇ ರೀತಿಯ ಕಲಿಕೆಯಲ್ಲಿ ತೊಡಗಿಕೊಂಡಿರಲಿಲ್ಲ. ನೀವು ಕೂಡ ತರಗತಿಯಲ್ಲಿ ಏನನ್ನೂ ಹೇಳಿಕೊಡುತ್ತಿರಲಿಲ್ಲ. ಅದರಲ್ಲಿ ಒಂದು ಮಗು ಕರವಸ್ತ್ರವನ್ನು ಇಟ್ಟುಕೊಂಡು ಆಟವಾಡುತ್ತ ಕುಳಿತಿತ್ತು. ಹೀಗಾಗಿ ತರಗತಿಯಲ್ಲಿ ಕಲಿಕೆಯು ನಡೆಯುತ್ತಿರಲಿಲ್ಲ. ನೀವು ತರಗತಿಯಲ್ಲಿ ಪಾಟ ಹೇಳಿಕೊಡುವುದಾಗಲೀ ಅಭ್ಯಾಸ ಮಾಡಿಸುವುದಾಗಲೀ ಬಿಟ್ಟು ಏನು ಮಾಡುತ್ತಿದ್ದೀರಿ, ಇದಕ್ಕೆಒಂದು ದಿನದಲ್ಲಿ ನಿಮ್ಮ ಉತ್ತರವನ್ನು ತಿಳಿಸಿ ಎಂದು ನೋಟೀಸ್ ಜಾರಿ ಮಾಡಿದ್ದರು.
ಈ ನೋಟೀಸ್‌ನ್ನು ಸ್ವೀಕರಿಸಿದ್ದ ಸಹ ಶಿಕ್ಷಕಿ ಪದ್ಮ ಅವರು ಆಡಳಿತ ಮಂಡಳಿಗೆ ಮಾರುತ್ತರ ಬರೆದಿದ್ದರು.
ಮಾರುತ್ತರದಲ್ಲೇನಿತ್ತು?
ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ನಿರ್ಣಯ ಆದ ಮೇಲೂ ಕಾರ್ಯದರ್ಶಿ ಸವಿತಾ ಮೇಡಂ ಅವರು ನಮ್ಮ ತರಗತಿಗೆ ಭೇಟಿ ನೀಡುತ್ತಿದ್ದಾರೆ. ಜೂನ್ 23 ರಂದು ಮಧ್ಯಾಹ್ನ ತರಗತಿಗೆ ಭೇಟಿ ನೀಡಿದ ಸಮಯಕ್ಕೆ ಸಂಬಂಧಿಸಿದಂತೆ ನೋಟೀಸ್‌ನ್ನು ನನಗೆ ನೀಡಿರುತ್ತಾರೆ. ಈಗ ನಾನು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಯವಿಟ್ಟು ನನಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಕೋರಿದ್ದರು.
ತಮ್ಮ ಮಾತು ಕೇಳದ ಮುಖ್ಯ ಶಿಕ್ಷಕಿ ವಿರುದ್ಧ ಶಿಕ್ಷಕರನ್ನು ಎತ್ತಿಕಟ್ಟುವುದು, ತಾನು ತರಗತಿಗೆ ಹೋಗಿ ಪ್ರಶ್ನಿಸುವುದಕ್ಕೆ ಆಕ್ಷೇಪ ಎತ್ತಿದ ಶಿಕ್ಷಕಿಯರ ವಿರುದ್ಧ ವಿದ್ಯಾರ್ಥಿಗಳಿಂದ ದೂರು ಪಡೆದು ನೋಟಿಸ್ ಜಾರಿಮಾಡುವುದು, ಪ್ರತಿಭಟನೆ ಕೂರಿಸುವುದು, ಇಂಥದ್ದನ್ನೆಲ್ಲ ಪ್ರಶ್ನಿಸುವ ಧರ್ಮದರ್ಶಿಗಳನ್ನು ಅವರ ಹಿರಿತನವನ್ನು ಲೆಕ್ಕಿಸದೆ ನಿಂದಿಸುವುದು ಹಲವು ಹಿರಿಯ ಟ್ರಸ್ಟಿಗಳನ್ನು ಕೆರಳಿಸಿದೆ. ಅವರೆಲ್ಲ ಅಧ್ಯಕ್ಷ ಯತೀಂದ್ರ ಅವರ ಬಳಿ ನಿಯೋಗ ತೆರಳಿ ಹಲವು ದೂರು ಪತ್ರ, ದಾಖಲೆಗಳ ಸಮೇತ ಅಹವಾಲು ಸಲ್ಲಿಸಿರುವುದು ಗೊತ್ತಾಗಿದೆ.
