MYSORE,  N.R. CONSTITUENCY :  ಅಲ್ಪಸಂಖ್ಯಾತರ ಮತಗಳು ವಿಭಜನೆಯಾದರೆ ಬಿಜೆಪಿಗೆ ವರದಾನ..

 

ಮೈಸೂರು, ಏ.10, 2023 : (www.justkannada.in news) ಮುಸ್ಲಿಂ ಸಮುದಾಯದ ಮತದಾರರೇ ಹೆಚ್ಚಿರುವ, ಕಾಂಗ್ರೆಸ್‌ನ ಭದ್ರಕೋಟೆ  ನರಸಿಂಹರಾಜ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಜಾ.ದಳ,ಎಸ್‌ಡಿಪಿಐ ಸಜ್ಜಾಗಿದ್ದು, ಅಲ್ಪಸಂಖ್ಯಾತ ಮತಗಳು ವಿಭಜನೆ ಮೂಲಕ ಬಿಜೆಪಿಗೆ ಅನುಕೂಲವಾಗುವ ತಂತ್ರ ಹೆಣೆಯಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ಶಾಸಕ ತನ್ವೀರ್ ಸೇಠ್ ವಿರುದ್ಧ ಒಳಗೊಳಗೆ ಅತೃಪ್ತಿ ಹೊಗೆಯಾಡುತ್ತಿದ್ದರೆ, ಜಾ.ದಳದಿಂದ ಅಬ್ದುಲ್ ಅಜೀಜ್ ಹೊರಬಂದಿರುವುದು , ಸಿ.ಎಂ.ಇಬ್ರಾಹಿಂಗೆ ಆರಂಭಿಕ ಹಿನ್ನಡೆ.  ಬಿಜೆಪಿ ವಿರುದ್ಧ ಒಂದಾಗುತ್ತಿದ್ದ ಅಲ್ಪಸಂಖ್ಯಾತ ಸಮುದಾಯವರು ಈ ಬಾರಿ ವಿಭಜನೆಯ ಹಾದಿ ಹಿಡಿದಿರುವುದು ಕಾಂಗ್ರೆಸ್-ಜಾ.ದಳ ನಾಯಕರು ತಮ್ಮದೇ ಆದ ತಂತ್ರಗಾರಿಕೆ ರಚಿಸಿಕೊಂಡು ಸರಿಪಡಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಂಗ್ರೆಸ್ ಹಾಗೂ ಅಜೀಜ್ ಸೇಠ್ ಕುಟುಂಬದ ಭದ್ರಕೋಟೆ ಎನ್ನಿಸಿಕೊಂಡಿರುವ ನರಸಿಂಹರಾಜ ಕ್ಷೇತ್ರದಲ್ಲಿ ಒಂದು ಬಾರಿ ಬಿಜೆಪಿ ಗೆಲುವು ಸಾಧಿಸಿದ್ದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಬಿಜೆಪಿ,ಜಾ.ದಳ ಗೆಲುವನ್ನೇ ಕಂಡಿಲ್ಲ.

ಇಬ್ರಾಹಿಂ ಘೋಷಣೆ ಮುನ್ನವೇ ಪಕ್ಷ ತ್ಯಜಿಸಿದ ಅಬ್ದುಲ್ಲಾ :

ಕ್ಷೇತ್ರದಲ್ಲಿ ಜಾ.ದಳದ ಅಭ್ಯರ್ಥಿ ಆಕಾಂಕ್ಷಿಯಾದ ಸಿ.ಎಂ.ಇಬ್ರಾಹಿಂ ಹೆಸರು ಘೋಷಣೆಗೂ ಮುನ್ನವೇ ಅಬ್ದುಲ್ಲಾ ಅಜೀಜ್ ಪಕ್ಷ ತ್ಯಜಿಸಿದ್ದಾರೆ.೨೦೧೩ರ ಚುನಾವಣೆಯಲ್ಲಿ ಜಾ.ದಳದಿಂದ ಸ್ಪರ್ಧಿಸಿ ೩೩ಸಾವಿರ ಮತಗಳನ್ನು ಪಡೆದಿದ್ದ ಮಾಜಿ ಮಹಾಪೌರ ಎಸ್.ಸತೀಶ್ ಸ್ವಾಮಿ ೨೦೧೮ರ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷದ ಸಂಘಟನೆಯಲ್ಲೂ ತೊಡಗಿಸಿಕೊಂಡು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ಕೊಡುವಷ್ಟು ಅಲೆ ಎಬ್ಬಿಸಿದ್ದರು. ಆದರೆ, ಜಾ.ದಳದಲ್ಲಿ ನಡೆದ ಆಂತರಿಕ ಬೆಳವಣಿಗೆಯಿಂದ ಎಸ್.ಸತೀಶ್ ಸ್ವಾಮಿಗೆ ಕೊನೆಯಲ್ಲಿ ಟಿಕೆಟ್ ತಪ್ಪಿಸಿ ಅಬ್ದುಲ್ಲಾ ಅಜೀಜ್ ಅವರಿಗೆ ಮಣೆ ಹಾಕಿತ್ತು. ಈ ಚುನಾವಣೆಯಲ್ಲಿ ಅಬ್ದುಲ್ಲಾ ಅಜೀಜ್ ೧೪ಸಾವಿರ ಮತಗಳನ್ನು ಪಡೆದರೆ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಸ್.ಸತೀಶ್ ಸ್ವಾಮಿ ೪೦ಸಾವಿರ ಮತಗಳನ್ನು ಪಡೆದಿದ್ದರು. ಈ ಬಾರಿ ಮತ್ತೊಮ್ಮೆ ಸ್ಪರ್ಧಿಸಲು ಸಜ್ಜಾಗಿದ್ದ ಅಬ್ದುಲ್ಲಾ ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸದ ಕಾರಣ ಪಂಚರತ್ನಯಾತ್ರೆ ಸಮಾರೋಪದಿಂದ ದೂರ ಉಳಿದಿದ್ದರು.ಇದೀಗ ಪಕ್ಷವನ್ನೇ ತ್ಯಜಿಸಿ ಕಾಂಗ್ರೆಸ್ ಸೇರಲು ಸಜ್ಜಾಗಿರುವುದರಿಂದ ದೊಡ್ಡ ಹೊಡೆತ ಬಿದ್ದಿದೆ.

