ಕೆರೆಗೆ ತಳ್ಳಿ ಬಾಲಕನ ಹತ್ಯೆ ಪ್ರಕರಣ: 7 ಮಂದಿ ವಿರುದ್ಧ ಎಫ್ಐಆರ್ ದಾಖಲು.

ಮೈಸೂರು,ಜನವರಿ,5,2022(www.justkannada.in):  ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದ ಬಾಲಕನನ್ನ ಕೆರೆಗೆ ತಳ್ಳಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಎಸ್ಪಿ ಚೇತನ್, ಪ್ರಕರಣ ಸಂಬಂಧ ಹೆಮ್ಮರಗಾಲದ ಶ್ರೀನಿವಾಸ್, ರಾಜು, ನವೀನ್ ಹಾಗೂ ಮುದ್ದು ಎಂಬುವರ ವಿರುದ್ಧ ಮೃತ ಮಹೇಶ್ ತಂದೆ ಸಿದ್ದರಾಜು ದೂರು ನೀಡಿದ್ದರು. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜ.2ರಂದು ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲದ 10ನೇ ತರಗತಿ ವಿದ್ಯಾರ್ಥಿ ಮಹೇಶ್ ಅಲಿಯಾಸ್ ಮನು ಕೆರೆಯಲ್ಲಿ ಮೃತ್ತಪಟ್ಟಿದ್ದ. ಹಳ್ಳೆಪುರ ಕೆರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.

ಈತನ ಸಹಪಾಠಿಗಳು ಕೆರೆ ಬಳಿ ಕರೆದುಕೊಂಡು ಹೋಗಿ ವಾಮಚಾರ ಮಾಡಿ ಸಾಯಿಸಿದ್ದಾರೆ ಎಂದು ಶಂಕೆ ವ್ಯಕ್ತವಾಗಿತ್ತು. ಹೆಮ್ಮರಗಾಲದ ರಾಜು, ಶ್ರೀನಿವಾಸ್ ಶೆಟ್ಟಿ,ಮುದ್ದು ಹಾಗೂ ನವೀನ ಎಂಬುವವರು ಮಾಟಮಂತ್ರ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು. ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಒಳ್ಳೆಯದಾಗುತ್ತದೆ  ಉದ್ದೇಶದಿಂದ ಮಹೇಶ್ ಸಹಪಾಠಿಗಳಿಗೆ ಹೇಳಿದ್ದಾರೆ. ಅದರಂತೆ ಮಹೇಶ್ ನನ್ನು ಕೆರೆ ಬಳಿ ಕರೆದುಕೊಂಡು ಸಾಯಿಸಿದ್ದಾರೆ ಎನ್ನಲಾಗಿದೆ ಎಂದು ಮಾಹಿತಿ ನೀಡಿದರು.

Key words: mysore-murder –case-FIR