‘ಅಲ್ಲದೇ ಕಾರ್ಯದರ್ಶಿ ಸವಿತಾ ಅವರು ಶೈಕ್ಷಣಿಕ ಕೆಲಸಗಳಲ್ಲಿ ತಮ್ಮ ಮೇಲೆ ಅಪಾರ ಒತ್ತಡವನ್ನು ಹೇರುತ್ತಿದ್ದಾರೆ ಹಾಗೂ ಸಲ್ಲದ ನಿಂದನೆಯನ್ನು ಮಾಡುತ್ತಿದ್ದಾರೆಂದು ಸಹ ಶಿಕ್ಷಕರು ಆರೋಪಿಸಿದ್ದಾರೆ. ಈ ಮನವಿ ಪತ್ರಕ್ಕೆ ಎಲ್ಲಾ ಶಿಕ್ಷಕರು ಸಹಿ ಹಾಕಿರುವುದು ಗಮನಿಸಬೇಕಾದ ಸಂಗತಿ. ತದನಂತರ ಮೂರು ಶಿಕ್ಷಕರು ಮಾತ್ರ ತಾವು ಆ ಮನವಿ ಪತ್ರಕ್ಕೆ ಒತ್ತಡದಿಂದ ಸಹಿ ಹಾಕಿರುವುದಾಗಿ ಬರೆದುಕೊಟ್ಟಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲು ಕಾರ್ಯದರ್ಶಿ ಸವಿತಾ ಅವರ ಅಭಿಪ್ರಾಯವನ್ನು ಲಿಖಿತವಾಗಿ ಪಡೆದು ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ತೀರ್ಮಾನವಾಗಿತ್ತು’ ಎಂದು ಸಭೆಯ ನಡವಳಿಯಲ್ಲಿ ದಾಖಲಾಗಿರುವುದು ತಿಳಿದು ಬಂದಿದೆ.
ಸಹ ಶಿಕ್ಷಕರಾದ ಚೈತ್ರ ಡಿ ಕೆ ಮತ್ತು ಮಮತ ಎಂ ಎಂಬುವರು ಕನ್ನಡ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳ ಬಳಿ ಅಲವತ್ತುಕೊಂಡಿದ್ದರು.
‘ತರಗತಿಯಲ್ಲಿ ಮಕ್ಕಳ ಎದುರು ವಿಷಯವನ್ನು ಬೇರೆ ರೀತಿಯಲ್ಲಿ ಅರ್ಥೈಯಿಸಿ ಎಂದು ಹೇಳುವುದು, ಮುಖ್ಯ ಶಿಕ್ಷಕರಿಗೆ ರಜೆ ಅಧಿಕಾರ ನೀಡುವುದು, ವಾರ್ಷಿಕೋತ್ಸವ ಸಮಯದಲ್ಲಿ ಎಲ್ಲರ ಮುಂದೆ ಶಿಕ್ಷಕರನ್ನು ಬೈದಿದ್ದು ಪಾಠ ಬರವಣಿಗೆಯನ್ನು ಬರೆದಿ (ತೆರೆದ ಪುಸ್ತಕ, ಪಾಟ ಟಿಪ್ಪಣಿ) ಇವುಗಳನ್ನು ತಿದ್ದುವುದು, ಮಕ್ಕಳ ಮುಂದೆ ಏನೂ ಹೇಳದೇ ಅವರ ಸಮ್ಮುಖದಲ್ಲಿ ನಮ್ಮನ್ನು ಕರೆದು ಮಾತನಾಡಿಸುವುದು, ಅಥವಾ ವಿಷಯವನ್ನು ತಿಳಿಸುವುದು ಎಂದು ಹೇಳುತ್ತಿದ್ದಾರೆ ಎಂದು ಅಲವತ್ತುಕೊಂಡಿರುವುದು ತಿಳಿದು ಬಂದಿದೆ.
