ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ : ಮುದ್ದುಕೃಷ್ಣ ದಂಪತಿಗೆ ‘ರಂಗಗೀತೆ’ ಮೂಲಕ ಅಂತಿಮ ನಮನ.

 

ಮೈಸೂರು, ಜು.10, 2019 : (www.justkannada.in news) ಉತ್ತರ ಪ್ರದೇಶದ ಲಖ್ನೋದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ರಂಗಕರ್ಮಿ ಮುದ್ದುಕೃಷ್ಣ ದಂಪತಿಯ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ನೆರವೇರಿತು. ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸದೆ ವಿದ್ಯುತ್ ಚಿತಾಗಾರದಲ್ಲಿ ಮುದ್ದುಕೃಷ್ಣ ಹಾಗೂ ಇಂದ್ರಾಣಿ ಅವರ ಅಂತ್ಯಕ್ರಿಯೆ ಮಾಡಲಾಯಿತು.

ಬೆಂಗಳೂರಿನಿಂದ ಮಂಗಳವಾರ ರಾತ್ರಿ ಮೈಸೂರಿನ ನಿವಾಸಕ್ಕೆ ಮೃತರ ಪಾರ್ಥೀವ ಶರೀರ ತರಲಾಯಿತು. ಬೆಳಗ್ಗೆ 9.30 ರ ತನಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿ ಬಳಿಕ ಮೈಸೂರಿನ ಕಲಾಮಂದಿರಕ್ಕೆ ಪಾರ್ಥೀವ ಶರೀರ ಸ್ಥಳಾಂತರಿಸಿ ಅಲ್ಲಿ ಮಧ್ಯಾಹ್ನ 12.30 ರ ತನಕ ಕಲಾವಿದರು, ಸ್ನೇಹಿತರಿಗೆ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಿಸಲಾಯಿತು.

ರಂಗಾಯಣದ ನಿರ್ದೇಶಕಿ ಭಾಗಿರತಿ ಭಾಯಿ, ಮಾಜಿ ನಿರ್ದೇಶಕ ಜನಾರ್ಧನ್, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಚಿತ್ರನಟ ಧನಂಜಯ್, ಕಲಾವಿದ ಬಾದಲ್ , ಸಿಎಫ್ ಟಿಆರ್ ಐನ ಸಹೊದ್ಯೋಗಿಗಳು, ರಂಗತಂಡದ ಗೆಳೆಯರು ಅಂತಿಮ ದರ್ಶನ ಪಡೆದರು,
ಬಳಿಕ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ವಿದ್ಯುತ್ ಶವಗಾರದಲ್ಲಿ, ಯಾವುದೇ ಧಾರ್ಮಿಕ ವಿಧಿವಿಧಾನ ಅನುಸರಿಸದೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ಶಿವಾಜಿರಾವ್ ಜಾದವ್ ಮತ್ತು ತಂಡದವರು ರಂಗಗೀತೆ ಹಾಡುವ ಮೂಲಕ ಅಗಲಿದ ರಂಗಕರ್ಮಿ ಗೆಳೆಯನಿಗೆ ಗೀತನಮನ ಅಲ್ಲಿಸಿದರು. ರಂಗಗೀತೆ ಕೇಳಿದ ನೆರೆದಿದ್ದವರ ಕಣ್ಣಾಲಿಗಳು ತುಂಬಿ ಬಂದವು.

ಮೈಸೂರಿನ ಕುವೆಂಪುನಗರದಲ್ಲಿರುವ ನೃಪತುಂಗ ಕನ್ನಡ ಶಾಲೆ ಆವರಣದಲ್ಲಿ ಮುದ್ದುಕೃಷ್ಣ ದಂಪತಿ ನೆನಪಿನಾರ್ಥ ಸಸಿ ನೆಟ್ಟು ಅಲ್ಲಿ ಮೃತರ ಚಿತಾಭಸ್ಮವನ್ನು ಹಾಕಲು ಕುಟುಂಬದವರು ನಿರ್ಧರಿಸಿದ್ದು, ಆ ಮೂಲಕ ಮುದ್ದುಕೃಷ್ಣ ಅವರ ಇಚ್ಛೆಯಂತೆ ಚಿತಾಭಸ್ಮವನ್ನು ಯಾವುದೇ ನದಿ ನೀರಿಗೆ ಹಾಕದಿರಲು ತೀರ್ಮಾನಿಸಲಾಯಿತು.

——-

key words : mysore-rangayana-mudduklrishna-thater-person