ಮೈಸೂರು,ಅಕ್ಟೋಬರ್,23,2025 (www.justkannada.in): ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್ 1ನೇ ಕ್ರಾಸ್ ರಸ್ತೆಯ ಒಂದು ಭಾಗವನ್ನು ಉದ್ದಕ್ಕೂ ಅಗೆದಿದ್ದಾರೆ. ಕಾಮಗಾರಿ ಮುಗಿದ ನಂತರ ಅಗೆದ ಭಾಗವನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಮಾರಣಾಂತಿಕ ಯಮರೂಪಿ ಗುಂಡಿಗಳು ಉದ್ಭವವಾಗಿವೆ. ಈ ಭಾಗದ ಆರೋಗ್ಯ ಕೇಂದ್ರದ ಬಳಿಯಂತೂ ಯಮ ರೂಪಿ ಕಂದಕ ರೂಪುಗೊಂಡಿದೆ.
ಈ ರಸ್ತೆಯಲ್ಲಿ ಸದಾ ವಾಹನ ಸಂಚಾರ ದಟ್ಟವಾಗಿರುತ್ತದೆ. ಆಟೋ,ಸ್ಕೂಟರ್,ಕಾರು ಹಾಗೂ ಶಾಲಾ ವಾಹನ(ವ್ಯಾನ್) ಸಂಚಾರವೂ ಅಧಿಕ. ಕತ್ತಲಾಗುತ್ತಿದ್ದಂತೆ ಈ ಜಾಗದಲ್ಲಿ ಇರುವ ಗುಂಡಿಯು ಗೋಚರಿಸುವುದಿಲ್ಲ.ಈ ಗುಂಡಿಗೆ ಬಿದ್ದ ವಾಹನಗಳು ಮಗುಚಿಕೊಳ್ಳುವುದು ಖಚಿತ. ದ್ವಿಚಕ್ರ ವಾಹನಗಳು ಈ ಗುಂಡಿಗೆ ಬಿದ್ದರೆ ಸವಾರರ ಕತೆ ಮುಗಿದಂತೆಯೇ!
ಈ ಭಾಗದಲ್ಲಿ ಶಾಲಾ ಮಕ್ಕಳನ್ನು ದ್ವಿಚಕ್ರವಾಹನದಲ್ಲಿ ಕರೆದೊಯ್ಯುವ ತಾಯಂದಿರ ಸಂಖ್ಯೆ ಹೆಚ್ಚು. ಹಾಗಾಗಿ ಇವರೆಲ್ಲರ ಪ್ರಾಣವನ್ನು ರಕ್ಷಿಸುವ ಜವಾಬ್ದಾರಿ ಪಾಲಿಕೆ ಹಾಗೂ ಪೊಲೀಸರದ್ದು. ಅಫಘಾತ ನಡೆದು ಅನಾಹುತ,ಸಾವು-ನೋವು ಸಂಭವಿಸಿದ ನಂತರ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ‘ಫೋಸು’ ನೀಡಿದರೆ ಯಾವುದೇ ಪ್ರಯೋಜನವಿಲ್ಲ.
ಅಪಘಾತ ನಡೆದ ನಂತರ ದೂರು, ಎಫ್ ಐ ಆರ್, ಮಹಜರ್, ಶವ ಪರೀಕ್ಷೆ, ತನಿಖೆ ಇತ್ಯಾದಿ ಕ್ರಮಗಳನ್ನು ನಡೆಸುವ ಬದಲಾಗಿ ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದು ಜಾಣತನ. ಈ ಭಾಗದಲ್ಲಿ ಕಾಮಗಾರಿಗೆಂದು ರಸ್ತೆಗಳನ್ನು ಅಗೆದ ನಂತರ ಆ ಗುಂಡಿಗಳನ್ನು ಮುಚ್ಚದೇ ಬೇಜವಾಬ್ದಾರಿ ಮೆರೆದ ಕಾಂಟ್ರಾಕ್ಟರ್ ವಿರುದ್ಧ ಪೊಲೀಸರು ಈ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ದಂಡಿಸುವ ಜೊತೆಗೆ,ಪಾಲಿಕೆಯೂ ಕೂಡ ಈ ಕಾಮಗಾರರ ಬಾಲ ಕತ್ತರಿಸಬೇಕಾಗಿದೆ.
ಇದು ಸಾಧ್ಯವಾಗದಿದ್ದರೆ ಮೈಸೂರು ಪೊಲೀಸ್ ಆಯುಕ್ತರು ಮೈಸೂರು ನಗರ ಪಾಲಿಕೆ ಆಯುಕ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ. ಈ ಜಾಗದಲ್ಲಿ ಅಪಘಾತ ನಡೆದು ಅನಾಹುತ ಪ್ರಾಣ ಹಾನಿ ಸಂಭವಿಸಿದರೆ ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರೇ ಜವಾಬ್ದಾರರು.
ಈ ಕೂಡಲೇ ಪೊಲೀಸ್ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರು ಕುವೆಂಪು ನಗರದ ಎಮ್ ಬ್ಲಾಕ್ ಒಂದನೇ ಅಡ್ಡ ರಸ್ತೆಯ ‘ಯಮ’ ಬ್ಲಾಕ್ ಬಳಿ ಇರುವ ಈ ಜಾಗಕ್ಕೆ ಭೇಟಿ ನೀಡಿ ಈ ರಸ್ತೆಯನ್ನು ವಿರೂಪಗೊಳಿಸಿದವರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ.
-ಪಿ.ಜೆ.ರಾಘವೇಂದ್ರ
ನ್ಯಾಯವಾದಿ
ಮೈಸೂರು
Key words: Mysore, Mysore City Corporation, Police, Road pothole