ಬಹುಮತದ ನಿರ್ಣಯ
ಈ ಹಿನ್ನೆಲೆಯಲ್ಲಿ ಕಳೆದ ಜೂನ್ 15 ರಂದು ಯತೀಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆ ಕೆಲವು ಬಹುಮತದ ನಿರ್ಣಯಗಳನ್ನು ಕೈಗೊಂಡಿತ್ತು.
‘ಇನ್ನು ಮುಂದೆ ಶಾಲೆಯಲ್ಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಇತರೆ ಧರ್ಮದರ್ಶಿಗಳು ಶಿಕ್ಷಕರು ನಡೆಸುವ ಯಾವುದೇ ಶೈಕ್ಷಣಿಕ ಚಟುವಟಿಕೆ ಹಾಗೂ ಶಿಕ್ಷಕರ ನಡವಳಿಕೆಯ ಬಗ್ಗೆ ಪರಿಶೀಲನೆ ನಡೆಸಬಾರದು ಮತ್ತು ಖುದ್ದಾಗಿ ಪ್ರಶ್ನಿಸಬಾರದು. ಈ ಜವಾಬ್ದಾರಿ ಮುಖ್ಯಶಿಕ್ಷಕರದ್ದು ಮೂರು ತಿಂಗಳಿಗೊಮ್ಮೆ ಮುಖ್ಯ ಶಿಕ್ಷಕರು ಕಾರ್ಯಕಾರಿ ಸಮಿತಿಯಲ್ಲಿ ಆ ವರೆಗಿನ ಶೈಕ್ಷಣಿಕ ಪ್ರಗತಿ ಮಂಡಿಸಬೇಕು’ ಇತ್ಯಾದಿ ನಿರ್ಣಯ ಕೈಗೊಳ್ಳಲಾಗಿತ್ತು. ಸವಿತಾ ಅವರು ಸೇರಿದಂತೆ (ಅವರೊಬ್ಬರ ಹೆಸರು ಪ್ರಸ್ತಾಪಿಸಿ) ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಇದನ್ನು ಕಾರ್ಯರೂಪಕ್ಕೆ ತರುವಂತೆ ಯತೀಂದ್ರ ಅವರು ಲಿಖಿತ ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.
ಆದರೂ ಶಾಲೆಯ ಅಂಗಳದಲ್ಲಿ ಗಲಾಟೆಗಳು ತಪ್ಪಲಿಲ್ಲ. ಆಗಸ್ಟ್ 15ರ ಕಾರ್ಯಕ್ರಮದ ವಿಷಯದಲ್ಲಿ ಮಾತಿನ ಚಕಮಕಿಗಳು ನಡೆದಿವೆ. ವಿದ್ಯಾರ್ಥಿನಿಯೊಬ್ಬಳನ್ನು ಮುಖ್ಯಶಿಕ್ಷಕಿ ಹೆದರಿಸಿದ್ದಾರೆ; ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ರಂಪಾಟ ನಡೆಸಲಾಗಿದೆ. ಒಟ್ಟಿನಲ್ಲಿ ಶಿಕ್ಷಣ ಸಂಸ್ಥೆಯೊಂದರ ಆವರಣದಲ್ಲಿ ಚಿಕ್ಕ ಮಕ್ಕಳ ಎದುರಲ್ಲಿ ಏನೆಲ್ಲ ನಡೆಯಬಾರದೋ ಅದೆಲ್ಲದಕ್ಕೂ ಈ ಶಾಲೆಯ ಅಂಗಳ ಸಾಕ್ಷಿಯಾಗಿದೆ. ಸಂಸ್ಥೆಯ ಒಗ್ಗಟ್ಟನ್ನು ; ಒಟ್ಟು ಹಿತವನ್ನು ಯಾರು ಪೊರೆಯಬೇಕೋ ಅವರೇ ಒಡಕಿಗೆ ಕಾರಣವಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಆಘಾತ; ಹೃದಯಾಘಾತ
ಆ. 16 ಮತ್ತು ಅದಕ್ಕೆ ಮೊದಲು ನಡೆದ ಅನೇಕ ಘಟನೆಗಳು, ಟ್ರಸ್ಟಿಗಳ ವಾಟ್ಸ್ ಆ್ಯಪ್ ಗುಂಪಿನಲ್ಲಿ ನಡೆದ ಮಾತಿನ ಕಾದಾಟ, ಆರೋಪ – ಪ್ರತ್ಯಾರೋಪದ ಮೇಲಾಟಗಳು ಹಿರಿಯ ಧರ್ಮದರ್ಶಿಗಳನ್ನು ಆಘಾತಕ್ಕೀಡು ಮಾಡಿರುವುದು ಅವರ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ವ್ಯಕ್ತವಾಗುತ್ತಿದೆ. ಇಂಥದೇ ವಾಟ್ಸ್ ಆ್ಯಪ್ ಚರ್ಚೆಯಲ್ಲಿ ಉಪಾಧ್ಯಕ್ಷರಾದ ಸುರ. ಸುದರ್ಶನ ಅವರು ಬರೆದ ಮಾತು ಎಲ್ಲೆಡೆ ಹರಿದಾಡುತ್ತಿದೆ.
