ಅಂಬೇಡ್ಕರ್ ಭಾವಚಿತ್ರಕ್ಕೆ ನ್ಯಾಯಾಧೀಶರಿಂದ ಅಪಮಾನ ವಿಚಾರ: ಸಿಎಂ ಮತ್ತು ಕಾನೂನು ಸಚಿವರ ವಿರುದ್ಧ ಆರ್ ಧ್ರುವನಾರಾಯಣ್ ಕಿಡಿ.

ಮೈಸೂರು,ಜನವರಿ,29,2022(www.justkannada.in): ರಾಯಚೂರಿನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ನ್ಯಾಯಾಧೀಶರಿಂದ ಅಪಮಾನ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್  ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಆರ್.ಧೃವನಾರಾಯಣ್,   ಇಲ್ಲಿಯವರೆಗೂ ನ್ಯಾಯಾಧೀಶರ ಮೇಲೆ ರಾಜ್ಯ ಸರ್ಕಾರ ಸೂಕ್ತ ಕ್ರ‌ಮ ಕೈಗೊಂಡಿಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮೌನ ವಹಿಸಿರುವುದು ಸರಿಯಲ್ಲ. ಇವರ ಮೌನ ನೋಡಿದರೆ, ನ್ಯಾಯಾಧೀಶರ ನಡವಳಿಕೆಗೆ ಇವರುಗಳ ಸಮ್ಮತಿಯಿರುವಂತೆ ಕಾಣಿಸುತ್ತಿದೆ. ಕಾನೂನಿನ ಪಾಠ ಹೇಳುವ ನ್ಯಾಯಾಧೀಶರೇ ಅಂಬೇಡ್ಕರ್ ಗೆ ಅಪಮಾನ ಮಾಡಿರುವುದು ದುರಂತ. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ಕೈಕಟ್ಟಿ‌ ಕುಳಿತಿರುವುದು ನಾಚಿಕೇಗೇಡು. ಬಿಜೆಪಿಯಲ್ಲಿ‌ರುವ ದಲಿತ ನಾಯಕರುಗಳು ಕೂಡ ಬಾಯಿ‌ ಮುಚ್ಚಿಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದಲೂ ದೇಶಾದ್ಯಂತ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.

‘ನನ್ನಿಂದಲೇ ಮೈಸೂರು ಹೆಚ್ಚು ಅಭಿವೃದ್ಧಿ’ ಎಂದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು

ಮಹಾರಾಜರನ್ನು ಬಿಟ್ಟರೇ ನಾನೇ ಅತಿ ಹೆಚ್ಚು ಅಂತರದಿಂದ ಗೆದ್ದಿದ್ದೇನೆ. ನನ್ನಿಂದಲೇ ಮೈಸೂರು ಹೆಚ್ಚು ಅಭಿವೃದ್ಧಿ ಆಗಿದೆ ಎಂದು ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್ ಧ್ರುವನಾರಾಯಣ್ ತಿರುಗೇಟು ನೀಡಿದ್ದಾರೆ.

ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರು ಈ ಹಿಂದೆ 1.65 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ನಾನು ಸಹ 1.41 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದಾಗಿ 1816 ಮತಗಳ ಅಂತರದಿಂದ ಸೋತಿದ್ದೇನೆ. ಯಾವುದೇ ಚುನಾವಣೆಯಲ್ಲಿ ಗೆಲುವಿನ ಅಂತರ ಮುಖ್ಯವಾಗುವುದಿಲ್ಲ. ಮೈಸೂರು ವಿಮಾನ ನಿಲ್ದಾಣ ‌ನಿರ್ಮಾಣ ಆಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಇದನ್ನು ಮೇಲ್ದರ್ಜೆಗೇರಿಸಲು ಸಂಸದ ಪ್ರತಾಪ್ ಸಿಂಹ ಶ್ರಮಪಟ್ಟಿರಬಹುದು ಅಷ್ಟೇ. ರಿಂಗ್ ರಸ್ತೆ ನಿರ್ಮಾಣ ಆಗಿದ್ದು ಕೂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಈಗಿನ ಸರ್ಕಾರ ಪೂರ್ಣಗೊಳಿಸುತ್ತಿದೆ ಎಂದು ಆರ್.ದೃವನಾರಾಯಣ್ ಟಾಂಗ್ ನೀಡಿದರು.

ಇನ್ನು ಜೆಡಿಎಸ್ ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ಕಾಂಗ್ರೆಸ್ ನ ಹಿರಿಯ ನಾಯಕರ ಸಂಪರ್ಕದಲ್ಲಿರುವುದು ನಿಜ. ಶಾಸಕ ಸಿ. ಎಸ್ ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಜೆಡಿಎಸ್ ನ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಜೆಡಿಎಸ್ ಪಕ್ಷದೊಳಗಿನ ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ. ಈ ರೀತಿ ಬೇಸತ್ತಿರುವ ಜೆಡಿಎಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ. ಸಚಿವ ವಿ ಸೋಮಣ್ಣ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎಲ್ಲೂ ಪ್ರಸ್ತಾಪವಾಗಿಲ್ಲ. ಅವರು ಈಗ ಮಂತ್ರಿಯಾಗಿದ್ದಾರೆ. ಈಗಷ್ಟೇ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ಯಾವುದೇ ಹಂತದಲ್ಲೂ ಪ್ರಸ್ತಾಪವಾಗಿಲ್ಲ ಎಂದು ಆರ್.ಧೃವನಾರಾಯಣ್ ತಿಳಿಸಿದರು.

Key words: mysore-R.Dhruvanarayan-MP-Prathap simha