ಮೈಸೂರು,ಡಿಸೆಂಬರ್,15,2025 (www.justkannada.in): ವಿಕಸಿತ ಭಾರತದಂತೆ ಮೈಸೂರು- ಕೊಡಗು ಸಹ ವಿಕಸಿತ ಕ್ಷೇತ್ರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಲಹೆ, ಮಾರ್ಗದರ್ಶನ, ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ಸಂಸದ ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾವು ಸಂಸತ್ ಚುನಾವಣೆಗೆ ಸ್ಪರ್ಧಿಸಿದಾಗ ಅನನುಭವಿ ಆಗಿದ್ದೆ. ಬಳಿಕ ಮಾಧ್ಯಮದವರು ಸಹಾ ನೀಡಿದ ಉಪಯುಕ್ತ ಸಲಹೆ, ಮಾರ್ಗದರ್ಶನ ಏನಾದರೂ ಸಾಧನೆ ಮಾಡಲು ಸಾಧ್ಯವಾಗುವಂತೆ ಮಾಡಿದೆ. ಇದೇ ವೇಳೆ ಕ್ಷೇತ್ರದ ಜನತೆಗೆ ಯೋಜನೆ ಜಾರಿಗೊಳಿಸುವ ವೇಳೆ, ಕಾರ್ಯಕ್ರಮ ರೂಪಿಸಿ ಅನುಷ್ಠಾನದ ವೇಳೆ ಅವರ ಧ್ವನಿಯಾಗಿ ಮಾಧ್ಯಮ ನಿಂತು ಲೋಪದೋಷ ಸರಿಪಡಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದೆ ಎಂದರು.
ಹೀಗಾಗಿ ಮೈಸೂರು- ಕೊಡಗು ಹೆದ್ದಾರಿ, ರೈಲ್ವೆ ಮಾರ್ಗ, ಯಾದವಗಿರಿಯಲ್ಲಿ ಹೊಸ ರೈಲು ನಿಲ್ದಾಣ ಭಾರತೀಯ ಭಾಷಾ ಸಂಸ್ಥಾನದಿಂದ ಕನ್ನಡಕ್ಕಾಗಿ ಪ್ರತ್ಯೇಕ ಅಧ್ಯಯನ ವ್ಯವಸ್ಥೆ ಬೇರ್ಪಡಿಸಿ, ಅಧ್ಯಯನಾ ವಿಸ್ತ್ರತಗೊಳಿಸುವುದು, ಹುಣಸೂರು, ಪಿರಯಾಪಟ್ಟಣ ಮೊದಲಾದ ಕಡೆಗಳಲ್ಲಿ ಕೃಷಿಕರಿಗೆ ಸವಲತ್ತು ವಿತರಣೆ ಮೊದಲಾದವು ಸಾಧ್ಯವಾಗುತ್ತಿವೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಅದು ಮೈಸೂರು ಪರಂಪರೆ, ಹಿತಾಸಕ್ತಿಗೆ ಅನುಗುಣವಾಗಿರಬೇಕು. ಜನರ ಜೀವನ ಸುಧಾರಣೆಯೇ ತಮಗೆ ಮುಖ್ಯ. ಈ ನಿಟ್ಟಿನಲ್ಲಿ ಮಾಧ್ಯಮಗಳೂ ಉಪಯುಕ್ತ ಸಲಹೆ ಮೂಲಕ – ಬೆಂಬಲಕ್ಕೆ ನಿಲ್ಲಬೇಕೆಂದು ಮನವಿ ಮಾಡಿದರು.