ಅದು ಹೀಗಿದೆ, ‘ಧರ್ಮದರ್ಶಿಗಳಲ್ಲಿ ಮನವಿ ಇಲ್ಲಿ ಇಷ್ಟೆಲ್ಲ ಚರ್ಚೆ ಮಾಡುವುದು ನನಗೆ ಇಷ್ಟದ ಸಂಗತಿಯಲ್ಲ ಎಲ್ಲವನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಬಹುದು ಎಂದೇ ಹೇಳಿದೆ.ಆದರೆ ಮಾಹಿತಿ ಏಕಪಕ್ಷೀಯವಾಗಿ ತಮಗೆ ದೊರೆಯಬಾರದು ಎಂದು ಕನಿಷ್ಠ ಮಾಹಿತಿ ಕೊಟ್ಟಿದ್ದೇನೆ. ನಾನು ಮತ್ತೆ ಏನನ್ನು ಹೇಳುವುದಿಲ್ಲ. ಧರ್ಮದರ್ಶಿಗಳ ತೀರ್ಮಾನಕ್ಕೆ ಬಿಟ್ಟಿದ್ದೇನೆ..’
ಇದೇ ಅವರ ಕೊನೆಯ ಪ್ರತಿಕ್ರಿಯೆ. ಅಂದು ಇಡೀ ದಿನ ವ್ಯಾಕುಲರಾಗಿದ್ದರು. ಸಂಜೆ ಸ್ನೇಹಿತರೊಂದಿಗೆ ಸಂಸ್ಥೆ ರಸ್ತೆಗೆ ಬೀಳುತ್ತಿರುವ ಸಂಗತಿಯನ್ನು ನೋವಿನಿಂದ ಚರ್ಚಿಸಿ, ಆತಂಕ ವ್ಯಕ್ತಪಡಿಸಿದ್ದ ಸುದರ್ಶನ ಮರದಿನ ಬೆಳಗ್ಗೆ ಹೃದಯಾಘಾತಕ್ಕೆ ತುತ್ತಾದರು. ‘ಈ ಮುಂಚಿನ ಕೆಲವು ಘಟನಾವಳಿಗಳಿಂದಾದ ಆಘಾತವೇ ಅವರ ಹೃದಯಾಘಾತಕ್ಕೆ ಕಾರಣವಾಗಿರಬಹುದು’ ಎನ್ನುವುದು ಅವರ ಒಡನಾಡಿಗಳ ಅಳಲು.
‘ಬಿಜೆಪಿ’ ಸಂಚಿನ ಆರೋಪ; ಯತೀಂದ್ರ ಬೇಸರ!
