ಅಧಿಕಾರಿಗಳು, ರಾಜಕಾರಣಿಗಳ ಪಿತೂರಿಯಿಂದಾಗಿ ರಾಜ್ಯದಲ್ಲಿ  ಕಡ್ಡಾಯವಾಗದ ಕನ್ನಡ ಭಾಷೆ- ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಆರೋಪ…

ಮೈಸೂರು,ಫೆ,14,2020(www.justkannada.in):  ಅಧಿಕಾರಿಗಳು ಹಾಗು ರಾಜಕಾರಣಿಗಳ ಪಿತೂರಿಯಿಂದಾಗಿ ರಾಜ್ಯದಲ್ಲಿ ಕನ್ನಡ ಭಾಷೆ ಕಡ್ಡಾಯವಾಗುತ್ತಿಲ್ಲ. ಕನ್ನಡ ಭಾಷೆಗೆ ಆದ್ಯತೆ ಎನ್ನುವ ಬದಲು ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕು ಎಂದು ಖ್ಯಾತ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ  ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಇದುವರೆಗೂ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳ ಬೇಜವಾಬ್ದಾರಿತನದಿಂದಾಗಿ ಕನ್ನಡ ಭಾಷೆ ಇದೀಗ ತೊಂದರೆಗೆ ಸಿಲುಕಿದೆ. ಶಿಕ್ಷಣ ನೀತಿಯ ಸರಳೀಕರಣ, ವ್ಯಾಪಾರೀಕರಣದಿಂದಾಗಿಯೂ ಕನ್ನಡ ಭಾಷಾ ಬೆಳವಣಿಗೆಗೆ ಧಕ್ಕೆಯಾಗಿದೆ. ಭಾಷೆ ಭವಿಷ್ಯಕ್ಕೆ ದಾರಿ ಎಂಬುದನ್ನು ಸರ್ಕಾರ ಅರಿಯಬೇಕು.  ಕನ್ನಡ ಭಾಷೆಗೆ ಆದ್ಯತೆ ಎನ್ನುವ ಬದಲು ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳು ಹಾಗು ರಾಜಕಾರಣಿಗಳ ಪಿತೂರಿಯಿಂದಾಗಿ ರಾಜ್ಯದಲ್ಲಿ ಕನ್ನಡ ಭಾಷೆ ಕಡ್ಡಾಯವಾಗುತ್ತಿಲ್ಲ. ನಾನು ರಂಗಭೂಮಿ, ಚಿತ್ರರಂಗ, ಕಿರುತೆರೆ, ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ. ರಾಜಕಾರಣ ಪ್ರವೇಶಿಸಿದ ಕೇವಲ 20ದಿನದಲ್ಲೇ ಶಾಸಕನಾಗಿ ಆಯ್ಕೆಯಾದೆ, ಆನಂತರ ಎರಡು ಬಾರಿ ಎಂ.ಎಲ್.ಸಿ ಆದೆ. ರಾಜಕಾರಣವನ್ನು ತೆವಲಿಗಾಗಿ ಮಾಡಿದೆ. ಆದರೀಗ ನನಗೆ ಟಿಕೆಟ್ ಕೊಟ್ಟರೂ ಚುನಾವಣೆಗೆ ನಿಲ್ಲುವುದಿಲ್ಲ. ನಾನು ಪ್ರಮಾಣಿಕನಾಗಿದ್ದು ರಾಜಕಾರಣ ಸೇರಿ ಹಣ ಆಸ್ತಿ ಮಾಡಿಲ್ಲ. ಹಾಗಾಗಿ ನನಗೆ ಚುನಾವಣೆಯಲ್ಲಿ ನಿಲ್ಲುವ ಶಕ್ತಿ ಇಲ್ಲ ಎಂದು ಮುಖ್ಯಮಂತ್ರಿ ಚಂದ್ರು ನುಡಿದರು.

ಡಾ.ರಾಜ್ ಕುಮಾರ್ ಮತ್ತು ಅಂಬರೀಶ್ ನೆನೆದ ಮುಖ್ಯಮಂತ್ರಿಚಂದ್ರು…

ಇದೇ ವೇಳೆ  ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಮತ್ತು ರೆಬಲ್ ಸ್ಟಾರ್  ಅಂಬರೀಶ್ ನೆನೆದ ನಟ ಮುಖ್ಯಮಂತ್ರಿ ಚಂದ್ರು, ನಾಡು ನುಡಿ ಗಡಿ ವಿಚಾರದಲ್ಲಿ ಇಡೀ ಕನ್ನಡ ನಾಡನ್ನು ಡಾ. ರಾಜಕುಮಾರ್ ಒಂದುಗೂಡಿಸಿದ್ದರು. ಗೋಕಾಕ್ ಚಳುವಳಿಗೆ ಬಲ ತಂದು ಕೊಟ್ಟಿದ್ದೇ ಡಾ. ರಾಜಕುಮಾರ್. ಆನಂತರ ಅಂಬರೀಷ್ ಅವರ ಸ್ಥಾನವನ್ನು ತುಂಬಿದರು. ಅವರಿಬ್ಬರೂ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ನಾಡು ನುಡಿ ಗಡಿ ವಿಚಾರದಲ್ಲಿ ಚಲನಚಿತ್ರ ರಂಗದ ಎಲ್ಲ ದಿಗ್ಗಜ ನಟರು ಒಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

Key words: mysore- mukyamantri chandru-Kannada -not mandatory – state – conspiracy – officer-politicians.