ಪ್ರಧಾನ ಭಾಷಣ ಮಾಡಿದ ನ್ಯೂಸ್ 18 ಸಂಪಾದಕ ಹರಿಪ್ರಸಾದ್ ಮಾತನಾಡಿ, ಮಾಧ್ಯಮಗಳ ವಿಶ್ವಾಸಾರ್ಹತೆ ಸದಾ ಚರ್ಚೆಗೆ ಒಳಗಾಗುತ್ತಿರುವ ವಿಷಯ ವಾಗಿದೆ. ಮಾಧ್ಯಮಗಳು ವಿಶ್ವಾಸಾರ್ಹತೆ ಉಳಿಸಿಕೊಳ್ಳು ತ್ತಿಲ್ಲ ಎಂಬ ಆತಂಕ ಸಹಾ ಆಗಾಗ್ಗೆ ಉಂಟಾಗುತ್ತಿರುತ್ತದೆ. ಹೀಗಾಗಿ ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವೂ ಆಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ವೇಳೆಯೂ ಇದೇ ಮಾತು ಕೇಳಿಬಂದಿತ್ತು. ಆದರೂ ಉಳಿಸಿಕೊಂಡಿದ್ದು ಅಂದಿನ ಕಾಲಘಟ್ಟದಲ್ಲಿ ಕೆಲಸ ಮಾಡುತ್ತಿದ್ದವರ ಶ್ರಮದಿಂದಾದುದಾಗಿದೆ. ಇದೇ ನಿಟ್ಟಿನಲ್ಲಿ ಈಗಲೂ ಪತ್ರಿಕೋದ್ಯಮದಲ್ಲಿರುವವರು ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಇಂದು ಸಹ ಸುಳ್ಳು ಸುದ್ದಿಗಳು ವ್ಯಾಪಕವಾಗ ಹರಡುತ್ತಿರುತ್ತವೆ. ಇದನ್ನು ತಡೆಯುವ ಕೆಲಸ ಪತ್ರಿಕೆಗಳು ಮಾಡಬೇಕು. ಸಮಾಜದಲ್ಲಿ ಮಾಧ್ಯಮ ಶಕ್ತಿಶಾಲಿಯಾಗಿದೆ. ಹೀಗಾಗಿ ನೇರವಾದ ಅಭಿಪ್ರಾಯ ಜನರಿಗೆ ತಲುಪಿಸಬೇಕಾಗುತ್ತದೆ. ಇನ್ನು, ತುಣುಕುಗಳು ಸುಳ್ಳು ಪ್ರಚಾರಕ್ಕೆ ಯಾರಾದರೂ ಏನನ್ನಾದರೂ ಹೇಳಿದ್ದರೆ ಅದರ ತುಣುಕು ಮಾತ್ರ ಪ್ರಸಾರ ಮಾಡಿ ಬೇರೊಂದು ಕಲ್ಪನೆಗೆ ದೂಡುವ ಕೆಲಸವೂ ಆಗುತ್ತಿದೆ ಎಂದು ಬೇಸರಿಸಿದರು.
ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕಾನಾಥ್ ಮಾತನಾಡಿ, ಮೈಸೂರು ಪತ್ರಿಕೋದ್ಯಮ ಕೂಡು ಕುಟುಂಬವಿದ್ದಂತೆ, ಇಲ್ಲಿ ವಿಭಿನ್ನವಾದ ಸವಾಲುಗಳಿವೆ. ಆದರೂ ಇತರರಿಗೆ ಆದರ್ಶವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ವಿ. ಮಹೇಶ್ ಕುಮಾರ್ ಕೊಳ್ಳೇಗಾಲ, ಕೆ.ಎಸ್. ಮಂಜುನಾಥಸ್ವಾಮಿ, ಟಿ.ಎ. ಸಾದಿಕ್ ಪಾಷ, ಎಸ್. ಉದಯ ಶಂಕರ್, ಸಿ.ಎಂ. ಮಧುಸೂದನ್, ಪ್ರಮೋದ ಪ್ರಭು, ರವಿ ಪಾಂಡವಪುರ ಹಾಗೂ ರಾಮ್ ಅವರನ್ನು ಅಭಿನಂದಿ ಸಲಾಯಿತು. ಉತ್ತಮ ವರದಿಗಾರಿಕೆಗಾಗಿ ದಾ.ರಾ. ಮಹೇಶ್, ಎ. ಗಣೇಶ, ಎಸ್.ಆರ್. ಮಧುಸೂದನ್, ಕೆ.ಎಸ್. ಆನಂದ, ಪಿ. ರಾಹುಲ್, ಚಂದನ್ ಬಲರಾಮ, ಎಲ್. ಸತೀಶ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಂಘದ ಅಧ್ಯಕ್ಷ ಕೆ. ದೀಪಕ್, ಉಪಾಧ್ಯಕ್ಷ ರವಿ ಪಾಂಡವಪುರ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಇತರರು ಉಪಸ್ಥಿತರಿದ್ದರು.
Key words: Mysore, Press Day, journalists, MP, Yaduveer