ಈ ಬೆಳವಣಿಗೆಯ ಬಳಿಕ ಹಿರಿಯ ಧರ್ಮದರ್ಶಿಗಳಲ್ಲಿನ ತಳಮಳ ಹೆಚ್ಚಿದೆ. ‘ ತಾನು ಹೇಳಿದಂತೆ ಕೇಳದ ಧರ್ಮದರ್ಶಿಗಳು, ಶಿಕ್ಷಕರನ್ನು ಹೇಗಾದರೂ ಹೊರ ಹಾಕಿ ತಮ್ಮದೇ ಕೂಟ ಕಟ್ಟಿಕೊಳ್ಳಲು ಸವಿತಾ ಯತ್ನಿಸುತ್ತಿದ್ದಾರೆ ಎಂಬ ಆಪಾದನೆಗಳು ವ್ಯಕ್ತವಾಗಿವೆ. ಇಂತಹ ದಾರ್ಷ್ಟದ ನಡೆಗಳನ್ನು ತಡೆಯದಿದ್ದರೆ ಸಂಸ್ಥೆಗೆ ಮಾರಕ. ಆದ್ದರಿಂದ ಸಂಸ್ಥೆಯ ಮತ್ತು ಉದ್ಯೋಗಿಗಳ ಹಿತವನ್ನು ಕನ್ನಡದ ಕಾಳಜಿಯನ್ನು ರಕ್ಷಿಸಬೇಕು ಎಂದು ಹಿರಿಯ ಟ್ರಸ್ಟಿಗಳು ಹಲವು ಹಿತೈಷಿಗಳನ್ನು ಎಡೆತಾಕಿ. ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಅಹವಾಲು ಸಲ್ಲಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಈ ಮಧ್ಯೆ ಸವಿತಾ ಅವರು ಈಚೆಗೆ ಮೈಸೂರಿಗೆ ಬಂದಿದ್ದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ದೀರ್ಘ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ‘ಕೆಲವು ಬಿಜೆಪಿ ಮನಸ್ಥಿತಿಯ ಟ್ರಸ್ಟಿಗಳು ಸೇರಿಕೊಂಡು ನನ್ನ ವಿರುದ್ಧ ಸಂಚು ರೂಪಿಸಿದ್ದಾರೆ. ಅಂತವರಿಗೆ ಯತೀಂದ್ರ ಅವರು ಬೆಂಬಲ ನೀಡುತ್ತಿದ್ದಾರೆ. ಅದನ್ನೆಲ್ಲ ಸಿಎಂ ಗೆ ವಿವರಿಸಿದ್ದೇನೆ. ಅವರು ನನ್ನ ಪರ ಇರುತ್ತಾರೆ. ಯಾರಿಗೂ ಏನೂ ಮಾಡಲಾಗದು’ ಎಂದು ಸವಿತಾ ಹೇಳಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಇದೆಲ್ಲ ತಿಳಿಯುತ್ತಿದ್ದಂತೆ ಯತೀಂದ್ರ ಸಿದ್ದರಾಮಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದೆ. ನನ್ನ ಮೇಲೇಯೇ ಕೆಲವರಿಗೆ ವಿಶ್ವಾಸ ಇಲ್ಲವೆಂದರೆ ಅಧ್ಯಕ್ಷನಾಗಿ ಮುಂದುವರಿಯುವದರಲ್ಲಿ ಅರ್ಥವಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಯತೀಂದ್ರ ಮನವೊಲಿಕೆಗೆ ಹಿರಿಯ ಧರ್ಮದರ್ಶಿಗಳು ಯತ್ನಿಸುತ್ತಿದ್ದಾರೆ. ಸುದರ್ಶನ ನಿಧನ ಬಳಿಕ 16 ಟ್ರಸ್ಟಿಗಳು ಇದ್ದು ಮೂರ್ನಾಲ್ಕು ಜನರ ಹೊರತು ಉಳಿದವರೆಲ್ಲ ಒಂದಾಗಿ, ಸಮಸ್ಯೆಯನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ತಂದೆಯ ಪ್ರೀತಿ, ಮಗಳದ್ದು ವಿರುದ್ಧ ನೀತಿ!
‘ಪ್ರಮಲ್ಲೇಶ್ ಅವರು ಕೂಡ ತಪ್ಪುಮಾಡಿದಾಗ ನಮ್ಮನ್ನು ಬಯ್ದು ತಿದ್ದುತಿದ್ದರು. ಮರು ಕ್ಷಣವೇ ಪ್ರೀತಿಯ ಧಾರೆ ಹರಿಸುತ್ತಿದ್ದರು. ತಂದೆಯ ಸ್ಥಾನದಲ್ಲಿ ನಿಂತು ನಮ್ಮನ್ನೆಲ್ಲ ಬೆಳೆಸಿದ್ದಾರೆ. ಆದರೆ, ಅವರ ನಿರ್ಗಮನದ ಬಳಿಕ ಸ್ಥಿತಿ ಬದಲಾಗಿದೆ. ಅವರ ಮಗಳು ಗೋಳು ಹೊಯ್ದುಕೊಳ್ಳುವುದನ್ನೇ ಬಿಗಿ ಆಡಳಿತ ಎಂಬಂತೆ ವರ್ತಿಸುತ್ತಿದ್ದಾರೆ. ನಮ್ಮ ಪರ ನಿಂತು,ವಿಶ್ವಾಸ ತುಂಬುವ ಹಿರಿಯ ಟ್ರಸ್ಟಿಗಳನ್ನು ಕೂಡ ಅವರು ಘನತೆಯಿಂದ ನಡೆಸಿಕೊಳ್ಳುತ್ತಿಲ್ಲ. ಕೆಲವು ಶಿಕ್ಷಕಿಯರು ನೊಂದು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಇದನ್ನೆಲ್ಲ ನೋಡಿದರೆ ನಮ್ಮ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ’ ಎಂದು ನೊಂದ ಶಿಕ್ಷಕಿಯೊಬ್ಬರು ಅಳಲು ತೋಡಿಕೊಂಡರು.