ಈ ಕ್ಷೇತ್ರದ ಬಹುತೇಕ ಜಾ.ದಳದ ಸದಸ್ಯರು ಅಬ್ದುಲ್ಲಾ ಬೆಂಬಲಿಗರಾಗಿರುವ ಕಾರಣ ಇಬ್ರಾಹಿಂ ಸಾಕಷ್ಟು ಕಸರತ್ತು ಮಾಡಬೇಕಿದೆ. ಮತ್ತೊಂದೆಡೆ ೨೦೧೩ರಲ್ಲಿ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಗೆಲುವಿನ ಕನಸು ಕಂಡಿದ್ದ ಎಸ್‌ಡಿಪಿಐ, ೨೦೧೮ರಲ್ಲಿ ನಿರೀಕ್ಷಿತ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಒಂದು ವರ್ಷದಿಂದ ಎಸ್‌ಡಿಪಿಐ ಕಾರ್ಯಕರ್ತರು ತಮ್ಮದೇ ಆದ ರೀತಿಯಲ್ಲಿ ಮತದಾರರ ಗಮನ ಸೆಳೆಯಲು ಪ್ರಚಾರ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನೆಲೆಯೂರಿರುವ ಎಸ್‌ಡಿಪಿಐ ಈ ಬಾರಿ ಗೆಲುವಿನ ಲೆಕ್ಕಚಾರದಲ್ಲಿದೆ.

ತನ್ವೀರ್‌ಗೂ ಆಂತರಿಕ ಭಿನ್ನಮತ:

ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಅಸಮಾಧಾನವಿದ್ದು, ಟಿಕೆಟ್ ವಂಚಿತ ಮಾಜಿ ಮಹಾಪೌರ ಅಯೂಬ್ ಖಾನ್ ಮೌನದಿಂದ ಇದ್ದಾರೆ. ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಅಯೂಬ್ ಖಾನ್ ತಟಸ್ಥವಾಗಿ ಉಳಿದರೆ ಅಥವಾ ಜಾ.ದಳ, ಎಸ್‌ಡಿಪಿಐ ಬೆಂಬಲಿಸಿದರೆ ಹೊಡೆತ ಬೀಳಲಿದೆ. ಚುನಾವಣಾ ಸ್ಪರ್ಧೆಯಿಂದ ದೂರ ಉಳಿಯುವ ಮಾತು ಹೇಳಿದ್ದ ತನ್ವೀರ್‌ಸೇಠ್ ಅವರ ಅನಾರೋಗ್ಯ ವಿಚಾರವೇ ಈಗ ಎದುರಾಳಿಗಳಿಗೆ ಅಸ್ತ್ರವಾಗಿದೆ.

ಬಿಜೆಪಿಗೆ ಅನುಕೂಲ ಸಾಧ್ಯತೆ?:

ಅಲ್ಪಸಂಖ್ಯಾತರ ಮತಗಳು ವಿಭಜನೆಯಾದರೆ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಬರಲಿದೆ. ಮುಸ್ಲಿಂ ವರ್ಗಕ್ಕೆ ಸೇರಿದ ತನ್ವೀರ್‌ಸೇಠ್,ಸಿ.ಎಂ.ಇಬ್ರಾಹಿಂ, ಅಬ್ದುಲ್ ಮಜೀಜ್ ಸ್ಪರ್ಧೆ ಮಾಡುವುದು ನಿಶ್ಚಿತವಾಗಿದ್ದು, ಒಂದು ಲಕ್ಷಗಳ ಮತವನ್ನು ಹೊಂದಿರುವ ಸಮುದಾಯದ ಮತಗಳು ಚದುರಿದರೆ ಅದು ಬಿಜೆಪಿಗೆ ವರದಾನ.

KEY WORDS : mysore-n.r.constituency-election.2023-congress-bjp-jds