‘ನಮ್ಮ ಸಂಸ್ಥೆಯಲ್ಲಿ ಧರ್ಮದರ್ಶಿಗಳಾದವರ ಕುಟುಂಬದವರನ್ನು ನೇಮಿಸಿಕೊಳ್ಳುವ ಅಲಿಖಿತ ಪರಿಪಾಠವಿದೆ. ಅದರಿಂದ ಈ ವರೆಗೆ ಸಂಸ್ಥೆಗೆ ಹಾನಿ ಆಗಿರಲಿಲ್ಲ. ಈಗಿನ ಕೆಲವು ವಿದ್ಯಮಾನಗಳು ಅದನ್ನು ಬದಲಿಸಿಕೊಳ್ಳುವ ಅನಿವಾರ್ಯವನ್ನು ಎತ್ತಿ ತೋರುತ್ತಿವೆ. ಹಿರಿಯರ ಆದರ್ಶ; ಬದ್ಧತೆಗಳನ್ನು ಅವರ ವಾರಸುದಾರರಲ್ಲಿ ನಿರೀಕ್ಷಿಸುವ ಸ್ಥಿತಿ ಈಗಿಲ್ಲ. ವಾರಸುದಾರಿಕೆಯ ಹಕ್ಕು ಸ್ಥಾಪನೆಯು ಅಹಂಕಾರ, ಅಧಿಕಾರ ಮದವನ್ನು ಸೃಷ್ಟಿಸಿದರೆ ಏನೆಲ್ಲ ಸಂಭವಿಸಬಹುದೋ ಅದೆಲ್ಲ ನಮ್ಮ ಸಂಸ್ಥೆಯ ಅಂಗಳದಲ್ಲಿ ಘಟಿಸುತ್ತಿದೆ. ಇದಕ್ಕೆಲ್ಲ ಇತಿಶ್ರೀ ಹಾಡದಿದ್ದರೆ ದಾನಿ-ಜನರ ಹಣದಲ್ಲಿ ಕಟ್ಟಿದ ಜನಪರ-ಕನ್ನಡಪರ ಸಂಸ್ಥೆ ಭವಿಷ್ಯದಲ್ಲಿ ಮತ್ತಷ್ಟು ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ’ ಎನ್ನುವುದು ಹಿರಿಯ ಧರ್ಮದರ್ಶಿಯೊಬ್ಬರ ಆತಂಕ.
‘ನಮ್ಮನ್ನೆಲ್ಲ ಬಿಜೆಪಿ ಮನಸ್ಥಿತಿಯ ಜನ ಎಂದು ಕೆಲವರು ಹಬ್ಬಿಸುತ್ತಿದ್ದಾರೆ. ಹಾಗಿದ್ದರೆ, ಪ.ಮಲ್ಲೇಶ್ ಅವರು ನಮ್ಮನ್ನೆಲ್ಲ ತಮ್ಮ ಸಂಗಡ ಯಾಕೆ ಕಟ್ಟಿಕೊಂಡಿದ್ದರು, ಮಗಳಿಗಿರಬಹುದಾದ ಸೈದ್ದಾಂತಿಕ ಬದ್ಧತೆ; ಸ್ಪಷ್ಟತೆ ತಂದೆಗೆ ಇರಲಿಲ್ಲ ಎಂದರ್ಥವೇ ಎಂದೂ ಪ್ರಶ್ನಿಸುತ್ತಾರೆ ಟ್ರಸ್ಟಿಯೊಬ್ಬರು.
ಕೃಪೆ
‘ದಿ ಫೈಲ್’
Key words: Mysore, School, Senior trustees, dispute, CM, Yathindra Siddaramaiah